ಕುಶಾಲನಗರ, ಡಿ. 30 : ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆ ಮೂಲಕ ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಹಿಡಿದು ತಂದು ಪಳಗಿಸುವ ಕಾರ್ಯದಲ್ಲಿ ತೊಡಗಿರುವ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರ ವಿಶ್ವಮಟ್ಟದ ಪ್ರವಾಸಿ ಕೇಂದ್ರವಾಗಿ ರೂಪುಗೊಂಡಿದೆ. ಆದರೆ ಆನೆಗಳ ಸಂಖ್ಯೆಯ ಒತ್ತಡ ಅಧಿಕಗೊಂಡು ಈ ಬಂಧಿತ ಆನೆಗಳ ಆಹಾರದ ಹೆಸರಿನಲ್ಲಿ ಅರಣ್ಯದಲ್ಲಿರುವ ಮರಗಳು ಮಾತ್ರ ನಾಶಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಸಾಕಾನೆಗಳು ಮರದ ತೊಗಟೆ, ಮರದ ಸೊಪ್ಪು ಬಳಸುವ ಮೂಲಕ ತಮ್ಮ ದೈನಂದಿನ ಆಹಾರಕ್ಕೆ ಮೊರೆ ಹೋಗಬೇಕಾಗಿದ್ದು ಶಿಬಿರದ ಸುತ್ತಮುತ್ತಲಿರುವ ನೂರಾರು ಸಂಖ್ಯೆಯ ಮರಗಳು ಮಾತ್ರ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ದೃಶ್ಯ ಗೋಚರಿಸಿದೆ. ಆನೆಗಳ ಆಹಾರದ ಹೆಸರಿನಲ್ಲಿ ಮರಗಳು ನಾಶ ವಾಗುತ್ತಿರುವ ದೃಶ್ಯ ದುಬಾರೆಯಲ್ಲಿ ಕಾಣಬಹುದು.ಕಾಡಿನಲ್ಲಿ ಸ್ವಚ್ಚಂದವಾಗಿ ತಿರುಗಾಡುತ್ತಾ ಹಾಯಾಗಿದ್ದ ಕಾಡಾನೆಗಳನ್ನು ಪಳಗಿಸಿ ಸಾಕಾನೆಗಳಾಗಿ ಪರಿವರ್ತನೆ ಗೊಳ್ಳುವುದರ ನಡುವೆ ದಿನನಿತ್ಯ ನೂರಾರ್ ಟನ್ಗಳಷ್ಟು ಪ್ರಮಾಣದ ಸೊಪ್ಪು ಮತ್ತಿತರ ಆಹಾರ ವಸ್ತುಗಳನ್ನು ನೀಡಬೇಕಾಗುತ್ತದೆ. ದುಬಾರೆ ಸಾಕಾನೆ ಶಿಬಿರದಲ್ಲಿ ಬಂಧಿತ ಆನೆಗಳ ಸಂಖ್ಯೆ ಕೂಡ ದಿನನಿತÀ್ಯ ಏರಿಕೆಯಾಗುತ್ತಿದ್ದು ಇದು ಅರಣ್ಯ ಇಲಾಖೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಕೊಡಗು ಜಿಲ್ಲೆಯ ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿರುವ ಆನೆಗಳ ಉಪಟಳವನ್ನು ಶಮನಗೊಳಿಸಲು ಅವುಗಳನ್ನು ಹಿಡಿದು ಶಿಬಿರಕ್ಕೆ ತರುವುದು ಒಂದೆಡೆಯಾದರೆ ಇನ್ನೊಂದೆಡೆ ನೆರೆಯ ಹಾಸನ, ಚಾಮರಾಜನಗರ ಭಾಗಗಳಲ್ಲಿ ಲಗ್ಗೆಯಿಡುತ್ತಿರುವ ಆನೆಗಳು ದುಬಾರೆ ಶಿಬಿರದ ಪಾಲಾಗುತ್ತಿವೆ. ಇವೆಲ್ಲದರ ನಡುವೆ ಕಾಡಾನೆಗಳನ್ನು (ಮೊದಲ ಪುಟದಿಂದ) ಸಾಕಲು ಸಿಬ್ಬಂದಿಗಳ ಕೊರತೆ, ಆಹಾರ ಸರಬರಾಜು ಸಮಸ್ಯೆ ಕೂಡ ಎದುರಾಗುತ್ತಿವೆ.
ಸಾಕಾನೆಗಳು ಮೇಯಲು ಬಿಡುವ ಸಂದರ್ಭ ಅವುಗಳು ಇಷ್ಟ ಪಡುವ ತೇಗದ ಮರದ ತೊಗಟೆಗಳನ್ನು ತಿನ್ನುವುದು, ಮರಗಳಿಗೆ ಮೈ ಉಜ್ಜುವುದು ಸಾಮಾನ್ಯ. ಇದರಿಂದ ಈ ಭಾಗದ ನೂರಾರು ಮರಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ನಾಶಗೊಳ್ಳುತ್ತಿರುವುದು ಇತ್ತೀಚಿನ ದೃಶ್ಯಗಳಾಗಿವೆ. ದುಬಾರೆ ಸಾಕಾನೆ ಶಿಬಿರದ ಒತ್ತಿನಲ್ಲಿರುವ ಸುಮಾರು 300 ಕ್ಕೂ ಅಧಿಕ ಮರಗಳು ನೆಲಕಚ್ಚಿರುವ ಪರಿಸ್ಥಿತಿಯಲ್ಲಿ ಇರುವುದು ಕಾಣಬಹುದು. ಇಡೀ ಪರಿಸರದಲ್ಲಿ ಬಹುತೇಕ ಮರಗಳು ಬೋಳಾಗುವುದರೊಂದಿಗೆ ಅರಣ್ಯ ನಾಶದ ದೃಶ್ಯ ಎದ್ದು ಕಾಣುತ್ತಿದೆ.
ಆನೆಗಳ ಸಂಖ್ಯೆಯ ಒತ್ತಡ ಜಾಸ್ತಿಯಾದ ಸಂದರ್ಭ ಅರಣ್ಯ ಇಲಾಖೆ ಜಿಲ್ಲೆಯ ಚಿಕ್ಲಿಹೊಳೆ ಜಲಾಶಯ ಬಳಿ ಎರಡನೇ ಆನೆ ಶಿಬಿರವೊಂದನ್ನು ಪ್ರಾರಂಭಿಸಲು ಕೂಡ ಕ್ರಿಯಾಯೋಜನೆ ರೂಪಿಸಿ ನಂತರ ಅದು ನೆನೆಗುದಿಗೆ ಬಿದ್ದಿದೆ. ಕೆಲವು ಸ್ವಾರ್ಥ ಹಿತಾಸಕ್ತಿಗಳ ಒತ್ತಡಗಳ ನಡುವೆ ಈ ಯೋಜನೆ ಕಾರ್ಯಗತವಾಗಿಲ್ಲ ಎನ್ನುವುದು ಇಲ್ಲಿನ ಜನರ ಆರೋಪವಾಗಿದೆ. ಕೆಲವು ವರ್ಷಗಳ ಹಿಂದೆ ಕುಶಾಲನಗರ ಸಮೀಪ ಹುದುಗೂರು ಬಳಿ ಸಾಕಾನೆಗಳ ಶಿಬಿರವೊಂದು ಕಾರ್ಯ ನಿರ್ವಹಿಸುತಿತ್ತು. ಕಾರಣಾಂತರಗಳಿಂದ ಸ್ಥಗಿತಗೊಂಡಿದೆ.
ಪ್ರಾರಂಭದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಆನೆಗಳ ಸಂಖ್ಯೆ ಮತ್ತೆ 30 ಕ್ಕೂ ಮೀರುತ್ತಿದೆ. ರಾಜ್ಯದ ಆನೆಗಳಿಗೆ ಇತರೆ ರಾಜ್ಯಗಳಿಂದ ಬೇಡಿಕೆಯಿರುವ ಹಿನ್ನಲೆಯಲ್ಲಿ ಕೆಲವು ಆನೆಗಳನ್ನು ಉತ್ತರ ಪ್ರದೇಶದ ರಾಜ್ಯಗಳಿಗೆ ಸ್ಥಳಾಂತರಗೊಳಿಸಲಾಗಿತ್ತು. ಇದೀಗ ಇತ್ತೀಚೆಗೆ ಚಾಮರಾಜನಗರ ಮತ್ತಿತರ ಕಡೆಗಳಿಂದ ಬಂದ ಮೂರು ತುಂಟ ಆನೆಗಳನ್ನು ಪಳಗಿಸುತ್ತಿರುವ ಕಾರ್ಯ ಮುಂದುವರೆದಿದೆ. ಇದರೊಂದಿಗೆ ದಿನನಿತ್ಯ ಆನೆಗಳ ಆಹಾರ ಹಾಗೂ ನಿರ್ವಹಣೆ ವೆಚ್ಚ ಪ್ರತಿದಿನ ತಿಂಗಳಿಗೆ ಅಂದಾಜು 5 ಲಕ್ಷ ರೂ.ಗಳಿಗೂ ಅಧಿಕ ಪ್ರಮಾಣದ್ದಾಗಿರುತ್ತದೆ. ಜೊತೆಗೆ ಮಾವುತ, ಕವಾಡಿಗರ ವೇತನ, ಸಾಕಾನೆಗಳಿಗೆ ವೈದ್ಯಕೀಯ ಸೌಲಭ್ಯ ಈ ರೀತಿ ಅಧಿಕಾರಿಗಳು ಹೇಗೋ ನಿಭಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಹಾಯಾಗಿದ್ದ ಕಾಡಾನೆಗಳನ್ನು ಸೆರೆಹಿಡಿದು ಇಲಾಖೆಯ ಬಂಧನದಲ್ಲಿಟ್ಟು ಅರಣ್ಯ ಇಲಾಖೆಗೆ ಹೊರೆಯಾಗಿರುವ ಸಾಕಾನೆಗಳು ಇತ್ತ ನಿರ್ವಹಣೆ ಮಾಡಲು ಸಾಧ್ಯವಾಗದೆ ಅತ್ತ ಕಾಡಿಗೆ ಬಿಡಲು ಸಾಧ್ಯವಾಗದೆ ತ್ರಿಶಂಕು ಸ್ಥಿತಿಯಲ್ಲಿದೆ. ಈ ನಡುವೆ ಕೆಲವು ಆನೆಗಳು ಮದ ಬಂದು ಕಾಡಿಗೆ ಹೋದರೆ ಹಿಂತಿರುಗದೆ ಇರುವುದು ಕೂಡ ಆಗಾಗ್ಗೆ ನಡೆಯುತ್ತಿದೆ. ಕಾಡಾನೆಗಳ ಸೆರೆ ಕಾರ್ಯಾಚರಣೆ ಯಿಂದ ಬೆಳೆಗಾರರು ಸಂತಸದಲ್ಲಿದ್ದರೆ ಇತ್ತ ಸಮಸ್ಯೆಗಳು ಮಾತ್ರ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಹೆಗಲೇರುವುದು ಸಾಮಾನ್ಯವಾಗಿದೆ.
ದುಬಾರೆ ಶಿಬಿರದಲ್ಲಿರುವ ಆನೆಗಳ ಸಂಖ್ಯೆಯ ಒತ್ತಡಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ಕಾರ್ಯ ಯೋಜನೆ ಯನ್ನು ಸರಕಾರ ರೂಪಿಸಬೇಕಾಗಿದ್ದು ಕೂಡಲೆ ಜಿಲ್ಲೆಯಲ್ಲಿ ಎರಡನೇ ಸಾಕಾನೆ ಶಿಬಿರ ನಿರ್ಮಾಣಕ್ಕೆ ಕಾಯಕಲ್ಪ ನೀಡುವುದರೊಂದಿಗೆ ಪರಿಸರ ಸಮತೋಲನವನ್ನು ಕಾಪಾಡಬೇಕಾಗಿದೆ.