ಮಡಿಕೇರಿ, ಡಿ. 30 : ಕೊಡಗು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಉಚಿತ ಆಯುರ್ವೇದ ಚಿಕಿತ್ಸೆ ಮತ್ತು ಪಂಚಕರ್ಮ ಶಿಬಿರವನ್ನು ಇಂದು ಮೇಕೇರಿಯಲ್ಲಿ ಆಯೋಜಿಸಲಾಗಿತ್ತು. 184 ಮಂದಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಮೇಕೇರಿಯ ಸತ್ಯಸಾಯಿ ಮಂದಿರದ ಆವರಣದಲ್ಲಿ ಜರುಗಿದ ಶಿಬಿರದಲ್ಲಿ ಸುಳ್ಯದ ಕೆವಿಜಿ ಆಯುರ್ವೇದ ಕಾಲೇಜಿನ ಹಾಗೂ ಆಸ್ಪತ್ರೆಯ ವೈದ್ಯರ ತಂಡ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಸೇವೆ ನೀಡಿದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಆಯುರ್ವೇದ ವೈದ್ಯರ ತಂಡ ಕೂಡ ರೋಗಿಗಳಿಗೆ ಔಷಧೋಪಚಾರ ನೀಡಿದರು.

ಆಯುಷ್ ಫೆಡರೇಷನ್ ಆಫ್ ಇಂಡಿಯಾದ (ನೀಮಾ)ದ ಕೊಡಗು ಜಿಲ್ಲಾ ಶಾಖೆಯ ವಾರ್ಷಿಕೋತ್ಸವ ಸಂದರ್ಭ ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಕೊಡಗು ಜಿಲ್ಲಾ ಸತ್ಯಸಾಯಿ ಸೇವಾ ಸಮಿತಿಯ ಸಹಯೋಗದಲ್ಲಿ ಇಂದು ಪೂರ್ವಾಹ್ನ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಿತು.

ಶಿಬಿರದಲ್ಲಿ ತಲೆ ನೋವು, ಶೀತ ಜ್ವರ, ಚರ್ಮವ್ಯಾಧಿ, ನಿದ್ರಾಹೀನತೆ, ಸೊಂಟ, ಕತ್ತು, ಬೆನ್ನು , ಗಂಟು ನೋವು, ಸಂಧಿವಾತ, ಆಮವಾತ, ಪಕ್ಷವಾತ, ಹೊಟ್ಟೆನೋವು, ತಲೆ, ಕಿವಿ, ಕಣ್ಣು ಮತ್ತು ಮೂಗಿನ ಸಮಸ್ಯೆಗಳು, ಮೊಡವೆ, ಸಂತಾನ ಹೀನತೆ, ಸ್ತ್ರೀ ರೋಗ, ಲೈಂಗಿಕ ಸಮಸ್ಯೆಗಳು, ಮಾನಸಿಕ ಖಿನ್ನತೆ, ಮೂಲವ್ಯಾಧಿ, ಬಗಂದಿರ, ಆಣಿ, ಕೆಡು, ಪಿಸ್ತೂಲ, ದೀರ್ಘ ಕಾಲದ ಹುಣ್ಣು, ಮೂಳೆ ಸವೆತ, ಕೂದಲು ಉದರುವಿಕೆ, ತಲೆ ಹೊಟ್ಟು, ಮೂತ್ರ ಕೋಶದಲ್ಲಿ ಕಲ್ಲು, ಮೂಳೆಮುರಿತ ಇತ್ಯಾದಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಯಿತು.

ಆಯುರ್ವೇದ ಕಾಲೇಜಿನ ಉಪನ್ಯಾಸಕರೂ ಆಗಿರುವ ಡಾ.ನಡಿಬೈಲು ಉದಯಶಂಕರ್, ನೀಮಾ ಅಧ್ಯಕ್ಷ ಡಾ. ರಾಜಾರಾಮ್, ಸತ್ಯಸಾಯಿ ಸಮಿತಿಯ ಅಧ್ಯಕ್ಷ ಸೋಮಣ್ಣ ಹಾಗೂ ಗಜಾರಾಜ್ ನಾಯ್ಡು, ಡಾ. ಉದಯಕುಮಾರ್ ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಸುಳ್ಯದ ವೈದ್ಯ ತಂಡದೊಂದಿಗೆ ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಸುಳ್ಯ ಕಾಲೇಜಿನ ವೈದ್ಯರಾದ ಡಾ. ವೇಣು, ಡಾ.ವಿನಯ್ ಕುಮಾರ್ ಅವರಗಳು ಶಿಬಿರದ ಮಹತ್ವದೊಂದಿಗೆ ಕೆವಿಜಿಯಲ್ಲಿ ರೋಗಿಗಳಿಗೆ ಲಭ್ಯವಿರುವ ಸೌಲಭ್ಯದ ಬಗ್ಗೆ ತಿಳಿಸಿದರು.

ಸಂಸ್ಥೆಯ ಪರವಾಗಿ ಡಾ. ರಾಜಾರಾಮ್ ಶ್ಲಾಘನೆಯ ನುಡಿ ಯಾಡಿದರು; ಡಾ. ಉದಯಶಂಕರ್, ಆಯುರ್ವೇದ ಔಷಧೋಪಚಾರದ ಮಹತ್ವ ತಿಳಿಸಿದರು. ಕೊಡಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಡಾ. ಆನಂದ್ ಅವರು ಸಮಾರೋಪ ಭಾಷಣ ಮಾಡುತ್ತಾ; ಆಯುರ್ವೇದದೊಂದಿಗೆ ಆಂಗ್ಲ ವೈದ್ಯ ಪದ್ಧತಿಯಿಂದ ರೋಗಿಗಳನ್ನು ಉಪಚರಿಸುವ ವೇಳೆ ಜಾಗರೂಕ ಹೆಜ್ಜೆಯನ್ನು ಇರಿಸಬೇಕಿದೆ ಎಂದು ನೆನಪಿಸಿದರು. ಪ್ರಸಕ್ತ ಸರ್ಕಾರದಿಂದ ಎಲ್ಲೆಡೆ ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಆಯುಷ್ ಚಿಕಿತ್ಸೆಗೆ ಮಹತ್ವ ಕಲ್ಪಿಸಿದ್ದು; ನಿರೀಕ್ಷೆಯಂತೆ ಆಯುರ್ವೇದ ಚಿಕಿತ್ಸೆ ಮಹತ್ವ ಕಂಡುಕೊಂಡಿಲ್ಲವೆಂದು ವಿಷಾದಿಸಿದರು.

ಡಾ. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಭಾಗವಹಿ ಸಿದ್ದ ವೈದ್ಯ ಸಿಬ್ಬಂದಿಗೆ ನೀಮಾದಿಂದ ಪ್ರಶಂಸ ಪತ್ರದೊಂದಿಗೆ ಅಧ್ಯಕ್ಷ ಡಾ. ರಾಜಾರಾಮ್ ತಂಡದಿಂದ ಗೌರವಿಸಲಾಯಿತು. ಸಮಾರಂಭದಲ್ಲಿ ಡಾ. ರಾಜಾರಾಮ್ ಶೆಟ್ಟಿ, ಡಾ. ಬಾಗೇಶ್, ಡಾ. ಪುರುಷೋತ್ತಮ್ ಮೊದಲಾದವರು ಭಾಗವಹಿಸಿದ್ದರು.