ಮಡಿಕೇರಿ, ಡಿ. 30: ದಕ್ಷಿಣ ಪ್ರಯಾಗವೆಂಬ ಖ್ಯಾತಿಯೊಂದಿಗೆ; ಸಪ್ತಸಿಂಧುವಿನೊಳು ಒಂದಾಗಿರುವ ಶ್ರೀ ಕಾವೇರಿಯ ಪ್ರಥಮ ಸಂಗಮ ಸ್ಥಳ ಭಾಗಮಂಡಲದಲ್ಲಿ ಮಠ ಸ್ಥಾಪಿಸುವ ಮೂಲಕ; ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸುವ ಹೊಂಗನಸನ್ನು ಉಡುಪಿ ಪೇಜಾವರ ಮಠಾಧೀಶರು ಹೊಂದಿದ್ದರು. ಆ ದಿಸೆಯಲ್ಲಿ ಅನೇಕ ವೇಳೆ ತಮ್ಮ ಶಿಷ್ಯರೊಂದಿಗೆ ಪ್ರಸ್ತಾಪಿಸಿದ್ದರು.
ಶ್ರೀ ವಿಶ್ವೇಶ ತೀರ್ಥ ಮಹಾಸ್ವಾಮೀಜಿ ಅವರ ಮನದಾಳದ ಇಂಗಿತವನ್ನು ತಿಳಿದು; ಭಾಗಮಂಡಲ ಮೂಲದ ಮಂಗಳೂರಿನ ಹೊಟೇಲ್ ಉದ್ಯಮಿ ಕೆ. ರಾಮಕೃಷ್ಣಾಚಾರ್ ಅವರು; ಮಠಕ್ಕೆ ಬೇಕಾದ ನಿವೇಶನವನ್ನು ಕೂಡ ಭಾಗಮಂಡಲ ಕಾಶಿಮಠದ ಎದುರು ಪೇಜಾವರ ಸಂಸ್ಥಾನಕ್ಕೆ ಕೊಡುಗೆಯಾಗಿ ಕಲ್ಪಿಸಲು ಮುಂದೆ ಬಂದಿದ್ದರು.
ಈ ನಿವೇಶನವನ್ನು ಕಳೆದ ಜುಲೈ ಮಾಸದಲ್ಲಿ ಶ್ರೀಗಳು ಖುದ್ದಾಗಿ ಭಾಗಮಂಡಲಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಭಾಗಮಂಡಲ ಸಂಗಮ ಸ್ನಾನದೊಂದಿಗೆ; ಈ ವೇಳೆ ಶ್ರೀ ಭಗಂಡೇಶ್ವರ ಹಾಗೂ ಶ್ರೀ ಮಹಾವಿಷ್ಣು ಸಹಿತ ಪರಿವಾರ ದೇವತೆಗಳಿಗೆ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದ್ದರು.
ಮನದಾಳದ ಇಂಗಿತ : ಈ ವೇಳೆ ಸನ್ನಿಧಿಯ ಅರ್ಚಕ ಬಳಗದ ಹರೀಶ್ ಭಟ್, ಹಿರಿಯರಾದ ಆನಂದತೀರ್ಥರು, ನಾರಾಯಣಚಾರ್ ಮೊದಲಾದವರೊಂದಿಗೆ ಮಠ ಸ್ಥಾಪನೆ ಕುರಿತು ಮನದಾಳದ ಇಂಗಿತವನ್ನು ಸ್ವಾಮೀಜಿ ವ್ಯಕ್ತಪಡಿಸಿದ್ದರು. ತಾವು 7ನೇ ವಯಸ್ಸಿನಲ್ಲಿ ರಾಮಕುಂಜದಿಂದ ಸನ್ಯಾಸಿಯಾಗಿ ಹೊರಟ ಬಳಿಕ; ಅವರ ಪೂರ್ವಾಶ್ರಮದ ತಂದೆ ನಾರಾಯಣಾಚಾರ್ಯ ಹಾಗೂ ತಾಯಿ ಕಮಲಮ್ಮ ದಂಪತಿ ಕೆಲವು ವರ್ಷಗಳ ಕಾಲ ಭಾಗಮಂಡಲಕ್ಕೆ ಬಂದು ನೆಲೆಸಿದ್ದನ್ನು ಸ್ಮರಿಸಿಕೊಂಡಿದ್ದರು.
ಶ್ರೀ ಭಗಂಡೇಶ್ವರ ಸನ್ನಿಧಿಯ ಅರ್ಚಕರಾಗಿ ತಂದೆ ನಾರಾಯಣಾಚಾರ್ಯ ಅವರು; 1948ರಿಂದ 1960ರ ಅವಧಿಗೆ ಪೂಜಾ ಸೇವೆ ನಿರ್ವಹಿಸಿರುವ ಕುರಿತು ನೆನಪಿಸುತ್ತಾ; ಆ ದಿಸೆಯಲ್ಲಿ ತಾವು ಈ ಪುಣ್ಯಕ್ಷೇತ್ರದಲ್ಲಿ ಸದ್ಭಕ್ತರ ಸೇವೆಗಾಗಿ ಶಾಖಾ ಮಠ ಸ್ಥಾಪಿಸಲು ಸಂಕಲ್ಪಿಸಿರುವದಾಗಿ ನುಡಿದಿದ್ದರು.
ಈಗಾಗಲೇ ಪ್ರಯಾಗ, ಹರಿದ್ವಾರ ಮುಂತಾದ ಪುಣ್ಯಕ್ಷೇತ್ರಗಳಲ್ಲಿ ಪೇಜಾವರ ಮಠದ ಶಾಖೆಗಳನ್ನು ಹೊಂದಿದ್ದು; ಕೊಡಗಿನ ಪುಣ್ಯ ಸನ್ನಿಧಿಯಲ್ಲಿ ಆದಷ್ಟು ಶೀಘ್ರ ಮಠ ಸ್ಥಾಪಿಸಿ; ದೂರದಿಂದ ಬರುವ ಭಕ್ತವೃಂದಕ್ಕೆ ವಸತಿ, ಪ್ರಸಾದ ಮುಂತಾದ ಉಚಿತ ಸೇವೆಯೊಂದಿಗೆ ಗೋಸದನ ನಿರ್ಮಿಸುವ ಆಶಯವನ್ನು ಪ್ರಮುಖರೊಂದಿಗೆ ಹಂಚಿಕೊಂಡಿ ದ್ದರು.
ಅಂತಿಮ ಭೇಟಿ : ಕಳೆದ ಅನೇಕ ದಶಕಗಳಿಂದ ಕೊಡಗು - ಮೈಸೂರು ಅಥವಾ ಮಂಗಳೂರು - ಮೈಸೂರು ಮಾರ್ಗದ ಪ್ರಯಾಣ ಕಾಲದಲ್ಲಿ ಶ್ರೀಗಳು ಭಗಂಡೇಶ್ವರ ಕ್ಷೇತ್ರದಲ್ಲಿ ಪೂಜಾ ಸೇವೆಗಳನ್ನು ನಡೆಸಿಯೇ ತೆರಳುತ್ತಿದ್ದುದ್ದಾಗಿ ಅವರ ಶಿಷ್ಯವೃಂದ ನೆನಪಿಸಿಕೊಂಡಿದ್ದಾರೆ. ಅದೇ ರೀತಿ ಕಳೆದ ಜುಲೈ 23 ರಂದು ಶ್ರೀಗಳು ಕಾವೇರಿ ಸಂಗಮ ಕ್ಷೇತ್ರಕ್ಕೆ ತಮ್ಮ ಅಂತಿಮ ಭೇಟಿಯೊಂದಿಗೆ ಶಾಖಾಮಠ ಸ್ಥಾಪನೆಯ ಕನಸು ಬಿಚ್ಚಿಟ್ಟಿದ್ದರು.
ಅರ್ಚಕ ವೃಂದ ದುಃಖ: ಬಹುಶಃ ಜುಲೈ ತಿಂಗಳಿನಲ್ಲಿ ಭಾಗಮಂಡಲ ಕ್ಷೇತ್ರದಲ್ಲಿ ಭಗವಂತನ ಪೂಜೆ ಕೈಗೊಂಡಿದ್ದ ಪೇಜಾವರ ಮಠಾಧೀಶರು; ಪಾದಪೂಜೆ ಕೂಡ ಸ್ವೀಕರಿಸಿ ತಮ್ಮೊಂದಿಗೆ ಪ್ರೀತಿ ವಾತ್ಸಲ್ಯದಿಂದ ಮಾತನಾಡಿಸಿ ತೆರಳಿದ್ದು; ಇದು ಕಾವೇರಿ ನಾಡಿಗೆ ಕೊನೆಯ ಭೇಟಿಯೆಂದು ಊಹಿಸಿರಲಿಲ್ಲ ಎಂದು ಅರ್ಚಕವೃಂದ ‘ಶಕ್ತಿ’ಯೊಂದಿಗೆ ದುಃಖ ತೋಡಿಕೊಂಡಿದೆ.
ಪೇಜಾವರ ಶ್ರೀ ವಿಶ್ವೇಶತೀರ್ಥ ಮಹಾ ಸ್ವಾಮೀಜಿ ಅವರು; ಅಂದು ಕ್ಷೇತ್ರದಲ್ಲಿದ್ದ ಕ್ಷಣವನ್ನು ನೆನಪಿಸಿಕೊಂಡಿ ರುವ ಸನ್ನಿಧಿ ಅರ್ಚಕ ಬಳಗದ ಹರೀಶ್‍ಭಟ್ ಹಾಗೂ ನಾರಾಯಣಾಚಾರ್; ಕೊಡಗಿನ ಭಕ್ತವೃಂದ ಅವರ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸ ಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಆ ಮುಖಾಂತರ ಈ ಸಂತ ಶ್ರೇಷ್ಠರಿಗೆ ಗೌರವ ಸಮರ್ಪಣೆ ನೀಡಿದಂತಾಗ ಲಿದೆ ಎಂದು ‘ಶಕ್ತಿ’ಯೊಂದಿಗೆ ಭಾವುಕ ನುಡಿಯಾಡಿದ್ದಾರೆ.
- ಚಿತ್ರ: ಹರೀಶ್ ಭಟ್