ಕುಶಾಲನಗರ, ಡಿ. 30 : ವಿಶ್ವ ಗುರು, ಸಾಮಾಜಿಕ ಸಂತ ಪೇಜಾವರ ಶ್ರೀಗಳು ದೈವಾಧೀನರಾದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಭಾನುವಾರ ಶ್ರದ್ಧಾಂಜಲಿ ಹಮ್ಮಿಕೊಳ್ಳಲಾಗಿತ್ತು. ವಚನ ಸಾಹಿತ್ಯ ಪರಿಷತ್ತು ವತಿಯಿಂದ ಗಣಪತಿ ದೇವಾಲಯದ ಮುಂಬದಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣ್ಯರಿಂದ ಶ್ರೀಗಳ ಭಾವ ಚಿತ್ರಕ್ಕೆ ಪುಷ್ಪನಮನಗೈದು ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪುರಪ್ರಮುಖರಾದ ಎಸ್.ಎನ್. ನರಸಿಂಹಮೂರ್ತಿ, ಪೇಜಾವರ ಶ್ರೀಗಳು ಈ ನಾಡು ಕಂಡ ಮಹಾನ್ ಸಂತರಾಗಿದ್ದರು. ತಮ್ಮ ಜೀವಿತಾವಧಿಯ ಉದ್ದಕ್ಕೂ ಸಾಮಾಜಿಕ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದರು. ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದರು.

ಹೊಟೇಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿದರು. ಕುಶಾಲನಗರ ಬ್ರಾಹ್ಮಣ ಸಮಾಜದ ಅಧ್ಯಕ್ಷ ವಿಜೇಂದ್ರ, ಪಂಚಾಯಿತಿ ಮಾಜಿ ಸದಸ್ಯ ಎಂ.ವಿ.ನಾರಾಯಣ, ಉದ್ಯಮಿ ಎನ್.ಕೆ.ಮೋಹನಕುಮಾರ್, ಸುಧೀಶ್, ಉಪನ್ಯಾಸಕ ಮಹೇಶ್, ನಿವೃತ್ತ ಪೋಲೀಸ್ ಅಧಿಕಾರಿ ಪ್ರಕಾಶ್, ಅಬಕಾರಿ ಇಲಾಖೆಯ ಕಾಳಪ್ಪ, ಪ್ರಮುಖರಾದ ಕೆಂಚಪ್ಪ, ಪಿ.ಪಿ.ಸತ್ಯನಾರಾಯಣ, ಎಚ್.ಎಸ್.ವೆಂಕಟೇಶ್, ನಟರಾಜು, ಯೋಗಾನಂದ, ಅನಿಲ್‍ಕುಮಾರ್, ಶ್ರೀಹರ್ಷ ಮೊದಲಾದವರಿದ್ದರು.

ಅಂಗಡಿ ಮುಚ್ಚಿ ಸಂತಾಪ

ಸಿದ್ದಾಪುರ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ನೆಲ್ಯಹುದಿಕೇರಿಯಲ್ಲಿ ವರ್ತಕರು ಅಂಗಡಿ ಬಂದ್ ಮಾಡಿ ಸಂತಾಪ ಸೂಚಿಸಿದರು.

ನೆಲ್ಯಹುದಿಕೇರಿ ಪಟ್ಟಣದ ವರ್ತಕರು ಮಧ್ಯಾಹ್ನ ವೇಳೆ ಒಂದು ಗಂಟೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದು, ನೆಲ್ಯಹುದಿಕೇರಿ ಮುತ್ತಪ್ಪ ದೇವಾಲಯದಲ್ಲಿ ಯುವ ಬ್ರಿಗೇಡ್ ವತಿಯಿಂದ ಶ್ರೀಗಳ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತ್ತು. ಸಿದ್ದಾಪುರ ಪಟ್ಟಣದ ಕೆಲವು ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ, ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಸೋಮೇಶ್ವರ ದೇವಾಲಯದಲ್ಲಿ

ಸೋಮವಾರಪೇಟೆ: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ನಡೆಯಿತು.

ಸೋಮೇಶ್ವರ ದೇವಾಲಯ ನಿರ್ಮಾಣದಲ್ಲಿ ಪೇಜಾವರ ಶ್ರೀಗಳು ಸಹಕಾರ ನೀಡಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲಾ ಮೈಗೂಡಿಸಿಕೊಳ್ಳಬೇಕು ಎಂದು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಹೇಳಿದರು.

ಕಾರ್ಯದರ್ಶಿ ಎಸ್.ಡಿ.ವಿಜೇತ್, ಖಜಾಂಚಿ ಶ್ಯಾಂಸುಂದರ್, ಯಡೂರು ಹರೀಶ್, ಜಿ.ಜಯಂತ್, ಮಧುಸೂದನ್, ನಂದನ, ಸೋಮಶೇಖರ್ ಅವರುಗಳು ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.