ಮಡಿಕೇರಿ, ಡಿ. 28: ಕರ್ನಾಟಕ ರಾಜ್ಯ ಸರಕಾರವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ 100 ದಿನಗಳನ್ನು ಪೂರೈಸಿದ್ದು; ಈ ದಿಸೆಯಲ್ಲಿ ಸರಕಾರದ ಸಾಧನೆಯೊಂದಿಗೆ ಜನಪರ ಯೋಜನೆಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರದರ್ಶಿಸಲಾಯಿತು. ಇಲ್ಲಿನ ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ ಸರಕಾರದ ಸಾಧನೆಯ ನೋಟದ ಭಿತ್ತಿಪತ್ರ ಪ್ರದರ್ಶನ ದೊಂದಿಗೆ; ಕೈಪಿಡಿ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ವಿ. ಸ್ನೇಹಾ ಅವರು; ಜಿಲ್ಲೆಯ ಜನತೆ ಜನಪರ ಯೋಜನೆಗಳನ್ನು ಓದಿ ತಿಳಿದುಕೊಂಡು; ಸವಲತ್ತುಗಳನ್ನು ಹೊಂದಿಕೊಳ್ಳುವಂತೆ ಕರೆ ನೀಡಿದರು.

ಮಡಿಕೇರಿ ಪೊಲೀಸ್ ಉಪವಿಭಾಗದ ಡಿವೈಎಸ್‍ಪಿ ಬಿ.ಪಿ. ದಿನೇಶ್‍ಕುಮಾರ್ ಹಾಗೂ ವಾರ್ತಾಧಿಕಾರಿ ಚಿನ್ನಸ್ವಾಮಿ, ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್, ಪತ್ರಕರ್ತರ ಸಂಘದ ಕಾರ್ಯದರ್ಶಿ ಅನುಕಾರ್ಯಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಪ್ರದರ್ಶನ ವೀಕ್ಷಿಸಿ ಅಭಿಪ್ರಾಯ ನೀಡಿದ ಪ್ರಮುಖರು; ಸರಕಾರದ ಯೋಜನೆಗಳು ಶ್ಲಾಘನೀಯ ಎಂದರಲ್ಲದೆ; ಕೊಡಗಿನಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿರುವ ಪ್ರಾಕೃತಿಕ ಹಾನಿಯಿಂದ ಸಂತ್ರಸ್ತರಾದವರಿಗೆ ಇಂದಿಗೂ ವಸತಿ ಸೌಲಭ್ಯದೊಂದಿಗೆ; ರೈತರಿಗೆ ಸೂಕ್ತ ಪರಿಹಾರ ಲಭಿಸದಿರುವ ಬಗ್ಗೆ ಉಲ್ಲೇಖಿಸಿ; ಸರಕಾರ ಈ ದಿಸೆಯಲ್ಲಿ ತುರ್ತು ಸ್ಪಂದಿಸುವಂತೆ ಗಮನ ಸೆಳೆದರು.

ಅಪೂರ್ಣ ಕಾಮಗಾರಿ ಹಂತದ ಕೊಡವ ಹೆರಿಟೇಜ್, ಕನ್ನಡ ಸಂಸ್ಕøತಿ ಕಲಾಭವನ, ಪ್ರವಾಸಿ ತಾಣಗಳ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಿ; ಪ್ರವಾಸಿಗರೊಂದಿಗೆ ಕೊಡಗಿನ ಜನತೆಗೆ ಅಗತ್ಯ ಸೌಲಭ್ಯ ಒದಗಿಸಲು ಸಲಹೆ ನೀಡಿದರು. ಈ ದಿಸೆಯಲ್ಲಿ ಕೊಡಗು ಜಿಲ್ಲೆಗೆ ಸರಕಾರದಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಜನಪ್ರತಿನಿಧಿಗಳು ಒತ್ತಡ ಹಾಕಬೇಕೆಂದು ಅಭಿಪ್ರಾಯಪಟ್ಟರು. ವಾರ್ತಾಧಿಕಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.