ಸೋಮವಾರಪೇಟೆ, ಡಿ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶಾಂತಳ್ಳಿ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ತಾ. 30 ರಂದು ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತ ಭವನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟದ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಯೋಜನೆಯ ಮೇಲ್ವಿಚಾರಕ ಸುಬ್ರಮಣ್ಯ ತಿಳಿಸಿದ್ದಾರೆ.
ತಾ. 30 ರಂದು ಬೆಳಿಗ್ಗೆ 8 ಗಂಟೆಗೆ ಅರ್ಚಕ ಸುಬ್ಬುರಾವ್ ಅವರ ಪೌರೋಹಿತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಪ್ರಾರಂಭಗೊಳ್ಳಲಿದ್ದು, 11 ಗಂಟೆಗೆ ಮಹಾಮಂಗಳಾರತಿ, 11.15ಕ್ಕೆ ಒಕ್ಕೂಟಗಳ ಪದಗ್ರಹಣ ಸಮಾರಂಭ, ನಂತರ ಅನ್ನದಾನ ನಡೆಯಲಿದೆ.
ಸಮಾರಂಭವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಚೌಡ್ಲು ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಅಧ್ಯಕ್ಷತೆ ವಹಿಸಲಿದ್ದು, ಯೋಜನಾಧಿಕಾರಿ ವೈ. ಪ್ರಕಾಶ್ ಅವರು ನೂತನ ಸಾಲಿನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಲಿದ್ದಾರೆ.