ಗೋಣಿಕೊಪ್ಪಲು, ಡಿ.28: ಕಳೆದ 5 ದಿನಗಳಿಂದ ನಡೆಯುತ್ತಿದ್ದ ನಾಗರಿಕರ ಬಂದೂಕು ಶಿಬಿರಕ್ಕೆ ತೆರೆ ಎಳೆಯಲಾಯಿತು. ದ.ಕೊಡಗಿನ ಗೋಣಿಕೊಪ್ಪ, ಪೊನ್ನಂಪೇಟೆ, ಹಾತೂರು, ಪಡಿಕಲ್, ಹುದಿಕೇರಿ, ಟಿ.ಶೆಟ್ಟಿಗೇರಿ, ಮಾಯಮುಡಿ, ತಿತಿಮತಿ, ಭಾಗದಿಂದ ಆಗಮಿಸಿದ ಮಹಿಳೆಯರು ಸೇರಿದಂತೆ 61 ಮಂದಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಬಿಳಿ ಪ್ಯಾಂಟ್,ಟಿಶರ್ಟ್, ಸಮವಸ್ತ್ರ ಧರಿಸಿ ಮುಂಜಾನೆಯ 6 ಗಂಟೆ ಸುಮಾರಿಗೆ ಆಗಮಿಸುತ್ತಿದ್ದ ತರಬೇತಿದಾರರು ಬಂದೂಕು ಶಿಬಿರದ ಪ್ರಯೋಜನ ಪಡೆದರು.

ಪೊಲೀಸ್ ಇಲಾಖೆ ವತಿಯಿಂದ ಆಯೋಜನೆಗೊಂಡಿದ್ದ ಶಿಬಿರದಲ್ಲಿ ಅಂತಿಮ ದಿನದಂದು ಕಾವೇರಿ ಕಾಲೇಜಿನ ಮೈದಾನದಲ್ಲಿ ಬಂದೂಕು ಸಿಡಿಸುವ ತರಬೇತಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು. 5 ದಿನಗಳ ಬಂದೂಕು ತರಬೇತಿ ಶಿಬಿರದಲ್ಲಿ ಆಧುನಿಕ ರೈಫಲ್‍ಗಳು ಸೇರಿದಂತೆ ಹಲವು ಬಗೆಯ ಬಂದೂಕುಗಳನ್ನು ಕೈಯಲ್ಲಿ ಹಿಡಿದು ತಾಲೀಮು ನಡೆಸಿ ಗುರಿ ಇಟ್ಟು ಬಂದೂಕು ಗುಂಡುಗಳನ್ನು ಸಿಡಿಸಿ ಅರ್ಹತ ಸುತ್ತು ಪ್ರವೇಶಿಸಿದರು. ಸುತ್ತಿನಲ್ಲಿ ಯಶಸ್ವಿಯಾದವರಿಗೆ ಪೊಲೀಸ್ ಇಲಾಖೆ ವತಿಯಿಂದ ಗೋಣಿಕೊಪ್ಪ ಪ್ರಕಾಶ್ ಇಂಟರ್ ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಪ್ರಶಂಸ ಪತ್ರ ವಿತರಿಸಿದರು.

ಬಂದೂಕು ಶಿಬಿರದ ಜವಾಬ್ದಾರಿ ನಿರ್ವಹಣೆ ಮಾಡಿದ ಪೊಲೀಸ್ ಇಲಾಖೆಯ ತರಬೇತಿದಾರ ಹಾಗೂ ಸಹಾಯಕ ಉಪ ನಿರೀಕ್ಷಕರಾದ ಎಸ್.ಕೆ. ವೆಂಕಪ್ಪ ತರಬೇತಿದಾರರನ್ನು ಉದ್ದೇಶಿಸಿ ಮಾತನಾಡಿ ಇಲಾಖೆ ವತಿಯಿಂದ ನೀಡಿದ ನಾಗರಿಕ ಬಂದೂಕು ಶಿಬಿರದ ಪ್ರಯೋಜನವನ್ನು ದ.ಕೊಡಗಿನ ವಿವಿಧ ಭಾಗದ ಜನತೆ ಪಡೆದಿದ್ದಾರೆ. ಅತ್ಯಂತ ಉತ್ಸುಕರಾಗಿ ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡು ಬಂದೂಕಿನ ತರಬೇತಿ ಪಡೆದು ಬಂದೂಕಿಗಿರುವ ಗೌರವವನ್ನು ಇನ್ನಷ್ಟು ಹೆಚ್ಚು ಮಾಡಿದ್ದಾರೆ. ನಿರೀಕ್ಷೆಗೂ ಮೀರಿ ತರಬೇತಿ ಯಶಸ್ವಿಗೊಂಡಿದೆ ಎಂದರು

ಮಡಿಕೇರಿ ಶಸಸ್ತ್ರ ದಳದ ಸಿ.ಪಿ.ಐ ರಾಚಯ್ಯ ಮಾತನಾಡಿ, ಮುಂದೆಯೂ ಇಂತಹ ಶಿಬಿರಗಳನ್ನು ಇಲಾಖೆ ವತಿಯಿಂದ ಆಯೋಜಿಸಲಾಗುವುದು ಎಂದರು. ತರಬೇತಿಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ ಪುರುಷರ ವಿಭಾಗದಲ್ಲಿ ರೋಹಿತ್ ಬಿ.ಎಲ್. (ಪ್ರ), ಮುತ್ತಣ್ಣ ಕೆ.ವಿ. (ದ್ವಿ), ಪ್ರಸನ್ನ ಡಿ.ಎಸ್. (ತೃ), ಮಹಿಳೆಯರ ವಿಭಾಗದಲ್ಲಿ ಜಿ.ಟಿ.ಚೈತ್ರ (ಪ್ರ), ಮಂಜುಳದೇವಿ ವಿ.ಇ. (ದ್ವಿ), ಐನಂಡ ಭಾರತಿ ಬೋಪಣ್ಣ (ತೃ) ಬಹುಮಾನಗಳನ್ನು ಪಡೆದರು. ಹಿರಿಯ ಪೊಲೀಸ್ ಅಧಿಕಾರಿಗಳು ಬಹುಮಾನ ವಿತರಿಸಿದರು. ಉಳಿದ ಶಿಬಿರಾರ್ಥಿಗಳಿಗೆ ಪ್ರಶಂಸ ಪತ್ರ ವಿತರಿಸಲಾಯಿತು.

ಸಮರೋಪ ಸಮಾರಂಭದಲ್ಲಿ ಮಡಿಕೇರಿ ಶಸಸ್ತ್ರ ದಳದ ಸಿ.ಪಿ.ಐ ರಾಚಯ್ಯ ಅಧ್ಯಕ್ಷತೆ ವಹಿಸಿದ್ದ ಸಭಾ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಡಿವೈಎಸ್ಪಿ ಜಯಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಎನ್.ಎನ್.ರಾಮರೆಡ್ಡಿ, ವೀರಾಜಪೇಟೆ ವೃತ್ತ ನಿರೀಕ್ಷಕ ಕ್ಯಾತೆಗೌಡ, ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ, ತರಭೇತಿದಾರ ಹಾಗೂ ಸಹಾಯಕ ಉಪ ನಿರೀಕ್ಷಕ ಎಸ್.ಕೆ.ವೆಂಕಪ್ಪ, ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡು ಮಾತನಾಡಿದರು. ಐದು ದಿನಗಳ ಕಾಲ ಉತ್ತಮ ತರಬೇತಿ ನೀಡಿದ ತರಬೇತಿದಾರ ಹಾಗೂ ಸಹಾಯಕ ಉಪ ನಿರೀಕ್ಷಕ ಎಸ್.ಕೆ. ವೆಂಕಪ್ಪರವರನ್ನು ಶಿಬಿರಾರ್ಥಿಗಳು ಗೌರವಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಾದ ಮೂಡಗದ್ದೆ ವಿಕ್ರಂ, ಮನೋಜ್ ಕುಮಾರ್, ಶರತ್ ಕಾಂತ್, ಅಶೋಕ್, ನಾರಾಯಣ ಸ್ವಾಮಿ ನಾಯ್ಡು, ರಕ್ಷಿತ್ ಕೆ.ವಿ., ಆದಿತ್ಯ ಬಿ.ಎಲ್., ಜ್ಯೋತಿ ಹೆಚ್.ಕೆ. ಹಿತ, ಎ.ಬಿ. ಆರತಿ ಎ.ಬಿ., ಚೈತ್ರ, ಅನೀಲ್ ಅಭಿಪ್ರಾಯ ಮಂಡಿಸಿದರು. ಮೂಡಗದ್ದೆ ಆರ್. ಸುಮನ್ ಸ್ವಾಗತಿಸಿ, ನಿರೂಪಿಸಿ, ಸುಜಿತ್ ಡಿ. ವಂದಿಸಿದರು.