ಸೋಮವಾರಪೇಟೆ, ಡಿ. 28: ಸಮೀಪದ ಕಲ್ಕಂದೂರು ಶ್ರೀ ಶಾಸ್ತ ಯುವಕ ಸಂಘದ ವತಿಯಿಂದ ಜನವರಿ 1 ರಂದು ಕೂಡುರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ 4ನೇ ವರ್ಷದ ಅಯ್ಯಪ್ಪಸ್ವಾಮಿ ಮಂಡಲಪೂಜೋತ್ಸವ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಲೋಕೇಶ್ ತಿಳಿಸಿದ್ದಾರೆ.
ಜ. 1 ರಂದು ಬೆಳಿಗ್ಗೆ 6.30 ರಿಂದ ಕಲ್ಕಂದೂರು ಗ್ರಾಮದೇವತೆ ಹಾಗೂ ವನ ದೇವತೆಗೆ ಪೂಜೆ ಸಲ್ಲಿಸಲಾಗುವದು, ಬೆಳಿಗ್ಗೆ 9 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಗಣಪತಿ ಹೋಮ, ವಿಶೇಷ ಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನದಾನ, ಸಂಜೆ 3.30 ರಿಂದ 4 ಗಂಟೆಯವರೆಗೆ ಅಯ್ಯಪ್ಪಸ್ವಾಮಿ ಭಾವಚಿತ್ರವನ್ನು ಚಂಡೆ ಮದ್ದಳೆ, ಯಡೂರು ಗ್ರಾಮಸ್ಥರಿಂದ ಕಳಸ ಮೆರವಣಿಗೆ ಮೂಲಕ ಯಡೂರು ಸೋಮೇಶ್ವರ ದೇವಾಲಯದಿಂದ ಕೂಡುರಸ್ತೆಯವರೆಗೆ ಮೆರವಣಿಗೆ ನಡೆಸಲಾಗುವದು.
ಸಂಜೆ 6 ಗಂಟೆಯಿಂದ ಕಲ್ಕಂದೂರು ಗ್ರಾಮದ ಮಹದೇಶ್ವರ ದೇವಾಲಯದಿಂದ ಊರಿನ ಪ್ರಮುಖ ರಸ್ತೆಯಲ್ಲಿ ಕಳಸ ದೀಪಾರತಿಯೊಂದಿಗೆ ಮೆರವಣಿಗೆ, ನಂತರ ಮಂಡಲ ಪೂಜೋತ್ಸವ, ಮಹಾಮಂಗಳಾರತಿ, ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ಲೋಕೇಶ್ ಮಾಹಿತಿ ನೀಡಿದ್ದಾರೆ.