ಮಡಿಕೇರಿ, ಡಿ. 28 : ಕೊಡವರನ್ನು ಬುಡಕಟ್ಟು ಜನಾಂಗವೆಂದು ಪರಿಗಣಿಸಬೇಕೆಂಬ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆಯ ಬೇಡಿಕೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕ, ಇದರಿಂದ ಕೊಡಗಿನಲ್ಲಿ ಈಗಾಗಲೇ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಆದಿವಾಸಿ ಜನಾಂಗಗಳ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ವೈ.ಕೆ.ಗಣೇಶ್ ಕೊಡವರ ಮೂಲದ ಬಗ್ಗೆ ಅಧ್ಯಯನ ಮಾಡಿರುವ ಕೊಡವ ತಜ್ಞರೇ ಕೊಡವರು ಕೊಡಗಿನ ಮೂಲ ನಿವಾಸಿಗಳಲ್ಲ. ಅವರು ಕೊಡಗಿನ ಭೂ ಪ್ರದೇಶದಿಂದ ಹೊರಗಿನಿಂದ ಬಂದವರು ಮತ್ತು ಇಲ್ಲಿನ ದಟ್ಟವಾದ ಕಾಡು ಪ್ರದೇಶದಲ್ಲಿ ಮೊದಲೇ ನೆಲೆಸಿದ್ದ ಮೂಲನಿವಾಸಿಗಳೊಂದಿಗೆ ಬೆರೆತು ಜೀವಿಸಲಾರಂಭಿಸಿದ ನಂತರ ಇಲ್ಲಿನ ಭೌಗೋಳಿಕ ಸನ್ನಿವೇಶಕ್ಕೆ ಅನುಗುಣವಾಗಿ ಇಲ್ಲಿನ ಮೂಲನಿವಾಸಿ ಗಳೊಂದಿಗೆ ಬೆರೆತು ಅವರ ಜೀವನ ಕ್ರಮವನ್ನು ರೂಢಿಸಿ ಕೊಂಡವರು ಎಂಬದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಕೊಡವರನ್ನು ಬುಡಕಟ್ಟು ಜನಾಂಗದ ಪಟ್ಟಿಗೆ ಸೇರಿಸಬೇಕೆನ್ನುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಕೊಡವ ಭಾಷೆಯನ್ನಾಡುವ 18 ಜನಾಂಗಗಳಿದ್ದು ಅವರಲ್ಲಿ ಒಂದು ವಿಭಾಗದವರಾದ ಕೊಡವರು ಇತರ ಕೊಡವ ಭಾಷಿಗರಿಗಿಂತ ಆರ್ಥಿಕ ವಾಗಿಯೂ, ಸಾಮಾಜಿಕವಾಗಿಯೂ, ಸಾಂಸ್ಕøತಿಕ ವಾಗಿಯೂ ಶ್ರೀಮಂತರಾಗಿದ್ದಾರೆ. ಉಳಿದ ಜನಾಂಗದವರು ದುರ್ಬಲ ರಾಗಿದ್ದು, ಬಹುತೇಕ ಮಂದಿ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕೊಡಗಿನಲ್ಲಿ ಕೆಂಬಟ್ಟಿ ಜನಾಂಗದವರು ಆರ್ಥಿಕವಾಗಿ ದುರ್ಬಲರಾಗಿದ್ದು, ತಮ್ಮನ್ನು ಬುಡಕಟ್ಟು ವಿಭಾಗಕ್ಕೆ ಸೇರಿಸಬೇಕೆಂದು ಬಹುಕಾಲದಿಂದ ಬೇಡಿಕೆ ಇಟ್ಟಿದ್ದರೂ ಅವರ ಬೇಡಿಕೆ ಈಡೇರಿಲ್ಲ. ಹೀಗಿರುವಾಗ ಕೊಡವರನ್ನು ಬುಡಕಟ್ಟು ಜನರೆಂದು ಪರಿಗಣಿಸುವು ದಾದರೆ, ಉಳಿದ ಕೊಡವ ಭಾಷಿಗರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಲದೆ ಅವರನ್ನು ಬುಡಕಟ್ಟು ಪಟ್ಟಿಗೆ ಸೇರಿಸುವುದರಿಂದ ಈಗಾಗಲೇ ಜಿಲ್ಲೆಯಲ್ಲಿರುವ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸುವ ಬದಲು ಅವರ ವಿವಿಧ ಬೇಡಿಕೆಗಳ ಬಗ್ಗೆ ಸರಕಾರಗಳು ಗಮನಹರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಈ ಬೇಡಿಕೆ ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೊಡಗಿನ ಎಲ್ಲಾ ಆದಿವಾಸಿ ಸಂಘಟನೆಗಳ ಸಭೆ ಕರೆದು ಚರ್ಚಿಸುವುದರೊಂದಿಗೆ ಹೋರಾಟಕ್ಕೆ ಅಣಿಯಾಗುವುದಾಗಿ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಪಿ.ಜೆ.ಅಶೋಕ, ಉಪಾಧ್ಯಕ್ಷ ಚಂದ್ರ ಹಾಗೂ ಉಪ ಕಾರ್ಯದರ್ಶಿ ಜೆ.ಕೆ.ಪ್ರೇಮಾ ಉಪಸ್ಥಿತರಿದ್ದರು.