ವೀರಾಜಪೇಟೆ, ಡಿ. 28: ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರತಿಭೆಗಳಿಗೆ ಕ್ರೀಡಾ ಪ್ರದರ್ಶನಕ್ಕೆ ವೇದಿಕೆ ನೀಡುವ ನಿಟ್ಟಿನಲ್ಲಿ ಅಯೋಜಿಸಲಾಗಿರುವ ವೀರಾಜಪೇಟೆ ಪ್ರೀಮಿಯರ್ ಕ್ರಿಕೆಟ್ ಲೀಗ್ ತಾ. 29ರಂದು (ಇಂದು) ನಡೆಯಲಿರುವ ಅಂತಿಮ ಪಂದ್ಯಾಟದೊಂದಿಗೆ ಹಲವು ಮನೋರಂಜನೆಗಳೊಂದಿಗೆ ಮುಕ್ತಾಯಗೊಳ್ಳಲಿದೆ.
ವೀರಾಜಪೇಟೆ ನಗರದ ಯೂತ್ ಫ್ರೆಂಡ್ಸ್ ಅಯೋಜಕತ್ವದಲ್ಲಿ ತಾ.24ರಂದು ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಐದು ದಿನಗಳ ಕಾಲ ಹಲವು ರೋಚಕ ಪಂದ್ಯಾಟದೊಂದಿಗೆ ನಡೆದು ಇಂದು ಅಂತಿಮ ತೆರೆ ಕಾಣಲಿದೆ. ಫೈನಲ್ ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಅಂತರ್ ರಾಷ್ಟ್ರೀಯ ಅಥ್ಲಿಟ್ ತೀತಿಮಾಡ ಅರ್ಜುನ್ ದೇವಯ್ಯ, ಬೆಂಗಳೂರಿನ ಟೀಂ ರೋಲೋ ಸ್ಕೇಟಿಂಗ್ ಅಕಾಡೆಮಿ ಅಧ್ಯಕ್ಷ ಮುಕ್ಕಾಟೀರ ಎಸ್, ಪೂವಯ್ಯ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಂತರ್ ರಾಷ್ಟ್ರೀಯ ಸ್ಕೇಟಿಂಗ್ ಪಟು ಜಮುನ ಪೂವಯ್ಯ, ಕ್ರೇಡೊ ಮೆಡಿಕಲ್ ಸೆಂಟರ್ ಸ್ಥಾಪಕ ಕಟ್ಟೇರ ಪೂಣಚ್ಚ, ಉದ್ಯಮಿ ಬಿ.ಜೆ. ಬೋಪಣ್ಣ, ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್ ಪದ್ಮನಾಭ ಮತ್ತು ಮೊಹಮ್ಮದ್ ರಾಫಿ, ಉದ್ಯಮಿಗಳಾದ ಮೊಹೀನ್, ಜೆ.ಡಿ.ಎಸ್ ನಗರ ಅಧ್ಯಕ್ಷ ಪಿ.ಎ. ಮಂಜುನಾಥ್, ಪ್ರವೀಣ್ ಮುಂತಾದವರು ಅಗಮಿಸಲಿದ್ದಾರೆ. ವಿಜೇತ ತಂಡಕ್ಕೆ ಟ್ರೋಫಿ ಮತ್ತು ನಗದು, ಪರಾಜಿತ ತಂಡಕ್ಕೆ ನಗದು ಮತ್ತು ಪಾರಿತೋಷಕ, ಹಲವು ವಿಭಾಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದ ಕ್ರೀಡಾ ಪಟುಗಳಿಗೆ ವೈಯಕ್ತಿಕ ಟ್ರೋಫಿಗಳನ್ನು ಅಯೋಜಕರು ವಿತರಿಸಲಿದ್ದಾರೆ.
ಒಟ್ಟು ನಾಲ್ಕು ತಂಡಗಳಾದ ಮನ್ನಾ ಸೂಪರ್ ಕಿಂಗ್ಸ್, ಲಿಥೀನ್ ಕ್ರಿಕೆಟರ್ಸ್, ಸ್ಪೈಸಿಸ್ ಇಲೆವನ್ ಮತ್ತು ರಾಯಲ್ ಫ್ರೆಂಡ್ಸ್ ತಂಡಗಳು ಅಂತಿಮ ಸುತ್ತಿಗೆ ಪದಾರ್ಪಣೆ ಮಾಡಿವೆ. ಸಂಜೆ 3 ಗಂಟೆಗೆ ಫೈನಲ್ ಪಂದ್ಯಾಟ ನಡೆಯಲಿದೆ.