ಶನಿವಾರಸಂತೆ, ಡಿ. 28: ವಿದ್ಯಾಸಂಸ್ಥೆಯನ್ನು ಗೌರವಿಸುವ ಪ್ರತಿಯೊಬ್ಬ ವಿಧೇಯ ವಿದ್ಯಾರ್ಥಿಗಳು ಒಗ್ಗೂಡಿದರೆ ದೇಶ ಬಲಿಷ್ಟವಾಗುತ್ತದೆ ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆದ ಸಂಸ್ಥೆಯ ರಜತಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.25ನೇ ವಯಸ್ಸಿನಲ್ಲಿ ವಿದ್ಯೆ, ಬುದ್ಧಿ, ಸಿದ್ಧಿಯನ್ನು ಸಾಧಿಸುವ ನಿಸ್ವಾರ್ಥ ವಿದ್ಯಾರ್ಥಿ ದೇಶ ಕಟ್ಟುವ ಕಾಯಕದಲ್ಲಿ ಯಶಸ್ವಿಯಾಗುತ್ತಾನೆ. ವಿದ್ಯಾರ್ಥಿ ಜೀವನದ ಸಮಯ ಮತ್ತು ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.
ಹೈಕೋರ್ಟ್ ನ್ಯಾಯಾಧೀಶ ಎಚ್.ಪಿ. ಸಂದೇಶ್ ಮಾತನಾಡಿ, ಗುರುಕುಲದ ಶಿಕ್ಷಣಕ್ಕೂ ಪ್ರಸ್ತುತ ಆಧುನಿಕ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಶಿಕ್ಷಣದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ವಿದ್ಯಾರ್ಥಿ ಶ್ರದ್ಧೆ, ಶ್ರಮ, ಸಮಯ ಪ್ರಜ್ಞೆ, ವಿಶ್ವಾಸ ಹಾಗೂ ಧೈರ್ಯ ಎಂಬ ಪಂಚಸೂತ್ರಗಳನ್ನು ಪಾಲಿಸಿದರೆ ಭವಿಷ್ಯ ಜೀವನವನ್ನು ಉಜ್ವಲಗೊಳಿಸಿಕೊಳ್ಳಬಹುದು ಎಂದರು.
(ಮೊದಲ ಪುಟದಿಂದ) ಕಿರಿಕೊಡ್ಲಿಮಠದ ಸದಾಶಿವಸ್ವಾಮೀಜಿ ಮಾತನಾಡಿದರು. ಸಂಸ್ಥೆ ನಿರ್ದೇಶಕ ಯು.ಎನ್.ದೇವರಾಜ್ ಪ್ರಾಸ್ತಾವಿಕ ನುಡಿಯಾಡಿದರು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸಿ.ಎಸ್. ಸತೀಶ್ ಅವರನ್ನು ಸನ್ಮಾನಿಸಲಾಯಿತು. ಗೆಜ್ಜೆಹಣಕೋಡು ಗ್ರಾಮದ ಗಂಧರ್ವ ಯುವಕ ಸಂಘದ ಮಹೇಶ್ ಮತ್ತು ತಂಡದವರು ಗೀತಗಾಯನ ಕಾರ್ಯಕ್ರಮ ನೀಡಿ ರಂಜಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಬಿ.ಕೆ. ಸುಬ್ರಮಣ್ಯ ಮಾತನಾಡಿದರು. ಆದಿಚುಂಚನಗಿರಿ ಸಂಸ್ಥಾನ ಹಾಸನದ ಶಾಖಾಮಠದ ಶಂಭುನಾಥ ಸ್ವಾಮೀಜಿ, ಸಂಸ್ಥೆ ಉಪಾಧ್ಯಕ್ಷ ಕೆ.ಈ. ಕೃಷ್ಣರಾಜ್, ನಿರ್ದೇಶಕರು, ಶಿಕ್ಷಕ ಕೆ.ಪಿ. ಜಯಕುಮಾರ್ ಹಾಗೂ ಉಪನಸ್ಯಾಸಕ ಮಹಮ್ಮದ್ ಜಹೀರ್ ಉಪಸ್ಥಿತರಿದ್ದರು.