ಕರಿಕೆ, ಡಿ. 28: ಸರಕಾರದ ಮಹತ್ವದ ಯೋಜನೆಗಳಲ್ಲಿ ಪ್ರಮುಖ ಯೋಜನೆ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕುಡಿಯುವ ನೀರಿನ ಸರಬರಾಜು ಯೋಜನೆ. ಆದರೆ ಅಂತಹಾ ಒಂದು ಯೋಜನೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಆ ಕಾಮಗಾರಿ ಅಪೂರ್ಣವಾಗಿ ಶವಾಗಾರದಂತೆ ಬಾಗಿಲು ಮುಚ್ಚಲ್ಪಟ್ಟ ಶುದ್ಧ ಕುಡಿಯುವ ನೀರಿನ ಅಶುದ್ಧ ಘಟಕವೊಂದನ್ನು ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಳ್ಳುಕೊಚ್ಚಿ ಮರಾಠಿ ಮೂಲೆ ಎಂಬಲ್ಲಿ ಕಾಣಬಹುದು.
ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕರಿಕೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಜಾಗ ಗುರುತಿಸಿ ಒಂದೂವರೆ ವರ್ಷಗಳ ಹಿಂದೆ ಘಟಕ ಸ್ಥಾಪನೆಯಾಯಿತು. ಇದು ಭಾಗಮಂಡಲ- ಕರಿಕೆ ಅಂತರರಾಜ್ಯ ಹೆದ್ದಾರಿ ಬದಿಯಲ್ಲೆ ಇದ್ದು ರಸ್ತೆ ಅಗಲೀಕಣ ಸಂದರ್ಭ ಅಡಚಣೆಯಾಗಿ ತೆರವುಗೊಳಿಸುವ ಸಾಧ್ಯತೆ ಹೆಚ್ಚು; ಇದರ ಅರಿವಿದ್ದು ಕೂಡ ನಿರ್ಮಾಣವಾಗಿರುವ ಘಟಕ ಪ್ರಸ್ತುತ ನಿಷ್ಪ್ರಯೋಜಕವಾಗಿದೆ.