ಮಡಿಕೇರಿ, ಡಿ. 27: ಸೇವಾ ಭಾರತಿ ಕೊಡಗು ಸಂಸ್ಥೆಯ ವತಿಯಿಂದ ತಾ. 28 ರಿಂದ ಹಂತ ಹಂತವಾಗಿ ಕೊಡಗು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಟಿ.ಸಿ. ಚಂದ್ರನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಜಿಲ್ಲೆಗೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ನೂತನ ವರ್ಷಾರಂಭವನ್ನು ಆಚರಿಸುವುದು ಇತ್ತೀಚೆಗೆ ಕಂಡುಬರುತ್ತಿದೆ. ಪ್ರವಾಸಿಗರು ಜಿಲ್ಲೆಗೆ ಬರುವಾಗ ಪ್ಲಾಸ್ಟಿಕ್ ಚೀಲ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ತಂದು ಎಲ್ಲೆಂದರಲ್ಲಿ ಬಿಸಾಡುವುದನ್ನು ಕಾಣುತ್ತೇವೆ. ಪ್ಲಾಸ್ಟಿಕ್ ವಸ್ತುಗಳನ್ನು ಕಡಿಮೆ ಮಾಡುವುದರ ಬಗ್ಗೆ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಮೊದಲ ಆದ್ಯತೆಯಾಗಿ ತಾ. 28 ರಂದು (ಇಂದು) ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ರವರೆಗೆ ಜಿಲ್ಲೆಯ ಕುಶಾಲನಗರ, ಮಡಿಕೇರಿ ನಗರದ ಸುದರ್ಶನ ವೃತ್ತ, ಮದೆನಾಡು ಮತ್ತು ತಿತಿಮತಿ ಹೆದ್ದಾರಿಗಳಲ್ಲಿ ಕರಪತ್ರವನ್ನು ವಿತರಿಸುವ ಮೂಲಕ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಚಂದ್ರನ್ ಹೇಳಿದ್ದಾರೆ.