ಮಡಿಕೇರಿ, ಡಿ. 27: ಕಾಂತೂರು - ಮೂರ್ನಾಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಯಡಿ ಕೈಗೊಂಡಿರುವ ರೂ. 22 ಲಕ್ಷದ ಕಾಮಗಾರಿ ಸಂಬಂಧ ಸಾಕಷ್ಟು ಸಂಶಯ ಹುಟ್ಟಿಕೊಂಡಿದೆ. ಅಲ್ಲಿನ ಗ್ರಾ.ಪಂ. ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಹಾಗೂ ಸದಸ್ಯರಾದ ರವಿ ಮತ್ತು ಜಯಂತಿ ಈ ಕುರಿತು ‘ಶಕ್ತಿ’ಯಲ್ಲಿ ಪ್ರಕಟಗೊಂಡಿರುವ ವರದಿಗೆ ಸಮಜಾಯಿಷಿಕೆ ನೀಡಿದ್ದಾರೆ.
ಅಲ್ಲದೆ ತಾವು ಕರ್ನಾಟಕ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿಯಲ್ಲಿ; ಸಂಬಂಧಿಸಿದ ಇಲಾಖೆ ಇಂಜಿನಿಯರಿಂಗ್ ವಿಭಾಗ ದಿಂದ ಮೂರ್ನಾಡುವಿನಲ್ಲಿ; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವಾಸಿಗಳು ಅಧಿಕ ಸಂಖ್ಯೆಯಲ್ಲಿರುವ ಕಾಲೋನಿಗಳಿಗೆ ಪ್ರಥಮ ಆದ್ಯತೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಗ್ರಾ.ಪಂ.ನಿಂದ ನಿರ್ಣಯ ಕೈಗೊಂಡಿದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಆ ಪ್ರಕಾರ ಕೆ.ಆರ್.ಐ.ಡಿ.ಎಲ್. ಸಂಸ್ಥೆಯ ಮೂಲಕ ರೂ. 22 ಲಕ್ಷದ ಕಾಮಗಾರಿಗೆ ಗ್ರಾ.ಪಂ. ಸಮ್ಮತಿಸಿದ್ದು; ಸಂಬಂಧಪಟ್ಟ ಇಲಾಖೆಗೆ ಕೆಲಸದ ಸಂಬಂಧ ರೂ. 22 ಲಕ್ಷವನ್ನು ಎರಡು ಕಂತಿನಲ್ಲಿ ಪಾವತಿ ಮಾಡಲಾಗಿದೆ ಎಂದು ಇವರುಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಸಂಬಂಧಿಸಿದ ಇಂಜಿನಿಯ ರಿಂಗ್ ವಿಭಾಗದಿಂದ ಗೌಡಳ್ಳಿ ಬಳಿ ಹಿರಿಕರ ಗ್ರಾಮದ ಹೆಚ್.ಎಂ. ಪಾಲಾಕ್ಷ ಎಂಬವರಿಗೆ ಕಾಮಗಾರಿ ಗುತ್ತಿಗೆ ನೀಡಿದ್ದಾಗಿಯೂ ವಿವರಿಸಿದ್ದಾರೆ.
ಅಂತೆಯೇ ಕೆ.ಆರ್.ಐ.ಡಿ.ಎಲ್ ತಮ್ಮಿಂದ ಹಣ ಪಡೆದುಕೊಂಡಿದ್ದು; ಅನಂತರದಲ್ಲಿ ರೂ. 18 ಲಕ್ಷ ಕಾಮಗಾರಿಗೆ ಬಳಕೆಯಾಗಿದೆಯಲ್ಲದೆ; ಉಳಿಕೆ ಹಣ ರೂ. 3 ಲಕ್ಷದ ತೊಂಭತ್ತೆಂಟು ಸಾವಿರದ ನಾಲ್ಕುನೂರ ಎಪ್ಪತ್ತೆರಡು ಮೊತ್ತವನ್ನು ಗ್ರಾ.ಪಂ.ಗೆ ಹಿಂತಿರುಗಿಸಲಾಗುವದು ಎಂದು ಸಂಬಂಧಿಸಿದ ಮಡಿಕೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಲಿಖಿತ ತಿಳುವಳಿಕೆ ನೀಡಿದ್ದು; ಹಣ ಪಂಚಾಯಿತಿಗೆ ಸಂದಾಯ ಆಗಿಲ್ಲವೆಂದು ವಿವರಿಸಿದ್ದಾರೆ.
‘ಶಕ್ತಿ’ ಬಹಿರಂಗ : ಈ ಸಂಬಂಧ ತಾ. 23ರ ‘ಶಕ್ತಿ’ಯಲ್ಲಿ ವಿಷಯ ಬಹಿರಂಗೊಂಡಿರುವ ಬೆನ್ನಲ್ಲೇ; ಜಿಲ್ಲೆಯ ವಿವಿಧೆಡೆಗಳಲ್ಲಿ ಕುಡಿಯುವ ನೀರಿನ ಸಂಬಂಧ ಸಾಕಷ್ಟು ದುರುಪಯೋಗದ ಸಂಶಯ ಹುಟ್ಟಿಕೊಂಡಿದೆ. ಕಾರಣ ಮೂರ್ನಾಡು ಗ್ರಾ.ಪಂ.ನಿಂದ ಹುಣಸೂರಿನ ಕೆ.ಆರ್.ಐ.ಡಿ.ಎಲ್. ಹೆಸರಿನಲ್ಲಿ ಚೆಕ್ ಮುಖಾಂತರ ಹಣ ಸಂದಾಯವಾಗಿದೆ. ದಾಖಲೆಗಳಲ್ಲಿ ಮಾತ್ರ ಮಡಿಕೇರಿ ಕೆ.ಆರ್.ಐ.ಡಿ.ಎಲ್. ಸಹಾಯಕ ಕಾರ್ಯಪಾಲಕ ಇಂಜಿನಿ ಯರ್ ಕಚೇರಿ ವ್ಯವಹರಿಸಿದಂತಿದೆ.
ಹೀಗಾಗಿ ಗ್ರಾ.ಪಂ. ಆಡಳಿತ ಕೂಡ ಗೊಂದಲದಲ್ಲಿ ಸಿಲುಕುವದರೊಂದಿಗೆ; ಅಲ್ಲಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂಬಂಧಿಸಿದ ಇಲಾಖೆಗೆ ಲಿಖಿತ ಪತ್ರದೊಂದಿಗೆ; ಪಂಚಾಯಿತಿ ಖಾತೆಗೆ ಬಾಕಿ ಹಣ ಪಾವತಿಸಲು ಕೋರಿ ರುವದು ಬಹಿರಂಗಗೊಂಡಿದೆ. ಈ ಎಲ್ಲವನ್ನು ಗಮನಿಸಿದರೆ ಕುಡಿಯುವ ನೀರಿನ ಯೋಜನೆಯಡಿ ಕೊಡಗಿನಲ್ಲಿ ಸಾಕಷ್ಟು ದುರುಪಯೋಗ ನಡೆದಿರುವ ಸಂಶಯ ಹುಟ್ಟಿಕೊಂಡಿದೆ.
ಗ್ರಾ.ಪಂ. ಪ್ರಮುಖರ ಹೇಳಿಕೆ : ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರ ಪ್ರಕಾರ; ಕಾಂತೂರು - ಮೂರ್ನಾಡು ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿರಾ ನಗರ ಹಾಗೂ ಇತರೆಡೆ ಈ ಹಿಂದೆಯೂ ಕುಡಿಯುವ ನೀರಿಗಾಗಿ ಜಿ.ಪಂ.ನಿಂದ 20 ಲಕ್ಷ ಖರ್ಚು ಮಾಡಿ; ಯೋಜನೆ ವಿಫಲಗೊಂಡಿ ದ್ದರಿಂದ ತಾವು ರೂ. 22 ಲಕ್ಷ ಪಂಚಾಯಿತಿ ನಿಧಿಯಿಂದ ಮರು ಯೋಜನೆ ಕಲ್ಪಿಸಲು ಮುಂದಾಗಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಿನಲ್ಲಿ ಕಾಂತೂರು - ಮೂರ್ನಾಡು ಗ್ರಾ.ಪಂ.ನಲ್ಲಿ ಸಂಶಯಕ್ಕೆ ಕಾರಣವಾಗಿರುವ ಕುಡಿಯುವ ನೀರಿನ ಹಣ ದುರುಪಯೋಗದಂತೆ; ಇತರೆಡೆ ಗಳಲ್ಲಿಯೂ ಹಣ ದುರುಪಯೋಗ ದೊಂದಿಗೆ; ಕೇವಲ ಹಣ ಸಂದಾಯಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಶಂಕೆ ಹುಟ್ಟಿಕೊಂಡಿದ್ದು; ಕೆ.ಆರ್.ಐ.ಡಿ.ಎಲ್. ಕೆಲಸ ಹಲವಷ್ಟು ಅನುಮಾನ ಮೂಡಿಸಿದೆ.