ಸುಂಟಿಕೊಪ್ಪ, ಡಿ.27: ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 49ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಶೃದ್ಧಾಭಕ್ತಿಯಿಂದ ಅಯ್ಯಪ್ಪ ವ್ರತಾಧಾರಿಗಳು ಹಾಗೂ ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು.

ಅಯ್ಯಪ್ಪ ಸ್ವಾಮಿ ಕ್ಷೇತ್ರದ 49ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣ ಹಾಗೂ ಹೆದ್ದಾರಿ ಬದಿಯಲ್ಲಿ ತಳಿರುತೋರಣ, ವಿವಿಧ ಬಗೆಯ ಹೂವುಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಬೆಳಿಗ್ಗೆ 6.45 ಗಂಟೆಗೆ ಗಣಪತಿ ಹೋಮ, 7.30 ಗಂಟೆಗೆ ಚಂಡೆ ಮೇಳ, 9 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತಾಭಿಷೇಕ, 12 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪೂಜೆ, 12.30 ಗಂಟೆಗೆ ಲಕ್ಷಾರ್ಚನೆ, ಪಲ್ಲಪೂಜೆ, ವಿಶೇಷ ಪೂಜೆ ಬಿಲ್ವಪತ್ರೆ ಆರ್ಚನೆ, ತುಳಸಿ ಆರ್ಚನೆ, ಪಂಚಾಮೃತ ಅಭಿಷೇಕ ಪೂಜೆಯನ್ನು ಆರ್ಚಕರಾದ ಗಣೇಶ ಉಪಾಧ್ಯಾಯರ ತಂಡ ನಡೆಸಿತು. ಮದ್ಯಾಹ್ನ 12.30 ಗಂಟೆಗೆ ಅಯ್ಯಪ್ಪನಿಗೆ ಮಹಾ ಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಣೆ ನಡೆಯಿತು. ಅಯ್ಯಪ್ಪ ವ್ರತಾಧಾರಿಗಳು ಅಯ್ಯಪ್ಪನ ಸ್ಮರಿಸುತ್ತಾ ಭಜನೆ ಹಾಗೂ ಶರಣು ಕೂಗುತ್ತ ಮಂಡಲಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 1 ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಿತು.