ವಿಶೇಷ ವರದಿ: ಟಿ.ಎಲ್. ಶ್ರೀನಿವಾಸ್

ಗೋಣಿಕೊಪ್ಪಲು, ಡಿ. 27: ಕಾಫಿ ಬಟ್ಟಲು ಕೊಡಗಿನಲ್ಲಿ ಇದೀಗ ಚುಮು ಚುಮು ಚಳಿಗಾಲ. ಬಿಸಿ ಬಿಸಿ ಕಾಫಿಯೊಂದಿಗೆ ಕೊಡಗಿನ ಬಹುತೇಕ ಜನತೆ ತಮ್ಮ ದೈನಂದಿನ ದಿನಚರಿ ಆರಂಭಿಸುವದು ವಾಡಿಕೆ. ಕಾಫಿ ಕೊಯ್ಲು ಆರಂಭಗೊಂಡಿದ್ದು, ಅಲ್ಲಲ್ಲಿ ಕಾರ್ಮಿಕರಿಗಾಗಿ ಪರದಾಟ ಕಂಡು ಬಂದಿದೆ. ಕಳೆದೆರಡು ವರ್ಷದ ಜಲಪ್ರಳಯ ಕೊಡಗಿನ ಜನತೆಯನ್ನು ಮೈಕೊರೆಯುವ ಚಳಿಗಿಂತಲೂ ಅಧಿಕವಾಗಿ ನಡುಗಿಸಿದೆ. ಕಾಫಿ ದರ ಏರುಮುಖ ಕಾಣಬಹುದೆ? ಎಂಬ ಲೆಕ್ಕಾಚಾರದೊಂದಿಗೆ ದಿನನಿತ್ಯವೂ ಪತ್ರಿಕೆಗಳತ್ತ ಕಣ್ಣಾಡಿಸಿ, ನಿರಾಶೆಯನ್ನು ವ್ಯಕ್ತಪಡಿಸುವ ಬೆಳೆಗಾರರೇ ಅಧಿಕವಾಗಿ ಕಣ್ಣ ಮುಂದೆ ತೇಲಿ ಬರುತ್ತಾರೆ.

ಕೊಡಗಿನ ಸಣ್ಣ-ದೊಡ್ಡ ಕಾಫಿ ಬೆಳೆಗಾರರು ಹಿಂದೆಂದೂ ಕಂಡು ಕೇಳರಿಯದ ಆರ್ಥಿಕ ಹಿಂಜರಿತವನ್ನು ಇದೀಗ ಅನುಭವಿಸುತ್ತಿದ್ದಾರೆ. ಸಹಕಾರಿ ಬ್ಯಾಂಕು, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾಡಲಾದ ಸಾಲ ಮರುಪಾವತಿಗೆ ತಿಣುಕಾಡುತ್ತಿದ್ದರೆ, ಇನ್ನೂ ಸಣ್ಣ ಹಿಡುವಳಿದಾರರು ಕಾಫಿ, ಕಾಳುಮೆಣಸು, ಭತ್ತದ ಕಟಾವಿಗೆ ಕಾರ್ಮಿಕರ ಕೂಲಿ ಭರಿಸಲು ಅಲ್ಲಿ ಇಲ್ಲಿ ಕೈಸಾಲ ಮಾಡುವದೂ ಕಂಡು ಬಂದಿದೆ. ಬಂಪರ್ ಕಾಫಿ, ಬಂಪರ್ ದರ ಇದ್ದರೆ ನಾವು ಕಾಣುವ ಕೊಡಗು ಬೇರೆ. ಆದರೆ, ಇದೀಗ ಕೊಡಗಿನ ಕಾಫಿ ಉತ್ಪಾದನೆಗೆ ಗೊಬ್ಬರ, ನೀರಾವರಿ ಖರ್ಚು, ಮಿತಿ ಮೀರುತ್ತಿರುವ ಕಾರ್ಮಿಕರ ವೇತನ, ಕಾಫಿ ಕಳವು ಭಯ, ಅತಿವೃಷ್ಟಿಯಿಂದ ಅಲ್ಲಲ್ಲಿ ಕಾಫಿ ಉತ್ಪಾದನೆ ಕುಸಿತ, ಕಾಫಿ ದರ ಕುಸಿತ ಇತ್ಯಾದಿಗಳಿಂದಾಗಿ ಕಾಫಿ ಕೃಷಿಕ ಕಂಗಾಲಾಗಿದ್ದಾನೆ. ಆರ್ಥಿಕ ಹಿಂಜರಿತದಿಂದಾಗಿ ಕೊಡಗು ಜಿಲ್ಲೆಯ ವರ್ತಕರೂ ಒಳಗೊಂಡಂತೆ ಎಲ್ಲ ಸ್ತರದ ಜನರೂ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಮುಂದಿನ ವರ್ಷ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಕಾಫಿ ಸಮಾವೇಶಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಈ ಸಮಾವೇಶ ನಮಗೆ ಬೇಕಾ? ಕಾಫಿ ಮಂಡಳಿಯಿಂದ ನಮಗೇನು ಲಾಭ? ಈ ಸಮಾವೇಶ ಯಾರಿಗಾಗಿ? ಎಂಬ ಹತ್ತು ಹಲವು ಪ್ರಶ್ನೆಗಳು ಪ್ರತ್ಯಕ್ಷವಾಗಬಹುದು. ಕಾಫಿ ಬೆಳೆಗಾರ ಮತ್ತು ಕಾಫಿ ಸಮಾವೇಶದ ನಡುವಿನ ಸಾಧಕ ಬಾಧಕಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ‘ಶಕ್ತಿ’ ಇಲ್ಲಿ ಮಾಡಿದೆ. ನೂತನ ವರ್ಷ 2020 ‘ಕಾಫಿ ಕೃಷಿಕರ ಬಾಳನ್ನು ಹಸನು ಮಾಡಲಿ’ ಎಂಬ ಆಕಾಂಕ್ಷೆಯೊಂದಿಗೆ...