ವಿಶ್ವ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ನಂತರ ಕಾಫಿ ಉದ್ಯಮಕ್ಕೆ ಸ್ಥಾನ ನೀಡಲಾಗಿದೆಯೇ ಎಂದಾಗ ನಮಗೆ ನಂಬುವದೂ ಕಷ್ಟ. ಆದರೆ, ಇದು ವಾಸ್ತವ. ಕಾಫಿ ವಿಶ್ವದ ಅತೀ ಬೇಡಿಕೆಯ ಪಾನೀಯ. ದಿನಂಪ್ರತಿ ಅಂದಾಜಿನ ಪ್ರಕಾರ 2.5 ಬಿಲಿಯನ್ ಕಪ್ ಕಾಫಿಯನ್ನು ಬಳಕೆ ಮಾಡಲಾಗುತ್ತಿದೆ. ವಿಶ್ವದ 70 ರಿಂದ 80 ರಾಷ್ಟ್ರಗಳು ಕಾಫಿಯನ್ನು ಉತ್ಪಾದಿಸುತ್ತಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಾದ ಆಫ್ರಿಕಾ,ಲ್ಯಾಟಿನ್ ಅಮೇರಿಕಾ ಮತ್ತು ಏಷ್ಯಾದಲ್ಲಿ ಅಧಿಕ ಕಾಫಿ ಉತ್ಪಾದಿಸಲಾಗುತ್ತಿದೆ. ಕಾಫಿಯನ್ನು ಅಧಿಕವಾಗಿ ಅಮೇರಿಕಾ ಮತ್ತು ಯುರೋಪ್ ದೇಶದ ಜನತೆ ಪ್ರೀತಿಸುತ್ತಾರೆ. ವಿಶ್ವ ಮಾರುಕಟ್ಟೆಯಲ್ಲಿ ರೋಬಸ್ಟಾ ಮತ್ತು ಅರೇಬಿಕಾ ಎಂದು ಕಾಫಿಯನ್ನು ವಿಂಗಡಿಸುವ ಮೂಲಕ, ‘ಕಾಫಿ ಕಪ್ ಟೇಸ್ಟ್’ ಮೂಲಕ ರುಚಿಯನ್ನು ಸವಿದು ಕಾಫಿ ಪ್ರಿಯರು ತಮಗೆ ಬೇಕಾದ ‘ಬ್ರ್ಯಾಂಡ್’ ಕಾಫಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ವಿಶ್ವ ಕಾಫಿ ಉತ್ಪಾದನೆಯ ಶೇ25 ರಷ್ಟು ಕಾಫಿಯನ್ನು ಬ್ರೆಜಿಲ್ ದೇಶವೊಂದೇ ಉತ್ಪಾದಿಸುತ್ತಿದೆ. ಬ್ರೆಜಿಲ್‍ನಲ್ಲಿ ಕಾಫಿ ಆಂತರಿಕ ಬಳಕೆ ಹೆಚ್ಚಿರುವ ಹಿನ್ನೆಲೆ ನಮ್ಮ ಕೊಡಗಿನಂತೆ ಹೆಚ್ಚು ತೊಂದರೆ ಅಲ್ಲಿ ಕಂಡುಬರುವದಿಲ್ಲ. ಬ್ರೇಜಿಲ್‍ನ ಹವಾಗುಣ ವೈಪರೀತ್ಯಗಳೇ ವಿಶ್ವ ಕಾಫಿ ಉದ್ಯಮದಲ್ಲಿನ ದರದ ಏರಿಳಿತವನ್ನು ನಿರ್ಧರಿಸುತ್ತದೆ ಎಂದರೆ ಅತಿಶಯವಲ್ಲ. ಬ್ರೆಜಿಲ್ ಕಾಫಿ ಉತ್ಪಾದನೆ ಕುಂಠಿತಗೊಂಡಾಗಲೆಲ್ಲಾ ಇತರೆ ಕಾಫಿ ಬೆಳೆಯುವ ರಾಷ್ಟ್ರಗಳ ಕಾಫಿ ದರ ಹೆಚ್ಚಳವಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ವಿಯಟ್ನಾಂ ದೇಶ ಕೂಡಾ ಕಾಫಿ ಉತ್ಪಾದನೆಯನ್ನೇ ಪ್ರಮುಖ ಕೃಷಿಯಾಗಿ ಪರಿಗಣಿಸಿ, ರಪ್ತು ರಾಷ್ಟ್ರವಾಗಿ ಗುರುತಿಸಿಕೊಂಡಿದೆ.

ಭಾರತಕ್ಕೆ 6ನೇ ಸ್ಥಾನ

ಭಾರತವು ವಿಶ್ವ ಕಾಫಿ ಉತ್ಪಾದನೆಯ ಶೇ. 5 ರಷ್ಟು ಬೆಳೆದು 6ನೇ ಸ್ಥಾನದಲ್ಲಿದೆ. ಇಂಡೋನೇಶಿಯಾ ದೇಶವೂ ಭಾರತದೊಂದಿಗೆ ಪೈಪೆÇೀಟಿಗಿಳಿದು ಏಷ್ಯಾ ಕೂಡಾ ಕಾಫಿ ಬೆಳೆಯುವ ಪ್ರಮುಖ ಖಂಡವಾಗಿ ಗುರುತಿಸಿಕೊಂಡಿದೆ. ಕಳೆದ 50 ವರ್ಷಗಳಲ್ಲಿ ಭಾರತದ ಕಾಫಿ ಬೆಳೆಯುವ ಪ್ರದೇಶಗಳು ಮೂರು ಪಟ್ಟು ಹೆಚ್ಚಾಗಿದೆ. ದಕ್ಷಿಣ ಭಾರತದ ರಾಜ್ಯಗಳು ಕಾಫಿಯನ್ನು ಅಧಿಕವಾಗಿ ಬೆಳೆಯುತ್ತಿದ್ದು, ಕರ್ನಾಟಕ ಸಿಂಹಪಾಲು ಉತ್ಪಾದನೆ ಮಾಡುತ್ತಿದೆ.ಶೇ70 ರಷ್ಟು ಸಣ್ಣ ಕಾಫಿ ಬೆಳೆಗಾರರು ರಾಜ್ಯದಲ್ಲಿ ಕಾಫಿ ಉತ್ಪಾದನೆಯಲ್ಲಿ ತೊಡಗಿರುವದೂ ವಿಶೇಷ. ಏಷ್ಯಾ ಖಂಡ ಮತ್ತು ಆಫ್ರೀಕಾ ದೇಶಗಳು ಅತಿ ಹೆಚ್ಚು ಟೀ ಪಾನೀಯವನ್ನೇ ಸೇವಿಸುತ್ತಿದ್ದು, ಭವಿಷ್ಯದಲ್ಲಿ ಏಷ್ಯಾದ ದೇಶಗಳಾದ ಭಾರತ, ಚೀನಾ, ವಿಯೆಟ್ನಾಮ್, ಇಂಡೋನೇಶಿಯಾ, ಕೊರಿಯಾ ಮತ್ತು ಥಾಯ್ಲೆಂಡ್ ರಾಷ್ಟ್ರಗಳು ಕಾಫಿ ಆಂತರಿಕ ಬಳಕೆಗೆ ಅಧಿಕ ಒತ್ತು ನೀಡಿದ್ದಲ್ಲಿ ಭಾರತ ಮತ್ತು ಕೊಡಗಿನ ಕಾಫಿ ಬೆಳೆಗಾರರು ಭವಿಷ್ಯದಲ್ಲಿ ಕಾಫಿಗೆ ಉತ್ತಮ ದರವನ್ನು ನಿರೀಕ್ಷಿಸಬಹುದಾಗಿದೆ. ವಿಶ್ವದ ಕಾಫಿ ಕುಡಿಯುವವರ ಸಂಖ್ಯೆ ವಾರ್ಷಿಕವಾಗಿ ಶೇ.2 ಮಾತ್ರಾ ಏರುಮುಖದಲ್ಲಿದ್ದರೆ, ಏಷ್ಯಾದಲ್ಲಿ ಕಾಫಿ ಕುಡಿಯುವವರ ಸಂಖ್ಯೆ ಇದೀಗ ಶೇ.6 ರಿಂದ ಶೇ15 ರಷ್ಟು ಏರುಮುಖದಲ್ಲಿದೆ. ಈ ಒಂದು ಅಂಕಿ ಅಂಶದ ಬಲದಿಂದಾಗಿಯೇ ಕಾಫಿ ಜಗತ್ತು ಏಷ್ಯಾ ಕಾಫಿ ಉತ್ಪಾದಕ ರಾಷ್ಟ್ರಗಳ ಕಡೆ ಮುಖ ಮಾಡಿದೆ. ಹಾಗಾಗಿಯೇ 5 ನೇ ವಿಶ್ವ ಕಾಫಿ ಸಮಾವೇಶಕ್ಕಾಗಿ ಬೆಂಗಳೂರು ಅರಮನೆ ಮೈದಾನ ಆಯ್ಕೆಯಾಗಿದೆ ಹಾಗೂ ಸುಮಾರು ರೂ.15 ಕೋಟಿ ವೆಚ್ಚದಲ್ಲಿ ವಿಶ್ವದ ಕಾಫಿ ದಿಗ್ಗಜರನ್ನು ಸೆಳೆಯಲು ರಾಜ್ಯ ಸಜ್ಜಾಗಿದೆ.

ವಿಶ್ವ ಕಾಫಿ ಸಂಘಟನೆ ಲಂಡನ್‍ನಲ್ಲಿ 1963 ರಲ್ಲಿ ಅಸ್ತಿತ್ವಕ್ಕೆ ಬಂತು. ವಿಶ್ವದ ಕಾಫಿ ಉದ್ಯಮದ ಆರ್ಥಿಕ ಪ್ರಾಮುಖ್ಯತೆಯನ್ನು ಮನಗಂಡು ಸಂಘಟನೆಯು ಸುಮಾರು 78 ಕಾಫಿ ಬೆಳೆಯುವ ಮತ್ತು ಆಮದು ರಾಷ್ಟ್ರಗಳೊಂದಿಗೆ ಪರಸ್ಪರ ಸಹಕಾರ ನೀತಿಯನ್ನು ಅಳವಡಿಸಿಕೊಂಡಿದೆ. ಶೇ.98ರಷ್ಟು ಕಾಫಿ ಉತ್ಪಾದನೆ ಹಾಗೂ ಶೇ.83ರಷ್ಟು ಕಾಫಿ ಆಂತರಿಕ ಬಳಕೆ ರಾಷ್ಟ್ರಗಳು ಇದೀಗ ವಿಶ್ವ ಕಾಫಿ ಸಂಘಟನೆಯ ನೀತಿ ನಿಯಮಾವಳಿಗೆ ಬದ್ಧವಾಗಿದ್ದು ಏಷ್ಯಾದಲ್ಲಿ ‘ಕಾಫಿ ಬಳಕೆ ಮೂಲಕ ಸುಸ್ಥಿರತೆ’ ಧ್ಯೇಯ ವಾಕ್ಯದೊಂದಿಗೆ ವಿಶ್ವ ಕಾಫಿ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವಿಶ್ವ ಕಾಫಿ ಉದ್ಯಮ ಚೇತರಿಕೆ ಮತ್ತು ಪ್ರಚಾರಕ್ಕಾಗಿ ವಿಶ್ವ ಕಾಫಿ ಸಂಘಟನೆಯು 5 ವರ್ಷಗಳಿಗೊಮ್ಮೆ ಸಮಾವೇಶ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಕೆಗಾಗಿ ವಿಶ್ವ ಮಟ್ಟದಲ್ಲಿ ಬೃಹತ್ ವಸ್ತುಪ್ರದರ್ಶನವನ್ನು ಏರ್ಪಡಿಸುತ್ತಾ ಬಂದಿದೆ. 2001 ರಲ್ಲಿ ಲಂಡನ್‍ನಲ್ಲಿ ಮೊದಲ ವಿಶ್ವಕಾಫಿ ಸಮಾವೇಶ ಜರುಗಿತು. ಬ್ರೆಜಿಲ್‍ನ ಸಾಲ್ವಡಾರ್(2005), ಗ್ವಾಟೆಮಾಲಾ(2010), ಇಥಿಯೋಪಿಯಾದ ಆಡಿಸ್ ಅಬಾಬ(2016) ಹಾಗೂ ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಭಾರತದ ಬೆಂಗಳೂರಿನಲ್ಲಿ 2020 ಗೆ ವಿಶ್ವ ಕಾಫಿ ಸಮಾವೇಶ ಮತ್ತು ಎಕ್ಸ್‍ಫೆÇೀ ನಡೆಯಲಿದ್ದು ಹಲವು ಅವಕಾಶದ ಬಾಗಿಲುಗಳನ್ನು ಭಾರತೀಯ ಕಾಫಿ ಬೆಳೆಗಾರರಿಗೆ ತೆರೆದಿದೆ.

ಭಾರತದಲ್ಲಿ ಎಲ್ಲೆಲ್ಲಿ ಕಾಫಿ ಕೃಷಿ?

ಭಾರತದಲ್ಲಿ ಶೇ.70 ರಷ್ಟು ಕರ್ನಾಟಕವು ಕಾಫಿ ಉತ್ಪಾದನೆ ಮಾಡಿದರೆ, ಉಳಿದಂತೆ 12 ರಾಜ್ಯಗಳು ಕಾಫಿ ಬೆಳೆಯುತ್ತವೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಮುಖ್ಯವಾಗಿ ಇತ್ತೀಚೆಗೆ ಆಂಧ್ರಪ್ರದೇಶ ಕಾಫಿ ಬೆಳೆದು ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆಂಧ್ರದ ಅರಕು ಅರೋಮ ಆದಿವಾಸಿ ಕಾಫಿಗೆ ಪ್ಯಾರೀಸ್ ಮಾರುಕಟ್ಟೆಯಲ್ಲಿಯೂ ಬೇಡಿಕೆ ಇದೆ. ವಿಶಾಖಪಟ್ಟಣದ ಸಮೀಪ ಅರುಕು ಗುಡ್ಡಗಾಡು ಪ್ರದೇಶದಲ್ಲಿ ಪ್ರಥಮ ಆದಿವಾಸಿ ಸಾವಯವ ಕಾಫಿ ಉತ್ಪಾದನೆ ಮಾಡಲಾಗುತ್ತಿದೆ. ವಿಶಾಖಪಟ್ಟಣದಿಂದ ಪೂರ್ವ ಗೋದಾವರಿ ಜಿಲ್ಲೆಯವರೆಗೂ ಕಾಫಿ ಕೃಷಿ ಮಾಡಲಾಗುತ್ತಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆ, ಕೂನೂರುವಿನ ಯರ್‍ಕಾಡ್ ಮತ್ತು ಕೊಡೈಕೆನಾಲ್,ಶೇವರಾಯ್ ಬೆಟ್ಟಗಳಲ್ಲಿಯೂ ಕಾಫಿ ಯಥೇಚ್ಛವಾಗಿ ಬೆಳೆಯಲಾಗುತ್ತದೆ. ಕೇರಳದ ಮಲಬಾರ್ ಭಾಗದಲ್ಲಿ, ವಯನಾಡ್ ಜಿಲ್ಲೆ,ಮುನ್ನಾರ್, ನೆಲ್ಲಿಯಾಂಪೆಟ್ಟಿ ಮತ್ತು ರಾಜಮಲೈನಲ್ಲಿ ಕಾಫಿ ಬೆಳೆಯಲಾಗುತ್ತದೆ.

ಮಹಾರಾಷ್ಟ್ರದ ಚಿಕಲ್‍ಧಾರ, ವಿದರ್ಭ ಪ್ರದೇಶಗಳಲ್ಲಿ, ಓರಿಸ್ಸಾ, ತ್ರಿಪುರಾ, ನಾಗಲ್ಯಾಂಡ್, ಅಸ್ಸಾಂ, ಮೇಘಾಲಯ, ಮಿಜೋರಾಂ, ಮಣಿಪುರ ಹಾಗೂ ಅರುಣಾಚಲ ಪ್ರದೇಶಗಳಲ್ಲಿಯೂ ಇತ್ತೀಚೆಗೆ ಕಾಫಿ ಉತ್ಪಾದನೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಅದರಲ್ಲಿಯೂ ಕೊಡಗು ಕಾಫಿ ಬೆಳೆಗಾರರು ತೀವ್ರ ಸವಾಲು ಹಾಗೂ ಪೈಪೆÇೀಟಿಯನ್ನು ಎದುರಿಸಬೇಕಾಗಿದೆ.

ಕಾಫಿ ಕ್ಷೇತ್ರದ ಅಭಿವೃದ್ಧಿ ಪರ ಚರ್ಚೆ ಕುರಿತಂತೆ ಸುಮಾರು 100 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಾಫಿ ಸಮಾವೇಶಕ್ಕೆ 78 ದೇಶಗಳ 200 ಪ್ರತಿನಿಧಿಗಳು, ನಾಲ್ಕು ವರ್ಷಕ್ಕೊಮ್ಮೆ ಜರುಗುವ ವಿಶ್ವ ಕಾಫಿ ಸಂಘಟನೆ ಮಟ್ಟದ ಸಭೆಗೆ 1500 ವಿದೇಶಿ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಈ ಬಾರಿಯ ಕಾಫಿ ಸಮಾವೇಶವಲ್ಲದೆ ರಾಷ್ಟ್ರದಿಂದ ರಾಷ್ಟ್ರಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ, ವ್ಯಾಪಾರದಿಂದ ವ್ಯಾಪಾರಕ್ಕೆ, ಖರೀದಿದಾರ ಮತ್ತು ಮಾರಾಟಗಾರರ ಮಟ್ಟದ ವಿಶೇಷ ಸಭೆ ಒಳಗೊಂಡಂತೆ ಸುಮಾರು 7 ದಿನಗಳ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ವಿಶ್ವ ಕಾಫಿ ಸಮಾವೇಶ ಸೆ.7,8,9 ರಂದು ನಡೆದರೆ ನಂತರ 4 ದಿನಗಳು ವಿಶ್ವ ಕಾಫಿ ಸಂಘಟನೆಯ ಸದಸ್ಯ ರಾಷ್ಟ್ರಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಯಲಿದ್ದು ಇದಕ್ಕೆ ರೂ.3 ಕೋಟಿಗೂ ಅಧಿಕ ವೆಚ್ಚ ನಿಗಧಿಪಡಿಸಲಾಗಿದೆ. ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ರೂ.3 ಕೋಟಿ ಅನುದಾನವನ್ನು ಒದಗಿಸಲಿದೆ. ಇನ್ನೂ ರೂ.12 ಕೋಟಿ ಹಣವನ್ನು ಇಂಡಿಯಾ ಕಾಫಿ ಟ್ರಸ್ಟ್ ನೇತೃತ್ವದಲ್ಲಿ ಕ್ರೋಢೀಕರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬೆಳೆಗಾರರ ಸಂಘಟನೆಗಳು, ಕಾಫಿ ಬೆಳೆಗಾರರ ಸಹಕಾರದೊಂದಿಗೆ ಟಾಟಾ, ಬ್ರೂಕ್‍ಬಾಂಡ್, ನೆಸ್ಲೇ ಇಂಡಿಯಾ, ಲೆವಿಸ್ಟಾ, ಕಾಫಿ ಕೆಫೆ ಡೇ, ಕಾಫಿ ಪಬ್ ಮಾಲೀಕರು, ಹೆಸರಾಂತ ಉದ್ಯಮಿಗಳಿಂದ ಸಂಗ್ರಹಿಸಬೇಕಾದ ಹೊಣೆಗಾರಿಕೆ ಇದೆ.

ಕಾಫಿ ಮಂಡಳಿಯಿಂದ ಹೆಚ್ಚಿನ ನೆರವಿನ ನಿರೀಕ್ಷೆ ಇಲ್ಲದಿದ್ದರೂ ಭಾರತದ ಕಾಫಿ ಬೆಳೆಗಾರರ ವಸ್ತುಪ್ರದರ್ಶನಕ್ಕೆ ರಿಯಾಯಿತಿ ದರದಲ್ಲಿ ಮಳಿಗೆ ವಿತರಣೆ, ಹೋಮ್ ಸ್ಟೇ ಮಾಲೀಕರಿಗೂ ಸಹಕಾರ ನೀಡುವದು, ಏಷಿಯನ್ ಕಾಫಿ ಸ್ಪರ್ಧೆಗೆ ಉತ್ತಮ ಕಾಫಿಯನ್ನು ಆಯ್ಕೆ ಮಾಡಿ ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕಾಗಿದೆ.

ದಕ್ಷಿಣ ಭಾರತದ ಸಂಯುಕ್ತ ಬೆಳೆಗಾರರ ಒಕ್ಕೂಟ (ಉಪಾಸಿ), ಕರ್ನಾಟಕ ಬೆಳೆಗಾರರ ಫೆಡರೇಷನ್ (ಕೆ.ಜಿ.ಎಫ್.) ಕೊಡಗು ಬೆಳೆಗಾರರ ಸಂಘ (ಕೆ.ಪಿ.ಎ.) ಒಳಗೊಂಡಂತೆ ಹಲವು ಸಂಘ ಸಂಸ್ಥೆಗಳು, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಸಂಘಟನೆಗಳಿಂದ ಎಷ್ಟು ಮಟ್ಟಿಗಿನ ಸಹಾಯ, ಸಹಕಾರ ಸಿಗಬಹುದೋ ಗೊತ್ತಿಲ್ಲ. ಹೆಚ್ಚಿನ ಸಂಘಟನೆಗಳು ತಮ್ಮಲ್ಲಿ ಸಮಾವೇಶಕ್ಕೆ ನೀಡಲು ಹಣವಿಲ್ಲ ಎಂದೇ ಹೇಳುತ್ತಿರುವದರಿಂದ ಮಹಾನಗರಗಳ ಉದ್ಯಮಿಗಳನ್ನೇ ಹೆಚ್ಚಾಗಿ ಅವಲಂಬಿಸುವಂತಾಗಿದೆ. ಹೀಗಿದ್ದರೂ ಜನವರಿ ತಿಂಗಳಿನಿಂದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಪ್ರಮುಖವಾಗಿ ಕೊಡಗಿನ ಮೂರು ತಾಲ್ಲೂಕು ಕೇಂದ್ರ, ನಾಪೆÇೀಕ್ಲು, ಕುಟ್ಟ, ಗೋಣಿಕೊಪ್ಪಲು, ಕುಶಾಲನಗರ ಇತ್ಯಾದಿ ಭಾಗಗಳಲ್ಲಿ ಚಿಕ್ಕಮಗಳೂರಿನ ಕಳಸ, ಕೊಪ್ಪ ಇತ್ಯಾದಿ ಕಡೆಗಳಲ್ಲಿ, ಹಾಸನ, ಸಕಲೇಶಪುರ, ಮೂಡಿಗೆರೆ ಭಾಗಗಳಲ್ಲಿ ಬೆಳೆಗಾರರ ಸಂಪರ್ಕ ಸಭೆ, ಅಲ್ಲಲ್ಲಿ ಪತ್ರಿಕಾಗೋಷ್ಠಿಗಳನ್ನು ಏರ್ಪಡಿಸಲು ಉದ್ಧೇಶಿಸಲಾಗಿದೆ.

ಇಂಡಿಯಾ ಕಾಫಿ ಟ್ರಸ್ಟ್ ಅಧ್ಯಕ್ಷ ಅನಿಲ್‍ಕುಮಾರ್ ಭಂಡಾರಿ ಅವರ ಪ್ರಕಾರ ಇದು ಕಾಫಿ ಬೆಳೆಗಾರರ ಹಬ್ಬ. ಇದನ್ನು ಯಶಸ್ವಿಗೊಳಿಸುವದು ಪ್ರತಿಯೋರ್ವ ಕಾಫಿ ಬೆಳೆಗಾರನ ಕರ್ತವ್ಯವಾಗಿದೆ. ಏಷ್ಯಾದಲ್ಲಿ ಕಾಫಿ ಪಾನೀಯ ಸೇವಿಸುವವರ ಸಂಖ್ಯೆಯನ್ನು ಹೆಚ್ಚುಗೊಳಿಸಲು ಉದ್ಧೇಶಿತ ಸಮಾವೇಶದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಭಾರತ ಮತ್ತು ಚೀನಾದ ಜನಸಂಖ್ಯೆ ಆಧಾರದಲ್ಲಿ ಇದೀಗ ದಿನನಿತ್ಯ ತಲಾ 100 ಗ್ರಾಂ.ಗೂ ಕಡಿಮೆ ಕಾಫಿ ಆಂತರಿಕ ಬಳಕೆ ಮಾಡುವವರ ಸಂಖ್ಯೆ ಇದ್ದು, ಇದನ್ನು ಹೆಚ್ಚಿಸಿದಲ್ಲಿ ಕಾಫಿಯ ದರ ಹೆಚ್ಚಾಗಲು ಸಾಧ್ಯವಿದೆ. ವಿಶ್ವದಲ್ಲಿ ಫಿನ್‍ಲ್ಯಾಂಡ್ ದೇಶದಲ್ಲಿ ದಿನಕ್ಕೆ ತಲಾ 9 ಕೆ.ಜಿ.ಗೂ ಅಧಿಕ ವಾರ್ಷಿಕ ಆಂತರಿಕ ಲೆಕ್ಕಾಚಾರದಲ್ಲಿ ಕಾಫಿ ಪ್ರಿಯರು ಇದ್ದರೆ, ಬ್ರೆಜಿಲ್ ದೇಶದಲ್ಲಿ 6/7 ಕೆ.ಜಿ., ಅಮೇರಿಕಾದಲ್ಲಿ 4 ಕೆ.ಜಿ., ವಿಯೆಟ್ನಾಂನಲ್ಲಿ ಕಾಫಿ ಪ್ರತಿನಿತ್ಯ 1.50 ಕೆ.ಜಿ.ಸೇವನೆ ಮಾಡುತ್ತಿದ್ದಾರೆ. ಭಾರತದಲ್ಲಿ ನಿತ್ಯ ಕಾಫಿ ಸೇವಿಸುವವರು 100 ಗ್ರಾಂ.ಗಿಂತಲೂ ಕಡಿಮೆ. ಇದು 1 ಕೆ.ಜಿ.ಗೆ ವೃದ್ಧಿಯಾದಲ್ಲಿ ದೇಶದ 130ಕೋಟಿ ಜನತೆಗೆ ಹಂಚಿಕೆಯಾದಲ್ಲಿ ಇಲ್ಲಿನ ಕಾಫಿಯ ದರ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಕಾಫಿ ಶಾಪ್,ಕಾಫಿ ಪಬ್, ಕೆಫೆಟೇರಿಯಾಗಳು ಅಧಿಕವಾಗಬೇಕಾಗಿದೆ. ಕಾಫಿ ಕುಲ್ಫಿ, ಕಾಫಿ ಕೇಕ್, ಕಾಫಿ ರಸಂ, ಕಾಫಿ ಕುರ್ಮಾ, ಕಾಫಿ ಐಸ್ ಕ್ರೀಮ್ ಇತ್ಯಾದಿ ಉಪ ಉತ್ಪನ್ನಗಳೂ ಅಧಿಕವಾದಲ್ಲಿ ಏಷ್ಯಾದಲ್ಲಿಯೂ ಕಾಫಿ ಆಂತರಿಕ ಬಳಕೆ ವೃದ್ಧಿಸಲು ಸಾಧ್ಯ ಎನ್ನುವದು ಲೆಕ್ಕಾಚಾರ.

ಭಾರತದಲ್ಲಿ ಕಾಫಿ ಉತ್ಪಾದನೆ 3.19 ಮೆಟ್ರಿಕ್ ಟನ್

2017-18 ಸಾಲಿನಲ್ಲಿ ಒಟ್ಟು 3,19,500 ಮೆಟ್ರಿಕ್ ಟನ್ ಕಾಫಿ ಭಾರತದಲ್ಲಿ ಉತ್ಪಾದನೆಯಾಗಿದ್ದು, ಇದರಲ್ಲಿ 95,000 ಮೆಟ್ರಿಕ್ ಟನ್ ಅರೇಬಿಕಾ ಉತ್ಪಾದನೆಯಾಗಿದೆ. ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯ ಇತ್ಯಾದಿ ಸಮಸ್ಯೆಗಳಿಂದ ಅರೆಬಿಕಾ ಉತ್ಪಾದನೆ ಕುಂಠಿತವಾಗುತ್ತಿದೆ ಎನ್ನಲಾಗಿದೆ. ಕಳೆದ ವರ್ಷ ಕೇವಲ 3000 ಮೆ.ಟನ್ ಅಧಿಕ ಕಾಫಿ ಉತ್ಪಾದನೆಯಾಗಿದೆ ಎನ್ನಲಾಗುತ್ತಿದೆ. ಹೆಚ್ಚಿನ ಬೆಳೆಗಾರರು ದರ ಕುಸಿತದ ಹಿನ್ನೆಲೆ ಕಾಫಿಯನ್ನು ತಮ್ಮ ಗೋದಾಮಿನಲ್ಲಿಯೇ ಸಂಗ್ರಹಿಸಿಡುತ್ತಿರುವ ಲೆಕ್ಕ ಸಿಗುತ್ತಿಲ್ಲ. ಈ ಬಾರಿಯೂ ಕಾಫಿ ಮಂಡಳಿ ಸರಾಸರಿ ಕಾಫಿ ಉತ್ಪಾದನೆಯನ್ನು ಅಂದಾಜಿಸಿದ್ದರೂ, ಕೊಡಗು ಒಳಗೊಂಡಂತೆ ಚಿಕ್ಕಮಗಳೂರು ಜಿಲ್ಲೆಗಳಲ್ಲಿನ ಜಲಪ್ರಳಯ ಕಾಫಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ವಿದೇಶಿ ಉದ್ಯಮ ನೀತಿಯನ್ನು ಅಭಿವೃದ್ಧಿಪಡಿಸಲು, ರಫ್ತು ವಹಿವಾಟು ಹೆಚ್ಚಿಸುವ ಮೂಲಕ ವಿದೇಶಿ ವಿನಿಮಯವನ್ನು ಗಮನಾರ್ಹವಾಗಿ ಹೆಚ್ಚಿಸಲು,ಕಾಫಿ ಕ್ಷೇತ್ರದ ಬೆಳವಣಿಗೆಗೆ, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಕಾಫಿ ಮಂಡಳಿಯ ನೋಡೆಲ್ ಸಚಿವಾಲಯವಾಗಿ ಕಾರ್ಯನಿರ್ವಹಿಸುತ್ತಿದೆ.

ಭಾರತೀಯ ಕಾಫಿ ಮಂಡಳಿ ಆಧುನಿಕ ತಂತ್ರಜ್ಞಾನವನ್ನು ಕಾಫಿ ಕ್ಷೇತ್ರದಲ್ಲಿ ಅಳವಡಿಸಲು, ಕಾಫಿ ಗುಣಮಟ್ಟ ಸುಧಾರಿಸಲು, ಕಾಫಿ ಕ್ಷೇತ್ರ ವಿಸ್ತರಣೆ, ಕಾಫಿ ಉತ್ಪಾದನೆ ಹೆಚ್ಚಳಕ್ಕಾಗಿ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಬೇಡಿಕೆ ಹೆಚ್ಚಿಸಲು ಮತ್ತು ಭಾರತದ ಆಂತರಿಕ ಕಾಫಿ ಸೇವನೆಗೆ ಒತ್ತು ನೀಡುವಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಶ್ರಮಿಸುತ್ತಿದೆ.

ಇಂಡಿಯಾ ಕಾಫಿ ಟ್ರಸ್ಟ್ ಕಾಫಿ ಬೆಳೆಗಾರರು, ರಫ್ತುದಾರರು,ಖರೀದಿದಾರರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಾಫಿ ಬ್ರಾಂಡ್ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಕಾಫಿಯ ಬೇಡಿಕೆ ಹೆಚ್ಚಿಸಲು, ಕಾಫಿ ಆಧುನಿಕ ಯಂತ್ರೋಪಕರಣಗಳ ಪರಿಚಯ, ವಿಶ್ವದರ್ಜೆಯ ಕಾಫಿ ಹೂಡಿಕೆದಾರರನ್ನು ಭಾರತದತ್ತ ಸೆಳೆಯುವ ನಿಟ್ಟಿನಲ್ಲಿ ‘ಭಾರತ ಅಂತರಾಷ್ಟ್ರೀಯ ಕಾಫಿ ಉತ್ಸವ’ವನ್ನು ಎರಡು ವರ್ಷಕ್ಕೊಮ್ಮೆ ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ.

ಬೆಂಗಳೂರಿನ ಎಂ.ಎಂ.ಆಕ್ಟೀವ್ ಸಂಸ್ಥೆ ಭಾರತದಲ್ಲಿ ಇಂಡಿಯಾ ಕಾಫಿ ಟ್ರಸ್ಟ್ ಮತ್ತು ಕಾಫಿ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಭಾರತ ಅಂತರಾಷ್ಟ್ರೀಯ ಕಾಫಿ ಉತ್ಸವದ ಒಟ್ಟು 6 ‘ಈವೆಂಟ್ ಮ್ಯಾನೇಜ್‍ಮೆಂಟ್’ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದೆ. ಈ ಬಾರಿಯ ವಿಶ್ವ ಕಾಫಿ ಸಮಾವೇಶದ ಕಾರ್ಯಕ್ರಮ ಯಶಸ್ವಿಗೂ ಕೈಜೋಡಿಸಿದೆ.

ಭಾರತೀಯ ಪ್ರತಿನಿಧಿಗಳಿಗೆ ರಿಯಾಯಿತಿ

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ವಿಶ್ವ ಕಾಫಿ ಸಮ್ಮೇಳನ ಹಾಗೂ ಎಕ್ಸ್‍ಫೆÇೀಗೆ ವಿದೇಶಿ ಪ್ರತಿನಿಧಿಗಳಿಗೆ ಸೆ.7,8,9 ರ ಕಾರ್ಯಕ್ರಮಕ್ಕೆ ರೂ.35 ಸಾವಿರದಿಂದ ರೂ.45 ಸಾವಿರದವರೆಗೂ ಪ್ರತಿನಿಧಿ ಶುಲ್ಕ ವಿಧಿಸಲಾಗುತ್ತದೆ. ಭಾರತೀಯ ಕಾಫಿ ಬೆಳೆಗಾರರಿಗೆ ಪ್ರತಿನಿಧಿ ಶುಲ್ಕವಾಗಿ ಶೇ.50 ರಿಯಾಯಿತಿ ನೀಡಲಾಗುತ್ತದೆ ಎಂದು ಅನಿಲ್‍ಕುಮಾರ್ ಭಂಡಾರಿ ತಿಳಿಸಿದ್ದಾರೆ.

ಕಾಫಿ ಬೆಳೆಗಾರರಿಗೆ ಕಾಫಿ ಬೆಳೆಯುವ 80 ದೇಶಗಳ ಪ್ರತಿನಿಧಿಗಳೊಂದಿಗೆ ಭಾಗವಹಿಸುವ ಅವಕಾಶ. ಕಾಫಿ ರೋಸ್ಟಿಂಗ್, ರುಚಿಕರ ಕಾಫಿ ತಯಾರಿಸುವ ವಿಧಾನ, ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದ ಕಾಫಿಯನ್ನು ಕುಡಿಯಲು ಅವಕಾಶ, ಕಾಫಿಯ ಮಾರಾಟ ವಿಧಾನದ ವ್ಯವಸ್ಥೆಯನ್ನು ನೋಡುವದರೊಂದಿಗೆ ತಮ್ಮ ಕಾಫಿಯನ್ನು ನೇರವಾಗಿ ಖರೀದಿದಾರರಿಗೆ ಮಾರಾಟ ಮಾಡಲು, ಒಪ್ಪಂದ ಮಾಡಿಕೊಳ್ಳಲು ಅವಕಾಶವಿದೆ. ಕಾಫಿಯ ವಿಶ್ವವನ್ನೇ ಅನಾವರಣಗೊಳಿಸುವ ವಸ್ತುಪ್ರದರ್ಶನ ಕಾಫಿ ಕೃಷಿಕರಿಗೆ ಉಪಯುಕ್ತ ಮಾಹಿತಿ ನೀಡಲಿದೆ. ಇಷ್ಟೇ ಅಲ್ಲದೆ ವಿದೇಶಿ ಖರೀದಿದಾರರು ಇಚ್ಚಿಸಿದ್ದಲ್ಲಿ ತಮ್ಮ ಕಾಫಿ ತೋಟಕ್ಕೂ ಕರೆತಂದು ಪರಿಚಯ ಮಾಡಿಕೊಡಲು ಅವಕಾಶವಿದೆ. ಕೊಡಗಿನ ಬೆಳೆಗಾರರು ಇದೊಂದು ಕಾಫಿ ಮಂಡಳಿಯ ಅಥವಾ ‘ಇಂಡಿಯಾ ಕಾಫಿ ಟ್ರಸ್ಟ್’ ಕಾರ್ಯಕ್ರಮವೆಂದು ಪರಿಗಣಿಸದೆ ವಿಶ್ವ ಕಾಫಿ ಸಮಾವೇಶದ ಉದ್ಧೇಶ ಸಫಲವಾಗಲು ಹಾಗೂ ತಮ್ಮ ತೋಟದ ಕಾಫಿಯ ದರ ಹೆಚ್ಚಾಗಲು ಸಮಾವೇಶ ಸದ್ಭಳಕೆ ಮಾಡಿಕೊಳ್ಳಲು ವಿಫುಲ ಅವಕಾಶವಿದೆ. ಕೊಡಗಿನ ಕಾಫಿ ಬೆಳೆಗಾರರು ಕಾಫಿ ಉದ್ಯಮದ ಬಗ್ಗೆ ಹೆಚ್ಚಿಗೆ ಅರಿತುಕೊಳ್ಳಲು ಇದೊಂದು ವೇದಿಕೆಯಾಗಿದೆ.