ಗೋಣಿಕೊಪ್ಪಲು, ಡಿ.27: ನಿಂತ ಕಾರೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕೂಡಲೇ ಸ್ಥಳೀಯ ನಾಗರಿಕರು ಬೆಂಕಿ ನಂದಿಸುವ ಮೂಲಕ ಮುಂದಾಗಬಹುದಾದ ಭಾರಿ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾದರು.

ಗೋಣಿಕೊಪ್ಪ ಬೈ ಪಾಸ್ ರಸ್ತೆಯಲ್ಲಿ ವಾಸವಿರುವ ಕುಟ್ಟಪ್ಪ ಎಂಬವರು ತಮ್ಮ ಓಮಿನಿ ಕಾರನ್ನು ಮನೆಯ ಮುಂದೆಯ ರಸ್ತೆಯಲ್ಲಿ ನಿಲ್ಲಿಸಿದ್ದರು.ಸಂಜೆ 6.30 ರ ಸಮಯದಲ್ಲಿ ಇವರ ಕಾರಿನಿಂದ ಸಣ್ಣದಾಗಿ ಹೊಗೆ ಕಾಣಲಾರಂಭಿಸಿದೆ. ಈ ಘಟನೆಯನ್ನು ನೋಡಿದ ಸ್ಥಳಿಯ ನಾಗರಿಕರು ಮನೆಯಲ್ಲಿದ್ದ ಕಾರಿನ ಮಾಲೀಕರಿಗೆ ಸುದ್ದಿ ಮುಟ್ಟಿಸಿ ಕೂಡಲೇ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಅಷ್ಟೊತ್ತಿಗೆ ಕಾರಿನ ಒಳ ಭಾಗದಲ್ಲಿ ಬೆಂಕಿ ಹರಡಿಕೊಂಡಿದೆ ಸಮೀಪದ ಸೌಮ್ಯ ಪ್ರಶಾಂತ್ ಅವರು ತಮ್ಮ ಮನೆಯ ಮೋಟಾರ್ ಆನ್ ಮಾಡಿ ಪೈಪ್ ಮೂಲಕ ನೀರನ್ನು ಒದಗಿಸಿದರು. ಸ್ಥಳದಲ್ಲಿದ್ದ ಯೋಗೇಶ್ ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ಕಾರಿನಲ್ಲಿ ಶಾರ್ಟ್ ಸಕ್ರ್ಯೂಟ್ ಆದ ಹಿನ್ನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕಾರಿನ ಮಾಲೀಕ ಕುಟ್ಟಪ್ಪ ತಿಳಿಸಿದ್ದಾರೆ.