ಗೋಣಿಕೊಪ್ಪಲು, ಡಿ.27: ಕಳೆದ ಎರಡು ದಿನಗಳ ಹಿಂದೆ ಹುಲಿದಾಳಿಗೆ ಸಿಲುಕಿ ತೀವ್ರ ಗಾಯಗೊಂಡಿದ್ದ ಹಸು ಸಾವಿಗೀಡಾಗಿದ್ದು ಹಸುವನ್ನು ಕಳೆದುಕೊಂಡ ಬೊಳ್ಳು ಅವರಿಗೆ ಅರಣ್ಯ ಇಲಾಖೆಯ ವತಿಯಿಂದ ಅಧಿಕಾರಿಗಳು ಚಿಕಿತ್ಸಾ ವೆಚ್ಚ ಸೇರಿದಂತೆ 14 ಸಾವಿರ ಹಣವನ್ನು ವಿತರಿಸಿದರು.
ಶ್ರೀಮಂಗಲ ಹೋಬಳಿಯ ಕೋತೂರು ಗ್ರಾಮದ ಬೊಳ್ಳು ಅವರ ಕೊಟ್ಟಿಗೆಯ ಹತ್ತಿರ ಕಟ್ಟಿದ್ದ ಗಬ್ಬದ ಹಸುವನ್ನು ಹಗಲಿನ ವೇಳೆಯಲ್ಲಿ ಹುಲಿ ದಾಳಿ ನಡೆಸಿ ಗಾಯಗೊಳಿಸಿತ್ತು. ನಂತರ ಮಾಲೀಕರು ಹಸುವಿಗೆ ಚಿಕಿತ್ಸೆ ಕೊಡಿಸುತ್ತಾ ಬಂದಿದ್ದರು ಚಿಕಿತ್ಸೆ ಫಲಕಾರಿಯಾಗದೆ ಹಸು ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಸಿಸಿಎಪ್ ಹೀರಲಾಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹಸು ಕಳೆದುಕೊಂಡ ಮಾಲೀಕರಿಗೆ ವೈದ್ಯಕೀಯ ವೆಚ್ಚ ಹಾಗೂ ಸರಕಾರದಿಂದ ಪರಿಹಾರ ವನ್ನು ನೀಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ನಂತರ ಆರ್‍ಎಫ್‍ಒ ಅಮಿತ್ ಪರಿಹಾರ ಚೆಕ್ ವಿತರಿಸಿದರು. ಹಾಗೂ ಸ್ಥಳದಲ್ಲಿ ಹುಲಿ ಸೆರೆಗೆ ಬೋನ್ ಅಳವಡಿಸುವ ಭರವಸೆ ನೀಡಿದರು.
ಮುಗುಟಗೇರಿ ಗ್ರಾಮದಲ್ಲಿ ಹುಲಿ ಹೆಜ್ಜೆ
ಮುಗುಟಗೇರಿ ಗ್ರಾಮದ ಕಳ್ಳಿಚಂಡ ಕಟ್ಟಿ ಪೂಣಚ್ಚ ಅವರ ಗದ್ದೆಯಲ್ಲಿ ಕಳೆದ ರಾತ್ರಿ ಭಾರೀ ಗಾತ್ರದ ಹುಲಿಯೊಂದು ಒಡಾಡಿದ ಹೆಜ್ಜೆಯ ಗುರುತಿದ್ದು, ಮಾಹಿತಿಯನ್ನು ಪೊನ್ನಂಪೇಟೆ ಅರಣ್ಯಾಧಿಕಾರಿ ಯವರಿಗೆ ತಿಳಿಸಲಾಗಿದೆ. ಗ್ರಾಮದ ಸುತ್ತಮುತ್ತಲಿನ ಜನತೆ ಜಾಗ್ರತೆಯಿಂದ ಓಡಾಟ ನಡೆಸುವಂತೆ ಭಗವತಿ ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಚೀರಂಡ ಕಂದಾ ತಿಳಿಸಿದ್ದಾರೆ. - ಹೆಚ್.ಕೆ.ಜಗದೀಶ್