‘‘ಅದೃಷ್ಟಕ್ಕಾಗಿ ಕಾಯದೆ ಸ್ವಪ್ರಯತ್ನದಿಂದ ಸಾಧಿಸಬೇಕು’’ ಎಂಬದು ವಿಲಿಯಂ ಜೆನ್ನಿಂಗ್ಸ್ ಬ್ರ್ಯಾನ್ ಅಭಿಪ್ರಾಯವಾಗಿದೆ. ಮಾನವನನ್ನು ಒಳಗೊಂಡಂತೆ ಸಮಸ್ತ ಜೀವರಾಶಿಗಳು ವಾಸಿಸುವಂತಹ ಪ್ರಕೃತಿಯು ತನ್ನದೇ ಆದ ನಿಯಮಗಳನ್ನು ಪಾಲಿಸಿಕೊಂಡು ಬರುವದು ಜಗದ ನಿಯಮವಾಗಿದೆ. ಆದರೆ, ಅತಿ ಬುದ್ಧಿವಂತ ಮಾನವ ಈ ಬಗ್ಗೆ ಅರಿವಿದ್ದೂ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ನಿಯಮಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಿದ್ದುವುದರಲ್ಲಿ ಸಿದ್ಧಹಸ್ತನಾಗಿದ್ದಾನೆ. ಹೀಗೆ ತಿರುಚಿದ್ದೇ ಆದರೆ ಇಂದಲ್ಲ ನಾಳೆ ಆತ ಅದರ ಫಲ ಉಣ್ಣಲೇಬೇಕಾಗುತ್ತದೆ. ಪ್ರಕೃತಿ ನಿಯಮಗಳನ್ನು ಪಾಲಿಸುವದು ಅಥವಾ ತಿರುಚುವುದು ಅವರವರಿಗೆ ಬಿಟ್ಟ ವಿಚಾರವಾಗಿದೆ. ಇದು ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ಗೊತ್ತಿದ್ದೋ ಇಲ್ಲದೆಯೋ ತಮ್ಮ ವಿವೇಚನಾ ಶಕ್ತಿಯನ್ನು ಬದಿಗಿಟ್ಟು ಮಾಡುತ್ತಿರುವ ಪ್ರಕೃತಿಯ ಮೇಲಿನ ವ್ಯಭಿಚಾರವಾಗಿದೆ. ಪ್ರಕೃತಿಯ ಅವಿಭಾಜ್ಯರಾದ ಮಾನವರು ಪ್ರಕೃತಿಯಲ್ಲಿ ಅಡಗಿರುವ ಗುಣ-ಲಕ್ಷಣಗಳನ್ನೇ ಹೊಂದಿರುತ್ತಾರೆ.

ಮೇಲಿನ ಹಿನ್ನೆಲೆಯ ಆಧಾರದಿಂದ ಹೇಳುವದಾದರೆ ಕೆಲವು ವ್ಯಕ್ತಿಗಳು ಅವರ ಕರ್ಮಕ್ಕೆ ಅನುಸಾರವಾಗಿ ಜೀವನದಲ್ಲಿ ಕಠಿಣ ಸ್ಥಿತಿಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ, ಅಂತವರ ಮುಖ ಪ್ರಶಾಂತವಾಗಿರುತ್ತದೆ, ಅಥವಾ ತಿಳಿನಗುವಿನಿಂದ ಕೂಡಿರುವದುಂಟು. ಇನ್ನು ಕೆಲವು ವ್ಯಕ್ತಿಗಳ ಮುಖದಲ್ಲಿ ಸಿಟ್ಟು, ಸೆಡವು, ಹತಾಶೆಯ ಭಾವ ಎದ್ದು ಕಾಣುತ್ತಿರುತ್ತದೆ. ಇದು ಮನಸ್ಸಿನ ಒಳಗಿನ ಭಾವದ ಪ್ರತಿಬಿಂಬ. ಕೆಲವರನ್ನು ಕಾಣುವಾಗ ‘ನಾವಾಗಿಯೇ ಹೋಗಿ ಮಾತನಾಡಿಸುವ ಎಂಬ ಭಾವನೆ ಬಂದರೆ, ಮತ್ತೆ ಕೆಲವರನ್ನು ಕಾಣುವಾಗ ಅವರ ಮುಖಭಾವ ಮತ್ತು ಗೋಗರೆಯುವ ಸ್ವಭಾವದಿಂದ ಇಂತವರಿಂದ ತಪ್ಪಿಸಿಕೊಳ್ಳುವ ಬಗ್ಗೆ ಯೋಚಿಸಬೇಕಾಗುತ್ತದೆ. ಪ್ರಾಮಾಣಿಕವಾಗಿ ಹೇಳಬೇಕಾದರೆ ನಮ್ಮ ಆಪ್ತವಲಯವೆಂದರೆ ನಮ್ಮ ಪರಿಸರವೇ ಆಗಿದೆ. ಆದುದರಿಂದ ಅಂತಹ ಪರಿಸರದಿಂದ ನಾವು ಯಾರನ್ನು, ಯಾವದನ್ನು ಆರಿಸಿಕೊಳ್ಳುತ್ತೇವೆಯೋ ಅಂತಹ ಸಂದರ್ಭದಲ್ಲಿ ಬಲು ಎಚ್ಚರಿಕೆ ವಹಿಸುವದು ಅನಿವಾರ್ಯವಾಗುತ್ತದೆ. ಹಾಗಾದರೆ ಮಾತ್ರ ಮನಸ್ಸಿಗೆ ಶಾಂತಿ, ಸಮಾಧಾನ. ಹೀಗೆ ಆರಿಸಿಕೊಳ್ಳುವಾಗ ವ್ಯಕ್ತಿಗೆ ಅಪಾರವಾದ ತಾಳ್ಮೆ ಅಗತ್ಯ.

ಪ್ರಕೃತಿ ಎಂದರೆ ಪಾರದರ್ಶಕದ ಪ್ರತೀಕ. ಪ್ರಕೃತಿಗೆ ಕದ್ದು ಮುಚ್ಚಿಟ್ಟು ಕೊಳ್ಳುವ ಅಭ್ಯಾಸ ಇಲ್ಲ. ತಾನು ಪಡೆದುದನ್ನು ಮರು ಅರ್ಪಣೆ ಮಾಡುವದು ಖಂಡಿತ. ಪ್ರಕೃತಿಯ ಈ ವರ್ತನೆ ಮಾನವರಿಗೆ ಒಂದು ಒಳ್ಳೆಯ ಪಾಠವಾಗಿದೆ. ಆದರೆ, ಅತಿ ಬುದ್ಧಿವಂತ ಮನುಷ್ಯ ಇದನ್ನು ಅರಿತಿದ್ದರೂ ತನ್ನ ಸ್ವಾರ್ಥ ಬುದ್ಧಿಯಿಂದಾಗಿ ಪ್ರಕೃತಿಯಿಂದ ನಿರ್ಮಿತವಾದ ಸಮಾಜದಿಂದ ತಾನು ಪಡೆಯುವದು ಮಾತ್ರ ತನ್ನ ಹಕ್ಕೆಂದು ತಿಳಿಯುತ್ತಾನೆಯೇ ಹೊರತು ಪ್ರತಿಯಾಗಿ ಸಮಾಜಕ್ಕೆ ಏನನ್ನೂ ಅರ್ಪಿಸುವದಿಲ್ಲ. ಹಾಗೇನಾದರೂ ಬೇರೆಯವರ ಒತ್ತಡಕ್ಕೆ ಮಣಿದು ಕಿಂಚಿತ್ ಅರ್ಪಿಸಿಬಿಟ್ಟರಂತೂ ಅತಿಯಾದ ಚಟಪಡಿಕೆ, ಮನಸ್ಸಿನೊಳಗೆ ತನ್ನ ಸಂಪತ್ತಿನ ಭಾಗವನ್ನೇ ಕಳಕೊಂಡ ಕೊರಗು. ಆದರೆ, ಪ್ರದರ್ಶನಕ್ಕೆ ತಾನೇನೋ ವಿಶೇಷವಾದದ್ದು ಮಾಡಿದೆ ಎಂದು ಡಂಗುರ ಸಾರಿ, ಸಾರಿ ಹೇಳಿಕೊಳ್ಳುವ ಜಂಭ. ಇನ್ನು ಕೆಲವರಿರುತ್ತಾರೆ, ಇವರು ಸಮಾಜಕ್ಕೆ ಅರ್ಪಿಸುವದರಲ್ಲಿಯೇ ತೃಪ್ತಿ ಕಾಣುತ್ತಾರೆ. ಇವರು ಪ್ರಚಾರ ಪ್ರಿಯರಲ್ಲ, ಕೆಲವು ಬಾರಿ ಇಂತವರು ಸಮಾಜಕ್ಕೆ ನೀಡಿದ್ದು ಮನೆಯವರಿಗೇ ಗೊತ್ತಿರುವದಿಲ್ಲ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಸಮಾಜದಿಂದ ಬಂದದ್ದು ಸಮಾಜಕ್ಕೆ ಅರ್ಪಣೆ ಎಂಬದು ಇಂಥವರ ಮನೋಭಾವ.

ಜೋನಾಸ್ ಸಾಲ್ಕ್ ಎಂಬ ವೈದ್ಯ ಮಹಾಶಯ ಮಕ್ಕಳನ್ನು ಕಾಡುತ್ತಿದ್ದ ‘ಪೊಲೀಯೋ’ ಕಾಯಿಲೆಯನ್ನು ಬೇರು ಸಹಿತ ಈ ಪ್ರಪಂಚದಿಂದ ಕಿತ್ತೆಸೆ ಯಲು ಕಾರಣವಾದ. ಆದರೆ, ದೌರ್ಭಾಗ್ಯವಶಾತ್ ಇದರ ಯಶಸ್ಸಿನ ಕೀರ್ತಿಯನ್ನು ತನ್ನ ಒಡನಾಡಿಗಳೊಂದಿಗೆ ಹಂಚಿಕೊಳ್ಳದೆ ತನ್ನೊಬ್ಬನ ಪ್ರಯತ್ನ ಎಂಬಂತೆ ಬಿಂಬಿಸಿದ, ಪರಿಣಾಮ ಮುಂದಿನ ಸಂಶೋಧನೆಗೆ ಆತನಿಗೆ ತಜ್ಞರ ಸಹಾಯ ಸಿಗಲೇ ಇಲ್ಲ. ವ್ಯಕ್ತಿಗಳು ಯಾವಾಗಲೂ ಪರಸ್ಪರ ‘ಕೊಡುಪಡೆ’ ಪ್ರಕ್ರಿಯೆ ಬಗ್ಗೆ ತಿಳಿದಿರಬೇಕು. ಈ ಬಾಂಧವ್ಯ ಸಮಾಜಕ್ಕೆ ಭದ್ರ ಅಡಿಪಾಯ ವಾಗುತ್ತದೆ. ವಿಚಾರ ಯಾವದೇ ಇರಲಿ, ಅದರ ಬಗ್ಗೆ ನಾವು ಏನು ನಿರ್ಣಯ ತೆಗೆದುಕೊಳ್ಳುತ್ತೇವೆಯೋ ಅದರ ಮೇಲೆ ನಮ್ಮ ವ್ಯಕ್ತಿತ್ವ ಪ್ರತಿಬಿಂಬಿಸಲ್ಪಡುತ್ತದೆ. ಜೀವನದಲ್ಲಿ ಏನನ್ನೂ ಸಾಧಿಸದ ಸೋಮಾರಿ ಆಕಸ್ಮಿಕವಾಗಿ ಏನನ್ನಾದರೂ ಸಾಧಿಸಿಬಿಟ್ಟರೆ ಅದನ್ನು ಆತ ಕಂಡಕಂಡವರಿಗೆ ಅಗತ್ಯ ಇರಲಿ, ಇಲ್ಲದಿರಲಿ ತಾನಾಗಿಯೇ ಹೇಳಿ-ಹೇಳಿ ಚಿಟ್ಟು ಹಿಡಿಸಿಬಿಡುತ್ತಾನೆ. ಏಕೆಂದರೆ ಅಂತಹ ವ್ಯಕ್ತಿಗಳ ಒಳಮನಸ್ಸು ಕೇಳುವವರು ತನ್ನನ್ನು ಕೊಂಡಾಡಬೇಕು, ಹೊಗಳಬೇಕು ಎನ್ನುತ್ತಿರುತ್ತದೆ. ಭಗವಂಥನೇ ಸ್ತುತಿಪ್ರಿಯ. ಇನ್ನು ಸಾಮಾನ್ಯರ ಮನುಷ್ಯರ ಪಾಡೇನು ? ಹೊಗಳುವಿಕೆ ಎಂಬದು ಟಾನಿಕ್ ಇದ್ದಂತೆ ಜೀವನದಲ್ಲಿ ನಿಶ್ಚಿತ ಗುರಿ ಹೊಂದಿದ್ದು ಆ ಗುರಿ ಸಾಧನೆಗಾಗಿ ಕಾರ್ಯನಿರತನಾಗಿದ್ದರೆ ಇದರ ಸತ್ಪರಿಣಾಮ ಸಮಾಜದ ಮೇಲಾಗುತ್ತದೆ. ಮತ್ತು ಅಂತಹ ವ್ಯಕ್ತಿಗಳು ಸಮಾಜದಿಂದ ಗೌರವಿಸಲ್ಪಡುತ್ತಾರೆ. ಇಂತಹ ಗೌರವಕ್ಕೆ ಬೆಲೆ ಇದೆ, ಮರ್ಯಾದೆ ಇದೆ, ಮಾತ್ರವಲ್ಲ ಇಂತಹ ಗೌರವದಿಂದಾಗಿ ಸಾಹಸಿ ತರುಣರು ಪ್ರೋತ್ಸಾಹ ಗೊಂಡು ಅವರೂ ಕಾರ್ಯೋನ್ಮುಖರಾಗುತ್ತಾರೆ.

ವ್ಯಕ್ತಿಯ ಪರಿಶ್ರಮದಲ್ಲಿ ‘ಕಠಿಣ ಪರಿಶ್ರಮ’ ಮತ್ತು ಬೌದ್ಧಿಕ ಪರಿಶ್ರಮ’ ಎಂಬ ಎರಡು ವಿಧಗಳು. ಕೆಲವರು ದೈಹಿಕ ಕಠಿಣ ಪರಿಶ್ರಮವೇ ಯಶಸ್ಸಿನ ಹಾದಿ ಎಂದು ದೃಢವಾಗಿ ನಂಬಿ ಸ್ವತಃ ತಾವು ಅದರಲ್ಲಿ ತೊಡಗಿ ತನ್ನ ಜೊತೆಯವರನ್ನೂ ಅದೇ ರೀತಿ ಶ್ರಮಿಸಬೇಕೆಂದು ಬಯಸುತ್ತಾರೆ. ಮತ್ತೆ ಕೆಲವರು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಯೋಜನಾಬದ್ಧವಾಗಿ ಕಡಿಮೆ ಪರಿಶ್ರಮ ಮತ್ತು ಕಡಿಮೆ ಜನರ ಸಹಾಯದಿಂದ ಗುರಿ ಸಾಧಿಸುತ್ತಾರೆ. ಜೀವನದಲ್ಲಿ ಯಾವದೂ ಉಚಿತವಾಗಿ ಸಿಗುವದಿಲ್ಲ, ನೋವು, ನಲಿವು, ಅಡ್ಡಿ-ಅಡಚಣೆಗಳು, ಅದೃಷ್ಟ ಇವುಗಳೆಲ್ಲವೂ ಜೀವನದ ಅವಿಭಾಜ್ಯ ಅಂಗಗಳು. ಇವುಗಳು ವ್ಯಕ್ತಿಯ ಋಣಾತ್ಮಕ ಅಥವಾ ಧನಾತ್ಮಕ ಅಂಶವಾಗಿರಬಹುದು. ಆದರೆ ವ್ಯಕ್ತಿ ಮಾತ್ರ ಸ್ಥಿತಪ್ರಜ್ಞನ ಲಕ್ಷಣ ಹೊಂದಿರಬೇಕು. ಮಾತ್ರವಲ್ಲ, ತನ್ನ ಪ್ರಯತ್ನ ನಿರಂತರ ಸಾಗುವಂತೆ ಎಚ್ಚರವಹಿಸಬೇಕು. ಗುರಿ ಸಾಧಿಸುವಲ್ಲಿ ಛಲ ಬೇಕು. ಅಪಾಯವನ್ನು ಎದುರಿಸುವಲ್ಲಿ ಅಪಾರವಾದ ತಾಳ್ಮೆಬೇಕು. ದೂರದೃಷ್ಟಿಯ ಕಲ್ಪನೆ ಸ್ಪಷ್ಟವಾಗಿರಬೇಕು. ಇಷ್ಟೆಲ್ಲಾ ಎಚ್ಚರಿಕೆಗಳ ನಂತರ ಸಿಗುವ ಯಶಸ್ಸಿಗೆ ಬೆಲೆ ಕಟ್ಟಲಾದರೂ ಸಾಧ್ಯವೇ ? ಜೀವನದಲ್ಲಿ ಎಲ್ಲವೂ ಉಚಿತವಾಗಿ ಸಿಗುವದಿದ್ದರೆ ಈ ತೃಪ್ತಿ ಸಿಗಲು ಸಾಧ್ಯವಾಗುತ್ತಿತ್ತೇ ? ತಾತ್ಪರ್ಯವೆಂದರೆ ಯಾರೂ-ಯಾರಿಗೂ ಯಾವದನ್ನೂ ಉಚಿತವಾಗಿ ನೀಡಬಾರದು, ಪ್ರತಿಯೊಂದಕ್ಕೂ ಅದರದ್ದೇ ಆದ ಬೆಲೆ ಇದೆ.

ನಿಶ್ಚಿತವಾದ ಕಾರಣ ಕೊಡಲಾಗದಿದ್ದರೂ ಕೆಲವೊಮ್ಮೆ ವ್ಯಕ್ತಿಯ ಪ್ರಯತ್ನ ಸೋಲಿನಲ್ಲಿ ಮುಕ್ತಾಯಗೊಳ್ಳುವದನ್ನು ಕಾಣುತ್ತೇವೆ. ಅಂತಹ ಸಂದರ್ಭದಲ್ಲಿ ಸೋತ ವ್ಯಕ್ತಿಯನ್ನು ನಿಂದಿಸುವದಾಗಲೀ, ಟೀಕಿಸುವದಾಗಲೀ, ತೇಜೋವಧೆ ಮಾಡುವದಾಗಲೀ, ನಕಾರಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ನಿರಾಶೆ ಗೊಳಿಸುವದಾಗಲೀ ಮಾಡಬಾರದು. ಬದಲಾಗಿ ಅಂತಹವರನ್ನು ಆದಷ್ಟು ಪ್ರೋತ್ಸಾಹಿಸಬೇಕು. ಆತ್ಮೀಯತೆಯಿಂದ ಮೇಲಿಂದ ಮೇಲೆ ಒಡನಾಡಿ ಗೆಲುವಿನ ಹಲವು ದಾರಿಗಳನ್ನು ತೋರಿಸಬೇಕು. ಪ್ರತಿವ್ಯಕ್ತಿಯಲ್ಲಿ ತನ್ನದೇ ಆದ ಧನಾತ್ಮಕ ಗುಣಗಳಿರುತ್ತವೆ. ಅವನ್ನು ಗುರುತಿಸಿ ಸೋಲಿನ ಹತಾಶೆ ಯಿಂದ ಹೊರಬರುವಂತೆ ಮಾಡಿ ಆ ಮೂಲಕ ಆತನನ್ನು ಕಾರ್ಯಗತ ವಾಗುವಂತೆ ಮಾಡಿದರೆ ವ್ಯಕ್ತಿ ತನಗೂ, ತನ್ನ ಕುಟುಂಬಕ್ಕೂ ತನ್ನ ಸಮಾಜದಲ್ಲಿ ಉಪಯುಕ್ತ ವ್ಯಕ್ತಿಯಾಗಿ ಮಾರ್ಪಡುತ್ತಾನೆ. ಹಿಂಸೆಗೆ ಹಿಂಸೆಯೇ ದಾರಿ ಹೊರತು ಪರಿಹಾರವಲ್ಲ, ವಿವೇಚನಾ ರಹಿತರು ಮಾತ್ರ ಹಿಂಸೆ ದಾರಿ ಹಿಡಿಯುತ್ತಾರೆ. ಹಿಂಸೆಯಿಂದಾದ ಗಾಯವನ್ನು ಮಾಯುವಂತೆ ಮಾಡುವದು, ‘ಅನುಕಂಪ’ ಹಿಂಸೆಗೆ ಗುರಿಯಾದ ವ್ಯಕ್ತಿಯತ್ತ ಅನುಕಂಪದ ದೃಷ್ಟಿ ಬೀರಿ, ಆತನನ್ನೆತ್ತಿ, ಸಾಂತ್ವನ ಹೇಳಿ, ಪ್ರೋತ್ಸಾಹಿಸಿ, ಸಮಾಜದೆಡೆಗೆ ಉಪಯುಕ್ತವಾಗುವಂತೆ ಪರಿವರ್ತಿಸುವದರಲ್ಲಿ ಕರುಣೆಯ ಪಾತ್ರವೂ ಇದೆ. ಇಲ್ಲಿ, ಯಾರೂ ಯಾರನ್ನೂ ದೂಷಿಸದಿರುವಂತೆ ಎಚ್ಚರವಹಿಸಬೇಕು. ಹಿಂಸೆಗೆ ಮೂಲ ಕಾರಣ ಮನುಷ್ಯ ಮನುಷ್ಯನನ್ನು ನಂಬದಿರುವದು. ಈ ಕಾರಣದಿಂದಾಗಿ ಒಬ್ಬನ ಬಗ್ಗೆ ಇನ್ನೊಬ್ಬನ ಸಂಶಯ. ಸಂಶಯ ಹರಡಲು ಕಾರಣ ಅನಗತ್ಯ ಕಾಡು ಹರಟೆ, ಕಾಡು ಹರಟೆÉಗೆ ಒಳ್ಳೆಯ ಗೊಬ್ಬರ ಎಂದರೆ ನಡೆಯದಿರುವ ಘಟನೆಯನ್ನು ತನಗೆ ಬೇಕಾದಂತೆ ಊಹಿಸುವದು, ಅದು ನಡೆದಂತೆ ಕಥೆ ಕಟ್ಟುವದು, ನಂತರ ಅದಕ್ಕೆ ಬೇಕಾದ ರೂಪು ಕೊಟ್ಟು ಜನರ ಮಧ್ಯದಲ್ಲಿ ಹರಿಯಬಿಡುವುದು. ಇಷ್ಟು ಮಾಡಿದರೆ ‘ಬೆಂಕಿಗೆ ತುಪ್ಪ’ ಸುರಿದಂತಾಗುತ್ತದೆ. ಇದರ ಪರಿಣಾಮ ಮಾತ್ರ ಬಲು ಗಂಭೀರ ವಾಗಿರುತ್ತದೆ, ಸಮಾಜ ಘಾತುಕವಾಗಿರುತ್ತದೆ. ಹೀಗಾಗಾದಂತೆ ಎಚ್ಚರ ವಹಿಸಬೇಕಾದ ಜವಾಬ್ದಾರಿಕೆ ತರುಣ ಸಮಾಜದ ಮೇಲಿದೆ. ಸಂಶಯದ ಜಾಗದಲ್ಲಿ ಪರಸ್ಪರ ಪ್ರೀತಿ ಬರುವಂತೆ ಮಾಡಿದರೆ ಸಮಸ್ಯೆಗಳು ಪರಿಹಾರÀ ವಾಗುವದರಲ್ಲಿ ಸಂಶಯವಿಲ್ಲ. ಎಲ್ಲಿ ಪರಸ್ಪರ ಪ್ರೀತಿ ಇದೆಯೋ ಅಲ್ಲಿ ಸಂಶಯಕ್ಕೆ ಎಡೆ ಇಲ್ಲ. (ಮೂಲ : ಭವಾನ್ಸ್ ಜರ್ನಲ್)

-ಜಿ.ಟಿ. ರಾಘವೇಂದ್ರ

9480463090

gಣಡಿಚಿghಚಿveಟಿಜಡಿಚಿ@gmಚಿiಟ.ಛಿom