ಪ್ರಧಾನಿ ಮನೆಗೆ ಮುತ್ತಿಗೆ ಯತ್ನ

ನವದೆಹಲಿ, ಡಿ. 27: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರ ಚಳಿಯ ನಡುವೆಯೂ ಶುಕ್ರವಾರ ಜಮಾ ಮಸೀದಿ ಬಳಿ ಸಾವಿರಾರು ಜನ ಸೇರಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಮತ್ತು ದೆಹಲಿ ಮಾಜಿ ಶಾಸಕ ಸೋಯಿಬ್ ಇಖ್ಬಾಲ್ ಸೇರಿದಂತೆ ಹಲವರು ಧರಣಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅಲ್ಕಾ ಲಾಂಬಾ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿ ನಿರುದ್ಯೋಗ ನಿಜವಾದ ಸಮಸ್ಯೆಯಾಗಿದ್ದು, ಪ್ರಧಾನಿ ಮೋದಿ ಈ ಬಗ್ಗೆ ಗಮನಹರಿಸುವ ಬದಲು ಎನ್‍ಆರ್‍ಸಿಗಾಗಿ ಜನರನ್ನು ಕ್ಯೂನಲ್ಲಿ ನಿಲ್ಲುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮತ್ತೊಂದು ಕಡೆ ಭೀಮ್ ಆರ್ಮಿ ಕಾರ್ಯಕರ್ತರು ಎನ್‍ಆರ್‍ಸಿ ವಿರೋಧಿಸಿ ಹಾಗೂ ಬಂಧಿತ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪ್ರಧಾನಿ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

“ಆಸ್ಕ್ ಆಧಾರ್’’ ಹೊಸ ಸೇವೆ

ನವದೆಹಲಿ, ಡಿ. 27: ಆಧಾರ್ ಕಾರ್ಡುದಾರರಿಗೆ ಭಾರತೀಯ ವಿಶಿಷ್ಟ ಗುರುತು ಸಂಖ್ಯೆಗಳ ಪ್ರಾಧಿಕಾರ (ಯುಐಎಐ) “ಆಸ್ಕ್ ಆಧಾರ್’’ ಹೆಸರಿನಲ್ಲಿ ಮತ್ತೊಂದು ಹೊಸ ಸೇವೆಯನ್ನು ಪ್ರಾರಂಭಿಸಿದೆ. ಯುಐಡಿಎಐ ಛಾಟ್‍ಬಾಟ್ ಸೇವೆ ಅಂದರೆ, ಆಧಾರ್‍ಗೆ ಸಂಬಂಧಿಸಿದ ಸಂದೇಹಗಳು, ಸಮಸ್ಯೆಗಳಿಗೆ ಛಾಟ್‍ಬಾಟ್ ಸೇವೆಯನ್ನು ಬಳಸಿಕೊಂಡು ಜನರು ಆಧಾರ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ನೀವು ಯುಐಡಿಎಐ ಅಧಿಕೃತ ವೆಬ್‍ಸೈಟ್ hಣಣಠಿs://uiಜಚಿi.gov.iಟಿ/ ಅನ್ನು ತೆರೆದರೆ, ಛಾಟ್‍ಬಾಟ್ ಐಕಾನ್ ಕಾಣಿಸಿಕೊಳ್ಳುತ್ತದೆ. ಆ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ಸಮಸ್ಯೆಯನ್ನು ವಿವರಿಸಬಹುದು. ಆಧಾರ್ ನವೀಕರಣ ಮಾಹಿತಿ, ಆಧಾರ್ ಸ್ಥಿತಿ, ಡೌನ್‍ಲೋಡ್ ಇ ಆಧಾರ್, ಆಧಾರ್ ದಾಖಲಾತಿ ಈ ರೀತಿ ಆಧಾರ್‍ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಹುದು. ಪ್ರಸ್ತುತ ಹಿಂದಿ ಮತ್ತು ಇಂಗ್ಲೀಷ್‍ನಲ್ಲಿ ಛಾಟ್‍ಬಾಟ್ ಸೇವೆ ಲಭ್ಯವಿದೆ. ಆಧಾರ್‍ಗೆ ಸಂಬಂಧಿಸಿದ ವೀಡಿಯೋಗಳು. ಸಂಬಂಧಿತ ವಿಷಯಗಳನ್ನು ಇದೇ ವೀಡಿಯೋದಲ್ಲಿ ವೀಕ್ಷಿಸಬಹುದು.

ಸೇನಾಪಡೆಗಳು ಜಾತ್ಯತೀತವಾಗಿವೆ

ನವದೆಹಲಿ, ಡಿ. 27: ಭಾರತೀಯ ಸೇನಾಪಡೆಗಳು ಅತ್ಯಂತ ಉತ್ತಮ ಜಾತ್ಯತೀತತೆಯಿಂದ ಕೂಡಿದ್ದು ಮಾನವೀಯತೆ ಹಾಗೂ ಸಭ್ಯತೆಗೆ ಹೆಸರಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ದಿನದ ತರುವಾಯ ರಾವತ್ ಈ ಹೇಳಿಕೆ ಬಂದಿದೆ. ಹಿಂಸೆ ನಡೆಸಲು, ಅಗ್ನಿಸ್ಪರ್ಶ ಮಾಡಲು ದೊಡ್ಡ ಜನಸಮೂಹವನ್ನು ಪ್ರಚೋದಿಸುವುದು ನಾಯಕತ್ವಕ್ಕೆ ತಕ್ಕುದಲ್ಲ ಎಂದು ರಾವತ್ ಹೇಳಿಕೆ ನೀಡುವ ಮೂಲಕ ಪೌರತ್ವ ಕಾಯ್ದೆ ಕುರಿತು ವಿವಾದದ ಹೇಳಿಕೆ ನೀಡಿದ್ದರು. ಭಾರತೀಯ ಸಶಸ್ತ್ರ ಪಡೆಗಳು ಮಾನವ ಹಕ್ಕುಗಳ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿವೆ. ಭಾರತೀಯ ಸೇನೆಯಲ್ಲಿ ಮಾನವ ಹಕ್ಕುಗಳ ಘಟಕವನ್ನು ನಿರ್ದೇಶನಾಲಯದ ಮಟ್ಟಕ್ಕೆ ನವೀಕರಿಸಿದ್ದೇವೆ. ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚು ಶಿಸ್ತುಬದ್ಧವಾಗಿವೆ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಗಳ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿವೆ ಎಂದು ರಾವತ್ ಹೇಳಿದರು.

ಕಾರ್ಗಿಲ್‍ನಲ್ಲಿ ಇಂಟರ್ನೆಟ್ ಸೇವೆ ಆರಂಭ

ಶ್ರೀನಗರ, ಡಿ. 27: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ವಿಧಿ ರದ್ದುಗೊಂಡು 145 ದಿನಗಳ ಬಳಿಕ ಲಡಾಖ್‍ನ ಕಾರ್ಗಿಲ್‍ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಪುನರಾರಂಭಿ ಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಗಿಲ್‍ನಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ತಹಬದಿಗೆ ಬಂದ ಬಳಿಕ ಹಾಗೂ ಕಳೆದ 4 ತಿಂಗಳುಗಳಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದ ಹಿನ್ನೆಲೆ ಇಂಟರ್ನೆಟ್ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂಟರ್ನೆಟ್ ಸೇವೆಗಳು ಪುನರಾರಂಭ ವಾಗಿರುವ ಹಿನ್ನೆಲೆ ಸ್ಥಳೀಯ ಧಾರ್ಮಿಕ ನಾಯಕರು, ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಮನವಿ ಮಾಡಿ ಕೊಂಡಿದ್ದಾರೆ. ಬ್ರಾಂಡ್ ಬ್ಯಾಂಡ್ ಸೇವೆಗಳು ಈಗಾಗಲೇ ಕಾರ್ಗಿಲ್‍ನಲ್ಲಿ ಚಾಲ್ತಿಯಲ್ಲಿದ್ದು, ಇದೀಗ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಪುನರಾರಂಭಿಸಲಾಗಿದೆ.

ಮಂಗಳೂರಿನಲ್ಲಿ ವಿಹೆಚ್‍ಪಿ ಸಭೆ

ಮಂಗಳೂರು, ಡಿ. 27: ಬಂದರು ನಗರಿ ಮಂಗಳೂರಿನಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ವಿಶ್ವ ಹಿಂದೂ ಪರಿಷತ್ (ವಿಹೆಚ್‍ಪಿ) ಸಭೆ ಆರಂಭಗೊಂಡಿದೆ. ಪೌರತ್ವ ತಿದ್ದುಪಡಿ ವಿಧೇಯಕ (ಸಿಎಎ) ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದೆ. ಬಲಪಂಥೀಯ ಹಿಂದೂ ಗುಂಪಿನ ಪ್ರಬಂಧ ಸಮಿತಿ ಮತ್ತು ಅದರ ಪ್ರಣ್ಯಾಸಿ ಮಂಡಲ್ ಬೈಠಕ್ ಸಭೆಗಳು, ಉತ್ತರ ಪ್ರದೇಶದ ಪ್ರಯಾಗರಾಜ್‍ನಲ್ಲಿ ಜನವರಿ 20 ರಂದು ನಡೆಯಲಿರುವ ಮಾರ್ಗದರ್ಶಕ್ ಮಂಡಲ್ ನಿರ್ಣಾಯಕ ಸಭೆಗೆ ಮುನ್ನ ನಡೆಯಲಿದೆ. ದೇಶ ವಿಭಜನೆಯ ವೇಳೆ ಎಸಗಲಾದ ಐತಿಹಾಸಿಕ ಪ್ರಮಾದದಿಂದ ಕೋಟ್ಯಾಂತರ ಹಿಂದೂಗಳಿಗೆ ಆಗಿರುವ ಅನ್ಯಾಯ, ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮದಿಂದ ನಿವಾರಣೆಯಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ. ಹಿಂದೂಗಳ ಸಂಘಟನೆಯಾಗಿರುವ ವಿಶ್ವ ಹಿಂದೂ ಪರಿಷತ್ ನೆರೆಯ ಮೂರು ಮುಸ್ಲಿಂ ದೇಶಗಳಲ್ಲಿನ ಹಿಂದೂಗಳು ಭಾರತೀಯ ಪೌರತ್ವ ಸ್ವೀಕರಿಸುವಂತೆ ಮಾಡಲು ತನ್ನ ಎಲ್ಲ ಪ್ರಯತ್ನ ನಡೆಸಲಿದೆ. ಸಿಎಎ ಕಾಯ್ದೆ ಸಂಬಂಧ ದೇಶಾದ್ಯಂತ ತಪ್ಪು ಹಾಗೂ ಸುಳ್ಳು ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದೆ.