*ಗೋಣಿಕೊಪ್ಪಲು, ಡಿ. 26: ತಿತಿಮತಿ ಗ್ರಾಮದ ನೊಕ್ಯ ಎಡತೊರೆಯಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಘಟನೆ ನಡೆದಿದೆ. ಗ್ರಾಮದ ನಿವಾಸಿ ಚೆಪ್ಪುಡೀರ ರಾಜ ಮಾದಯ್ಯ ಅವರ ಗದ್ದೆಯಲ್ಲಿ ಹಸುವನ್ನು ಮೇಯಲು ಕಟ್ಟಿ ಹಾಕಿದ್ದ ಸಂದರ್ಭ 3 ಗಂಟೆ ಸಮಯದಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಹಗಲಿನಲ್ಲೇ ಹುಲಿ ಹಸುಗಳ ಮೇಲೆ ದಾಳಿ ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಳೆದ 3 ತಿಂಗಳ ಹಿಂದೆಯೂ ಮಾದಯ್ಯ ಅವರ ಹಸುವನ್ನು ಹುಲಿ ದಾಳಿ ನಡೆಸಿ ಬಲಿ ಪಡೆದಿತ್ತು. ಆದರೆ ಇಲಾಖೆಯಿಂದ ಯಾವುದೇ ಪರಿಹಾರ ದೊರೆತಿಲ್ಲ. ಇದೀಗ ಹುಲಿ ದಾಳಿಗೆ ಮಾದಯ್ಯ ಅವರು ಮತ್ತೊಂದು ಹಸುವನ್ನು ಕಳೆದುಕೊಂಡು ದುಃಖಿತ ರಾಗಿದ್ದಾರೆ. ಹುಲಿ ದಾಳಿ ನಡೆಸಿದ ಸ್ಥಳದಲ್ಲಿ ಬೋನು ಇಡುವಂತೆ ಮನವಿ ಮಾಡಿದರೂ, ಅಧಿಕಾರಿಗಳು ನಿರ್ಲಕ್ಷ್ಯ ದೋರಣೆ ತಾಳುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಮತ್ತಷ್ಟು ನಷ್ಟ ಹುಲಿ ದಾಳಿಯಿಂದ ಸಂಭವಿಸ ಬಹುದು ಎಂಬ ಭಯ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ನಿರಂತರವಾಗಿ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗುತ್ತಿರುವುದು ಮತ್ತು ಹಗಲಿನಲ್ಲೇ
(ಮೊದಲ ಪುಟದಿಂದ) ಗ್ರಾಮದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯ ಬೆಳೆಗಾರರಿಗೆ ಸಮಸ್ಯೆ ಎದುರಾಗಿದೆ. ಕಾಫಿ ಮತ್ತು ಗದ್ದೆ ಕೆಲಸದ ಸೂಕ್ತ ಸಮಯವಾದುದರಿಂದ ತೋಟ ಕಾರ್ಮಿಕರು ಕೆಲಸಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೆಳೆಗಾರರು ಸಂಕಷ್ಟ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ಎನ್.ಎನ್. ದಿನೇಶ್