ಶ್ರೀಮಂಗಲ, ಡಿ. 26: ನೆಮ್ಮಲೆ ಮಾನಸ ಯುವಕ ಮಂಡಳಿಯ ಆಶ್ರಯದಲ್ಲಿ ಹಿಂದು ಕಪ್ ವಾಲಿಬಾಲ್ ಅಂತಿಮ ಪಂದ್ಯವು ಅತ್ಯಂತ ರೋಚಕ ಹಣಾಹಣಿಯಿಂದ ಕೂಡಿತ್ತು. ಎರಡು ತಂಡಗಳು ಕೂಡ ಮೂರು ಸೆಟ್ ಆಟದಲ್ಲೂ ಸಮಬಲದ ಪ್ರದರ್ಶನ ನೀಡಿ ಅಂತಿಮವಾಗಿ 31-30 ರ ಅಂತರದಲ್ಲಿ ಬಿರುನಾಣಿ ತಂಡವು ಜಯಗಳಿಸಿತು. ಎರಡನೇ ಬಹುಮಾನ ಕುಟ್ಟ ತಂಡದ ಹಾಗೂ ಮೂರನೇ ಬಹುಮಾನ ಟಿ. ಶೆಟ್ಟಿಗೇರಿ ತಂಡದ ಪಾಲಾಯಿತು.

ಸುಮಾರು 14 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಬಹುತೇಕ ಪಂದ್ಯಗಳು ನೇರ ಸೆಟ್‍ನಲ್ಲಿ ಅಂತ್ಯಗೊಂಡಿದ್ದು, ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದ ತಂಡಗಳ ನಡುವೆ ನಡೆದ ಪಂದ್ಯ ಮಾತ್ರ ಮೂರು ಸೆಟ್‍ಗಳಲ್ಲಿ ಮುಕ್ತಾಯ ಕಂಡಿತು. ಬಹುಮಾನ ವಿತರಣೆಯ ಸಂದರ್ಭ ಪ್ರಾಸ್ತಾವಿಕವಾಗಿ ಟಿ. ಶೆಟ್ಟಿಗೇರಿ ಗ್ರಾ.ಪಂ. ಸದಸ್ಯ ಚೆಟ್ಟಂಗಡ ರಂಜು ಕರುಂಬಯ್ಯ ಗ್ರಾಮ ಗ್ರಾಮಗಳ ನಡುವೆ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದಾಗಿ ತಿಳಿಸಿದರು.

ವೀರಾಜಪೇಟೆ ತಾ.ಪಂ. ಮಾಜಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಕೊಡಗು ಜಿಲ್ಲೆ ಕೇವಲ ಆರು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದರೂ ಸೇನೆ, ಯುದ್ದ, ಶಾಂತಿ ಸಂದಾನದ ಸಂದರ್ಭದಲ್ಲಿ ದೇಶಕ್ಕೆ ಅತೀ ದೊಡ್ಡ ಕೊಡುಗೆ ನೀಡಿದೆ. ಕ್ರೀಡಾ ಕ್ಷೇತ್ರದಲ್ಲಿ ಅತೀ ಹೆಚ್ಚು ಒಲಂಪಿಕ್ಸ್ ಹಾಗೂ ಅಂತರರಾಷ್ಟ್ರೀಯ ಕ್ರೀಡಾ ಕೂಟಗಳನ್ನು ದೇಶಕ್ಕೆ ನೀಡಿದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ವೇದಿಕೆಯಲ್ಲಿ ಲೇಖಕಿ ಉಳುವಂಗಡ ಕಾವೇರಿ ಉದಯ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಕ್ರೀಡೆ ಹಾಗೂ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ತೀರ್ಪುಗಾರ ಚಂಗುಲಂಡ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.