ಕೂಡಿಗೆ, ಡಿ. 26: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕುಶಾಲನಗರ ವ್ಯಾಪ್ತಿಯ ಹೆಬ್ಬಾಲೆ, ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ರಸ್ತೆ ಅಭಿವೃದ್ಧಿಗೆ ಸುಮಾರು ರೂ. 3 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಹೆಬ್ಬಾಲೆಯ ಮುಖ್ಯರಸ್ತೆಯ ಕಾಂಕ್ರಿಟ್ ಕಾಮಗಾರಿ ನಡೆಸಲು ರೂ. 1 ಕೋಟಿ, ಬಸವೇಶ್ವರ ಬಡಾವಣೆಯ ರಸ್ತೆಗೆ ರೂ. 50 ಲಕ್ಷ, ಕೂಡಿಗೆ ಗ್ರಾ.ಪಂ.ನ ಮದಲಾಪುರ - ಸೀಗೆಹೊಸೂರು ರಸ್ತೆಗೆ ರೂ. 60 ಲಕ್ಷ, ಕೂಡುಮಂಗಳೂರು - ಹಾರಂಗಿ ರಸ್ತೆಗೆ ರೂ. 60 ಲಕ್ಷ ಸೇರಿದಂತೆ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ನಂತರ ಮಾತನಾಡಿದ ಅವರು ಸರ್ಕಾರದಿಂದ ಈಗಾಗಲೇ ರಸ್ತೆ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದು, ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ, ತೀರಾ ಹಾಳಾಗಿರುವ ರಸ್ತೆಗಳಿಗೆ ಹೆಚ್ಚಿನ ಅನುದಾನ ಕಾದಿರಿಸಿರುವುದರ ಜೊತೆಗೆ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

ಕಾಮಗಾರಿ ಶೀಘ್ರದಲ್ಲೇ ಪ್ರಾರಂಭ

ನೀರಾವರಿ ಇಲಾಖೆಯ ವತಿಯಿಂದ ಸರ್ಕಾರಕ್ಕೆ ರೂ. 17 ಕೋಟಿ ವೆಚ್ಚದಲ್ಲಿ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು ಹಾಗೂ ನೀರಾವರಿ ಇಲಾಖೆಯ ಅಚ್ಚುಕಟ್ಟು ವ್ಯಾಪ್ತಿಗೊಳಪಡುವ ಮುಖ್ಯರಸ್ತೆ ಹಾಗೂ ಉಪ ರಸ್ತೆಗಳ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗಾಗಲೇ ಕಾಮಗಾರಿಯ ಕ್ರಿಯಾಯೋಜನೆ ಅನುಗುಣವಾಗಿ ಹಣ ಬಿಡುಗಡೆಗೊಂಡಿದ್ದು, ಕಾಮಗಾರಿಯೂ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.

ಈಗಾಗಲೇ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪೈಸಾರಿ ಜಾಗವನ್ನು ಗುರುತಿಸಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಮುಖೇನ ಗ್ರಾಮದ ದಾಖಲಾತಿಯನ್ನು ಪಡೆದು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಪೈಸಾರಿ ಜಾಗದ ಬಗ್ಗೆ ಚರ್ಚಿಸಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರಿಗೆ ನಿವೇಶನ ನೀಡುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಬಡಾವಣೆಯ ಸಮೀಪವಿರುವ ಊರುಡುವೆ ಜಾಗ 3 ಎಕರೆ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಅದೇ ರೀತಿಯಲ್ಲಿ ಕೂಡಿಗೆಯ ಬ್ಯಾಡಗೊಟ್ಟ ಗ್ರಾಮದಲ್ಲಿಯೂ ನಿವೇಶನ ರಹಿತರಿಗೆ ನಿವೇಶನ ನೀಡಲು ಈಗಾಗಲೇ 150 ಮಂದಿಯ ಫಲಾನುಭವಿಗಳ ಆಯ್ಕೆ ನಡೆದಿದ್ದು, ಮುಂದಿನ ದಿನಗಳಲ್ಲಿ ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್, ಕೆ.ಆರ್. ಮಂಜುಳಾ, ತಾಲೂಕು ಪಂಚಾಯ್ತಿ ಸದಸ್ಯರಾದ ಗಣೇಶ್, ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷೆ ಲತಾ, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಹೆಬ್ಬಾಲೆ ಗ್ರಾ.ಪಂ ಉಪಾಧ್ಯಕ್ಷೆ ಪದ್ಮ, ಹೆಬ್ಬಾಲೆ ಗ್ರಾ.ಪಂ ಸದಸ್ಯರಾದ ವೆಂಕಟೇಶ್, ಜಿ.ಪಂ. ಮಾಜಿ ಸದಸ್ಯ ವಿ.ಎಂ. ವಿಜಯ, ಆರ್‍ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಕೂಡುಮಂಗಳೂರು ಸಹಕಾರ ಸಂಘದ ನಿರ್ದೇಶಕ ಕೆ.ಕೆ. ಭೋಗಪ್ಪ, ಕೂಡುಮಂಗಳೂರು ಗ್ರಾ.ಪಂ. ಸದಸ್ಯರಾದ ಸಾವಿತ್ರಿ ರಾಜನ್, ಸುರೇಶ್, ಜಯಂತಿ ಸೋಮಾಚಾರಿ, ಕೂಡಿಗೆ ಗ್ರಾ.ಪಂ. ಸದಸ್ಯರಾದ ಪುಷ್ಪ, ಚಂದ್ರಿಕ, ಕಲ್ಪನಾ, ರತ್ನಮ್ಮ, ಮಂಜಯ್ಯ, ತಾಲೂಕು ಬಿಜೆಪಿ ಕಾರ್ಯದರ್ಶಿ ಕೆ. ವರದ, ಯುವ ಮೋರ್ಚ ಅಧ್ಯಕ್ಷ ಬೊಮ್ಮಯ್ಯನ ಚಿಣ್ಣಪ್ಪ, ಮಂಜುನಾಥ್, ಕಿರಣ್, ತಾಲೂಕು ಎಸ್‍ಟಿ ಘಟಕದ ಅಧ್ಯಕ್ಷ ಪ್ರಭಾಕರ್ ಸೇರಿದಂತೆ ಮೂರು ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ವಿವಿಧ ಘಟಕಗಳ ಅಧ್ಯಕ್ಷರು, ಸದಸ್ಯರು, ಪಕ್ಷದ ಕಾರ್ಯಕರ್ತರು ಇದ್ದರು.ಒಡೆಯನಪುರ: ಕೊಡ್ಲಿಪೇಟೆಯ ವಿವಿಧ ಕಡೆಯಲ್ಲಿ ರಸ್ತೆ ಚರಂಡಿ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು. ಕೊಡ್ಲಿಪೇಟೆ ಗ್ರಾ.ಪಂ. ವ್ಯಾಪ್ತಿಯ ನವಗ್ರಾಮಕ್ಕೆ ರೂ. 5 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.

ಕೊಡ್ಲಿಪೇಟೆ ಕಲ್ಲಳಿ ಗ್ರಾಮದ ಮಠಕ್ಕೆ ಹೋಗುವ ಕಾಂಕ್ರಿಟ್ ರಸ್ತೆಗೆ ಚಾಲನೆ ನೀಡಿದ ಅವರು, ಮಠದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಸರಕಾರದಿಂದ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು. ಬೆಸೂರು ಗ್ರಾ.ಪಂ. ವ್ಯಾಪ್ತಿಯ ದೊಡ್ಡ ಭಂಡಾರ ಗ್ರಾಮಕ್ಕೆ ರೂ. 35 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಪ್ರಮುಖರಾದ ಬಾಬು ರಾಜೇಂದ್ರ ಪ್ರಸಾದ್, ಪ್ರಸಾದ್ ಪಟೇಲ್, ಭಗವಾನ್ ಮುಂತಾದವರು ಹಾಜರಿದ್ದರು.

ನಿಡ್ತ: ನಿಡ್ತ ಗ್ರಾ.ಪಂ. ವ್ಯಾಪ್ತಿಯ ಮುಳ್ಳೂರು-ಹೊನ್ನೆಕೊಪ್ಪಲು ರಸ್ತೆ ಅಭಿವೃದ್ಧಿಗಾಗಿ ರೂ. 32 ಲಕ್ಷ ಬಿಡುಗಡೆಯಾಗಿರುವ ಹಿನ್ನೆಲೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ತಾ.ಪಂ. ಸದಸ್ಯೆ ಲೀಲಾವತಿ ಮಹೇಶ್, ನಿಡ್ತ ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಮುಸ್ತಾಫಾ, ಪಿಡಿಓ ಪ್ರತಿಮಾ ಮುಂತಾದವರು ಹಾಜರಿದ್ದರು.