ಮಕ್ಕಳನ್ನು ಮಣ್ಣಿನಲ್ಲಿ ಹೂತ್ತಿಟ್ಟರು !
ಕಲಬುರ್ಗಿ, ಡಿ. 26: ಶತಮಾನದ ಸೂರ್ಯ ಗ್ರಹಣ ಮುಕ್ತಾಯಗೊಂಡಿದೆ. ಈ ಗ್ರಹಣ ಕೆಲವು ವಿಚಿತ್ರ ಆಚರಣೆಗಳು ಇನ್ನೂ ಚಾಲ್ತಿಯಲ್ಲಿರುವುದನ್ನು ಬೆಳಕಿಗೆ ತಂದಿದೆ. ಕಲಬುರ್ಗಿ ಜಿಲ್ಲೆ ತಾಜ್ಸುಲ್ತಾನ್‍ಪುರ ಗ್ರಾಮದಲ್ಲಿ ಗ್ರಹಣದ ವೇಳೆ ಮಕ್ಕಳನ್ನು ಕುತ್ತಿಗೆವರೆಗೂ ಮಣ್ಣಲ್ಲಿ ಹೂತಿದ್ದು ವರದಿಯಾಗಿದೆ. ಸಂಜನಾ (4), ಪೂಜಾ ಕ್ಯಾಮಲಿಂಗ (6) ಕಾವೇರಿ (11) ಈ ಮೂವರು ಮಕ್ಕಳನ್ನು ಗ್ರಹಣದ ವೇಳೆ ಮಣ್ಣಲ್ಲಿ ಕುತ್ತಿಗೆವರೆಗೂ ಹೂಳಲಾಗಿತ್ತು. ಈ ಮೂರು ಮಕ್ಕಳು ವಿಶೇಷಚೇತನರಾಗಿದ್ದು, ಗ್ರಹಣದ ವೇಳೆ ಈ ರೀತಿ ಮಾಡಿದರೆ ಅಂಗಾಂಗಗಳ ಸಮಸ್ಯೆ ಹೋಗಲಾಡಿಸುವುದು ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಂದ ಈ ಕೃತ್ಯ ಎಸಗಿದ್ದಾರೆ. ಇನ್ನು ಚಿಂಚೋಳಿ ತಾಲೂಕಿನಲ್ಲಿಯೂ ಇಂಥಹದ್ದೇ ಘಟನೆ ನಡೆದಿದ್ದು, 4 ಮಕ್ಕಳನ್ನು ಕುತ್ತಿಗೆವರೆಗೂ ಹೂಳಲಾಗಿತ್ತು. ವರದಿಗಳ ಪ್ರಕಾರ ಜನವಾದಿ ಮಹಿಳಾ ಸಂಘಟನೆ ಈ ಕೃತ್ಯವನ್ನು ಪ್ರತಿಭಟಿಸಿ ಭಾಗಶಃ ಹೂಳಲಾಗಿದ್ದ ಮಕ್ಕಳನ್ನು ಮೇಲೆತ್ತಿದ್ದಾರೆ.
ಮಂಗಳೂರು ಮೃತರಿಗೆ ಮಮತಾ ಪರಿಹಾರ
ಕೋಲ್ಕತ್ತಾ, ಡಿ. 26: ಸಿಎಂ ಯಡಿಯೂರಪ್ಪ ಪರಿಹಾರ ಘೋಷಣೆ ಹಿಂಪಡೆದ ಬೆನ್ನಲ್ಲೇ ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್‍ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ರೂ. 5 ಲಕ್ಷ ನೀಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಪ್ರತಿಭಟನೆಗಿಳಿದಿದ್ದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ಇಂದು ಸಹ ಬೃಹತ್ ಪ್ರತಿಭಟನೆ ನಡೆಸಿದ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆಯನ್ನು ವಿದ್ಯಾರ್ಥಿಗಳು ಮುಂದುವರೆಸಬೇಕು ಎಂದು ಮನವಿ ಮಾಡಿದರು. ನಿಮ್ಮ ಪ್ರಜಾಪ್ರಭುತ್ವದ ಹಕ್ಕಿಗಾಗಿ ಪ್ರಜಾಪ್ರಭುತ್ವದ ರೀತಿಯಲ್ಲಿ ಪ್ರತಿಭಟನೆ ಮುಂದುವರೆಸಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಮಂಗಳೂರಿನಲ್ಲಿ ಹಿಂಸಾಚಾರದ ವೇಳೆ ಪೊಲೀಸರ ಗುಂಡೇಟಿನಿಂದ ಮೃತಪಟ್ಟಿದ್ದ ಇಬ್ಬರ ಕುಟುಂಬಕ್ಕೆ ತಲಾ ರೂ. 5 ಲಕ್ಷ ಚೆಕ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಚಿತಗುಪ್ಪಿ ಆಸ್ಪತ್ರೆಗೆ ಸ್ಮಾರ್ಟ್‍ಸಿಟಿ ಪ್ರಶಸ್ತಿ
ಹುಬ್ಬಳ್ಳಿ, ಡಿ. 26: ಕೇಂದ್ರ ಸರ್ಕಾರದ ಸ್ಮಾರ್ಟ್‍ಸಿಟಿ ಸಬಲೀಕರಣ ಭಾರತ ಪ್ರಶಸ್ತಿಯಡಿಯಲ್ಲಿ ಮೆರಿಟ್ ಪ್ರಮಾಣಪತ್ರಕ್ಕೆ ಜಿಲ್ಲೆಯ ಚಿತಗುಪ್ಪಿ ಆಸ್ಪತ್ರೆಯ ಅಭಿವೃದ್ಧಿಗೆ ಸಂಬಂಧಿಸಿದ ಸ್ಮಾರ್ಟ್ ಸಿಟಿ ಯೋಜನೆ ಆಯ್ಕೆಯಾಗಿದೆ. ಹುಬ್ಬಳ್ಳಿಯ ಯೋಜನೆಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ‘ಅತ್ಯುತ್ತಮ ಸ್ಮಾರ್ಟ್ ಆರೋಗ್ಯ ಯೋಜನೆ’ ವರ್ಗದಲ್ಲಿ ಆಯ್ಕೆ ಮಾಡಿದೆ. ಸ್ಮಾರ್ಟ್ ಸಿಟಿ ಸಬಲೀಕರಣ ಭಾರತ ಪ್ರಶಸ್ತಿಯ -2019ರ ಸಂಯೋಜಕ ಬಿ. ಶೇಖರ್ ಈ ವಿಷಯ ಪ್ರಕಟಿಸಿದ್ದಾರೆ. ಚಿತಗುಪ್ಪಿ ಆಸ್ಪತ್ರೆ ವಿದ್ಯುನ್ಮಾನ ಆರೋಗ್ಯ ದಾಖಲೆಗಳು (ಇಎಂಆರ್), ವಾಸ್ತವಾಂಶದ ಆರೋಗ್ಯ ಸೇವೆ, ಸ್ಮಾರ್ಟ್ ತಪಾಸಣೆಗಲು, ಸ್ಮಾರ್ಟ್ ಆಸ್ಪತ್ರೆಯ ನಿರ್ವಹಣಾ ವ್ಯವಸ್ಥೆ ಸಾಫ್ಟ್ ವೇರ್, ಔಷಧ ನಿರ್ವಹಣಾ ವ್ಯವಸ್ಥೆ ಮತ್ತಿತರರ ವ್ಯವಸ್ಥೆಗಳನ್ನು ಹಮ್ಮಿಕೊಂಡಿದೆ.ಈ ಯೋಜನೆಯನ್ನು ಆಸ್ಪತ್ರೆಯಲ್ಲಿ ಒಟ್ಟಾರೆ ರೂ. 3.05 ಕೋಟಿ ವ್ಯಯಿಸಲಾಗಿದೆ.
ವಂದನ ಯೋಜನೆಗೆ ಆಧಾರ್ ಕಡ್ಡಾಯ
ನವದೆಹಲಿ, ಡಿ. 26: ಹಿರಿಯ ನಾಗರಿಕರ ಪಿಂಚಣಿ ಯೋಜನೆಯಾದ ಪ್ರಧಾನ್ ಮಂತ್ರಿ ವಾಯ ವಂದನ ಯೋಜನೆಗೆ ಇನ್ನು ಮುಂದೆ ಆಧಾರ್ ಕಡ್ಡಾಯವಾಗಲಿದೆ. ಪಿಎಂವಿವಿವೈ ಯೋಜನೆಗೆ ಆಧಾರ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ವಾರ್ಷಿಕವಾಗಿ ಶೇ. 8 ರಷ್ಟು ಬಡ್ಡಿ ನೀಡಲಾಗುವ ಈ ಯೋಜನೆಯನ್ನು ಜೀವ ವಿಮಾ ನಿಗಮದ ಮೂಲಕ ಜಾರಿಗೊಳಿಸಲಾಗಿದೆ. ಈ ಯೋಜನೆಯನ್ನು 2017-18 ಮತ್ತು 2018-19ರ ಕೇಂದ್ರ ಬಜೆಟ್‍ಗಳಲ್ಲಿ ಘೋಷಿಸಲಾಗಿದೆ. ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆಯಲು ಅರ್ಹರಾದ ವ್ಯಕ್ತಿಯು ಆಧಾರ್ ಸಂಖ್ಯೆ (ಅನನ್ಯ 12-ಅಂಕಿಯ ಬಯೋಮೆಟ್ರಿಕ್ ಗುರುತಿನ ಸಂಖ್ಯೆ) ಹೊಂದಿರುವ ಪುರಾವೆಗಳನ್ನು ಒದಗಿಸಬೇಕು ಇಲ್ಲವೇ ಆಧಾರ್ ದೃಢೀಕರಣಕ್ಕೆ ಒಳಪಡಬೇಕಾಗುವುದು ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ಹೇಳಿದೆ.
ಕಾಳಿ ಅರಣ್ಯಕ್ಕೆ ಹೋಂಸ್ಟೇ ಕಂಟಕ
ಹುಬ್ಬಳ್ಳಿ, ಡಿ. 26: ದಾಂಡೇಲಿ ಮತ್ತು ಸುತ್ತಮುತ್ತ ತಲೆ ಎತ್ತಿರುವ ಅಕ್ರಮ ಹೋಂಸ್ಟೇಗಳು ಸಂರಕ್ಷಿತ ಕಾಳಿ ನದಿ ಹುಲಿ ಸಾಂರಕ್ಷಿತಾರಣ್ಯದ ಮೇಲೆ ಒತ್ತಡ ಹೆಚ್ಚುವಂತೆ ಮಾಡಿವೆ. ಈ ಪ್ರದೇಶದಲ್ಲಿ ಕಾನೂನುಬಾಹಿರ ಮತ್ತು ಪರವಾನಗಿ ಪಡೆಯದ ಹೋಂಸ್ಟೇಗಳ ಸಂಖ್ಯೆ ಕಾನೂನುಬದ್ಧ ಹೋಂಸ್ಟೇಗಳಿಗಿಂತ ಹೆಚ್ಚಾಗಿದೆ. ಈ ವಿಚಾರವನ್ನು ಗಂಭೀರ ಪರಿಗಣಿಸಿರುವ ಜಿಲ್ಲಾಡಳಿತವು ಉತ್ತರ ಕನ್ನಡ ಜಿಲ್ಲೆಯ ಹೋಂಸ್ಟೇ ಮಾಲೀಕರಿಗೆ ಕಾನೂನುಬದ್ದ ದಾಖಲೆಗಳು, ಪರವಾನಗಿ ಸಲ್ಲಿಸಲು ಹಾಗೂ ಹೊಸ ಹೋಂಸ್ಟೇ ಸೌಲಭ್ಯಗಳನ್ನು ನಡೆಸಲು ಅನುಮತಿಗಾಗಿ ಅರ್ಜಿ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಿದೆ. ಮಾಲೀಕರಿಗೆ ಅನುಕೂಲವಾಗುವ ಸಲುವಾಗಿ ಜಿಲ್ಲಾಡಳಿತ ಆನ್‍ಲೈನ್‍ನಲ್ಲಿ ಹೋಂಸ್ಟೇಗಳ ಪರವಾನಗಿ ನೀಡುವ ವ್ಯವಸ್ಥೆಯನ್ನೂ ಮಾಡಿದೆ.
ಉಗ್ರರ ದಾಳಿಗೆ ಯೋಧ ಹುತಾತ್ಮ
ಗದಗ, ಡಿ. 26: ಕಾಶ್ಮೀರದ ಉರಿ ಸೆಕ್ಟರ್‍ನಲ್ಲಿ ನಡೆದ ಉಗ್ರರ ಜತೆಗಿನ ಹೋರಾಟದ ವೇಳೆ ಗದಗ ಜಿಲ್ಲೆಯ ಯೋಧನೊಬ್ಬ ಹುತಾತ್ಮರಾಗಿದ್ದಾರೆ. ಗುರುವಾರ ಜಮ್ಮು ಕಾಶ್ಮೀರದ ಉರಿ ಸೆಕ್ಟರ್‍ನಲ್ಲಿ ನಡೆದ ಕಾಳಗದ ವೇಳೆ ಗದಗದ ವೀರೇಶ್ ಕುರತ್ತಿ (50) ಎಂಬ ಯೋಧ ಹುತಾತ್ಮರಾಗಿದ್ದಾರೆ. ವೀರೇಶ್ ಮೂಲತಃ ಗದಗದ ಹೊಳೆಯಾಲೂರು ಸಮೀಪದ ಕರಮುಡಿ ಗ್ರಾಮದವರಾಗಿದ್ದು ಕಳೆದ 30 ವರ್ಷದಿಂದ ಭಾರತೀಯ ಸೇನೆ 18ನೇ ಮರಾಠ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ಪ್ರಸ್ತುತ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಯೋಧನ ಪಾರ್ಥಿವ ಶರೀರ ನಾಳೆ ಅಥವಾ ನಾಡಿದ್ದು ಸ್ವಗ್ರಾಮ ತಲಪಲಿದ್ದು ಸಧ್ಯ ಯೋಧನ ಕುಟುಂಬ ದಗ ಬಳಿಯ ಹಟಲಗೇರಿ ನಾಕದಲ್ಲಿ ವಾಸವಿದೆ.
ಆಯುಷಿ ಪಡ್ಡಾರ್‍ಗೆ ಬೆಳ್ಳಿ ಪದಕ
ಕೋಲ್ಕತಾ, ಡಿ. 26: ಭೂಪಾಲ್‍ನಲ್ಲ ನಡೆಯುತ್ತಿರುವ ರಾಷ್ಟ್ರೀಯ ಕಿರಿಯರ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಪಶ್ಚಿಮ ಬಂಗಾಳದ ಆಯುಷಿ ಪಡ್ಡಾರ್ ಅವರು 50 ಮೀಟರ್ ರೈಫಲ್ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಆಯುಷಿ ಪಡ್ಡಾರ್, 1200 ಅಂಕಗಳಲ್ಲಿ 1159 ಪಾಯಿಂಟ್ ಕಲೆ ಹಾಕುವ ಮೂಲಕ ಫೈನಲ್‍ಗೆ ಪ್ರವೇಶ ಮಾಡಿದ್ದರು. ಪ್ರಶಸ್ತಿ ಸುತ್ತಿನಲ್ಲಿ ಬಲವಾಗಿ ಪುಟಿದೆದ್ದ 19ರ ಪ್ರಾಯದ ಶೂಟರ್ 451.1 ಪಾಯಿಂಟ್ ಕಲೆ ಹಾಕಿದರು. ಕೇವಲ 0.8ರ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾದರು. ಹರಿಯಾಣದ ನಿಶ್ಚಲ್ (451.9) ಅವರು ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಮಧ್ಯ ಪ್ರದೇಶದ ಪ್ರಸಿದ್ಧಿ ಮಹಂತ್ (436.1) ಕಂಚಿನ ಪದಕ ತನ್ನದಾಗಿಸಿಕೊಂಡರು.