ಗೋಣಿಕೊಪ್ಪಲು, ಡಿ.26: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ನೂತನ ಅಧ್ಯಕ್ಷರಾಗಿ ಬಾಳೆಲೆಯ ಕೋದಂಡ ಸಂಪತ್ ಸೋಮಣ್ಣ ಅವರು ಆಯ್ಕೆಯಾಗುತ್ತಿದ್ದಂತೆಯೇ ಈ ಭಾಗದ ಕಾಂಗ್ರೆಸ್ ಪ್ರಮುಖ ನಾಯಕರಲ್ಲಿ ಭಿನ್ನಮತ ಬುಗಿಲೆದ್ದಿದ್ದು ಬಹುತೇಕ ನಾಯಕರು,ಕಾರ್ಯಕರ್ತರು ಪಕ್ಷದ ಸ್ಥಾನ ಮಾನಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಅಲ್ಲಲ್ಲಿ ಗೌಪ್ಯ ಸಭೆಗಳು ನಡೆಯುತ್ತಿದ್ದು ಎಲ್ಲ ನಾಯಕರು ಒಟ್ಟಾದ ನಂತರದಲ್ಲಿ ರಾಜೀನಾಮೆ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನಲ್ಲಿ ಖಾಲಿ ಇದ್ದ ಅಧ್ಯಕ್ಷ ಹುದ್ದೆಗೆ ದ.ಕೊಡಗಿನ ಹಲವಾರು ಕಾಂಗ್ರೆಸ್ ನಾಯಕರು ತೀವ್ರ ಪೈಪೋಟಿ ನಡೆಸಿದ್ದರು. ಕಾಂಗ್ರೆಸ್ ವೀಕ್ಷಕರಾಗಿ ಆಗಮಿಸಿದ ನಾಯಕರುಗಳು ಆಕಾಂಕ್ಷಿಗಳ ಮಾಹಿತಿಗಳನ್ನು ಪಡೆದಿದ್ದರು. ವೀಕ್ಷಕರು ಕ್ರಮವಾಗಿ ಹುದಿಕೇರಿಯ ಜೋನಾಲ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಬಾಳೆಲೆಯ ಕೋದಂಡ ಸಂಪತ್ ಸೋಮಣ್ಣ, ಹಾಗೂ ಪೊನ್ನಂಪೇಟೆ ಜೋನಾಲ್ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ ದಿಲ್ಲುರವರ ಹೆಸರನ್ನು ಆಯ್ಕೆ ಮಾಡಿ ತಮ್ಮ ವರದಿಯನ್ನು ಪಕ್ಷದ ಹೈಕಮಾಂಡ್‍ಗೆ ವರದಿ ಸಲ್ಲಿಸಿದ್ದರು ಎನ್ನಲಾಗಿದೆ. ಆದರೆ ಕೊನೆ ಗಳಿಗೆಯಲ್ಲಿ ವೀಕ್ಷಕರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಏಕ ಪಕ್ಷೀಯವಾಗಿ ಅಧ್ಯಕ್ಷ ಸ್ಥಾನ ಬದಲಾವಣೆ ಯಾಗಿರುವುದು ಇದೀಗ ಯಕ್ಷ ಪ್ರಶ್ನೆಯಾಗಿದೆ.
ಬ್ಲಾಕ್ ಅಧ್ಯಕ್ಷರ ನೇಮಕಾತಿ ಘೋಷಣೆಯಾಗುತ್ತಿದ್ದಂತೆಯೇ ದ.ಕೊಡಗಿನ ವಿವಿಧ ಭಾಗದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಅಸಮಾದಾನವನ್ನು ಹೊರಹಾಕಿದ್ದು ಕಾಂಗ್ರೆಸ್ ಹೈಕಮಾಂಡ್‍ಗೆ ಇಲ್ಲಿಯ ಪಕ್ಷ ಸಂಘಟನೆಯ ಮಾಹಿತಿಗಳನ್ನು ರವಾನಿಸಿದ್ದಾರೆ. ಸಹಿ ಸಂಗ್ರಹಿಸಿದ ಪಕ್ಷದ ಮುಖಂಡರು ಅಧ್ಯಕ್ಷ ಸ್ಥಾನವನ್ನು ಬದಲಾಯಿಸದೆ ಪಕ್ಷ ಸಂಘಟನೆ ನಡೆಸಲು ಸಾಧ್ಯವಿಲ್ಲ ಎಂಬ ಪತ್ರ ವರಿಷ್ಠರಿಗೆ ರವಾನಿಸಿದ್ದಾರೆ. ನೂತನ ಅಧ್ಯಕ್ಷ ಸಂಪತ್ ಸೋಮಣ್ಣ ಅಧಿಕಾರ ಸ್ವೀಕರಿಸಿದ ತರುವಾಯ ಪೊನ್ನಂಪೇಟೆ ಬ್ಲಾಕ್‍ನಲ್ಲಿರುವ ಅಸಮಾಧಾನಿತ ಕಾಂಗ್ರೆಸ್ ಮುಖಂಡರ ಮನೆ ಮನೆಗೆ ತೆರಳಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಕಂಡು ಬರುತ್ತಿಲ್ಲ. ಇದರಿಂದ ನೂತನ ಅಧ್ಯಕ್ಷರಿಗೆ ಪಕ್ಷ ಸಂಘಟನೆ ವಿಷಯದಲ್ಲಿ ಹೊಸ ಕಗ್ಗಂಟು ಎದುರಾಗಿದೆ.
ಏಪ್ರಿಲ್, ಮೇ ತಿಂಗಳಿನಲ್ಲಿ ಗ್ರಾಮ ಪಂಚಾಯ್ತಿಗೆ ಚುನಾವಣೆ ಎದುರಾಗಲಿದ್ದು ನೂತನ ಅಧ್ಯಕ್ಷರಿಗೆ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ದೊಡ್ಡ ಜವಾಬ್ದಾರಿ ನಿಭಾಯಿಸಬೇಕಾಗಿದೆ. ಅಸಮಾಧಾನಿತರನ್ನು ಒಟ್ಟಾಗಿ ಚುನಾವಣೆಗೆ ಒಗ್ಗೂಡಿಸುವ ಪ್ರಯತ್ನ ನಡೆಸಬೇಕಾಗಿದೆ. ಈಗಾಗಲೇ ಅಸಮಾಧಾನ ವ್ಯಕ್ತ ಪಡಿಸಿ ಪಕ್ಷದ ವಿವಿಧ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದೇ ಆದಲ್ಲಿ ಇನ್ನಷ್ಟು ತೊಂದರೆಯನ್ನು ಅನುಭವಿಸಲೇಬೇಕಾಗಿದೆ. ಪಕ್ಷದ ವರಿಷ್ಠರು ಈ ಬಗ್ಗೆ ಚರ್ಚೆ ನಡೆಸಿ ಅಸಮಾಧಾನಗೊಂಡಿರುವ ಪ್ರಮುಖ ನಾಯಕರನ್ನು ಸಮದಾನ ಪಡಿಸದಿದ್ದಲ್ಲಿ ಮುಂದೆ ಬಾರಿ ಬೆಲೆ ತೆರಬೇಕಾಗುತ್ತದೆ. -ಹೆಚ್.ಕೆ.ಜಗದೀಶ್