ಈ ಬದುಕೆಷ್ಟು ಸುಂದರ, ಈ ಬದುಕನ್ನು ಅನುಭವಿಸಲು ಸಂಭ್ರಮದಿಂದ ತಲೆಎತ್ತಿ ಬದುಕಲೇಬೇಕು ಪ್ರತಿ ಒಬ್ಬ ವ್ಯಕ್ತಿಗೂ ಇರೋದು ಒಂದೇ ಬದುಕು. ಬದುಕೋದು ನಮ್ಮ ಜನ್ಮ ಸಿದ್ದ ಹಕ್ಕು. ತಮ್ಮ ಆತ್ಮದ ಮುಂದೆ ತಲೆ ತಗ್ಗಿಸದೆ, ಮನೆ ಜನರ ಮಾನ ಮರ್ಯಾದೆಗೆ ಧಕ್ಕೆ ಬರದಂತೆ, ಯಾರೊಬ್ಬರೂ ಕೇವಲವಾಗಿ ನಮ್ಮೆಡೆ ಬೆರಳು ತೋರಿಸದಂತೆ ನಾವು ಬದುಕಲೇಬೇಕು ಎನ್ನುವ ದೃಢ ನಿರ್ಧಾರವನ್ನು ಮೊದಲು ಮಾಡಿಕೊಳ್ಳಬೇಕು.

ಹೌದು ಖಂಡಿತವಾಗಿ ಹೇಳುತ್ತೇನೆ. ನನಗೆ ಈ ಒಂದು ಆವೇಶ, ಈ ಒಂದು ತಿಳುವಳಿಕೆ ಮನಸು ಹೊಕ್ಕಿದ್ದು, ಮಂಜಿನ ಕೊರಡನ್ನು ಮೈತುಂಬ ಹೊದ್ದುಕೊಂಡು ಸಂಭ್ರಮಪಡುವ ಲಂಡನ್, ಇಂಗ್ಲೆಂಡ್‍ನ ಉದ್ದಗಲಕ್ಕೂ ತಿರುಗಾಡಿ ಬಂದ ನಂತರ, ಅಲ್ಲಿಯ ಜನರು ಬದುಕುವ ರೀತಿಯನ್ನು ಕಂಡು, ಒಂದಂತು ನಿಜ, ಒಂದು ಬಗೆಯ ಕೆಟ್ಟ ಅಭಿಪ್ರಾಯವಿತ್ತು ನನ್ನೊಳಗೆ ವಿದೇಶಿಯರ ಜೀವನ ಶೈಲಿಯ ಬಗ್ಗೆ. ಆದರೆ ಈಗ ಅದೆಲ್ಲವೂ ಅರ್ಥವಾಗಿ ಹೋಗಿದೆ ವಿದೇಶಿಯರು, ಇರುವ ಒಂದು ಜನ್ಮಕ್ಕೆ ಎಷ್ಟೊಂದು ಪ್ರಾಮುಖ್ಯತೆ ಕೊಡುತ್ತಾರೆ ಎಂದು. ಅತಿ ಹೆಚ್ಚು ಸಂಖ್ಯೆಯಲ್ಲಿ ಜೋಡಿಗಳು ಬದುಕನ್ನು ಅನುಭವಿಸುವ ರೀತಿ ಕಂಡು, ವಯಸ್ಕರಿಗೆ ಎಷ್ಟೊಂದು ಗೌರವವಿದೆಯೆಂದು, ಅವರ ಜೀವಕ್ಕೆ ಎಷ್ಟೊಂದು ಪ್ರಾಮುಖ್ಯತೆ ಇದೆಯೆಂದು. ಹಾಗೆಂದು ಅಲ್ಲಿಯ ರೀತಿ ಎಲ್ಲವೂ ಸರಿ ಎಂದು ಅರ್ಥಅಲ್ಲ. ಅವರ ಆಹಾರ ಪದ್ಧತಿ, ಉಡುಗೆ ತೊಡುಗೆಗಳ ರೀತಿ, ಸಂಬಂಧÀಗಳ ನಿರ್ವಹಣೆ ಬೇರೆಯದೇ ರೀತಿಯಲ್ಲಿರಬಹುದು. ಆದರೆ ಮುಖ್ಯವಾಗಿ ನಮಗಿರುವುದು ಒಂದೇ ಜನ್ಮ ಆ ಒಂದು ಸುಂದರವಾದ ಬದುಕನ್ನು ಪ್ರೀತಿಯಿಂದ ಸಂಭ್ರಮದಿಂದ ಅವರು ಅನುಭವಿಸುವ ರೀತಿ ಅದ್ಭುತ. ಆ ಜಗತ್ತಿನಿಂದ ಮರಳಿ ನಮ್ಮ ಗೂಡು ಸೇರುವವರೆಗೂ ಮನಸೊಳಗಿನ ಮಂಥನ ಒಂದೇ. ಇನ್ನಾದರೂ ಬದುಕು ಕಾಣಬೇಕು. ನೀವು ನಿಮ್ಮಲ್ಲೆ ಕೇಳಿಕೊಳ್ಳಿ ಎಷ್ಟು ಮನೆಗಳಲ್ಲಿ ಸ್ವತಂತ್ರ ಎನ್ನುವ ಪದಕ್ಕೆ ಅರ್ಥ ಇದೆ ಎಂದು ? ಒಂದು ಹತ್ತಿರದ ಮನೆಯವರೊಟ್ಟಿಗೆ ಒಂದಿಷ್ಟು ಹೊತ್ತು ಕಳೆಯೋಣವೆಂದರೂ ಅನುಮತಿ ಬೇಕಾಗಬಹುದು, ಕೊನೆಗೆ ಆತ್ಮೀಯರೊಟ್ಟಿಗೆ ಫೆÇೀನಲ್ಲಾದರೂ ಮಾತನಾಡಿ ಮನಸು ಹಗುರ ಮಾಡಿಕೊಳ್ಳೋಣವೆಂದರೆ ಅಲ್ಲಿ ಅಡ್ಡಗಾಲು ಹಾಕುವ ಪ್ರವೃತ್ತಿ ಇರಬಹುದಲ್ಲವೇ ? ಒಮ್ಮೆ ಯೋಚನೆ ಮಾಡಿ, ಇಂದಿದ್ದವರು ನಾಳೆ ಇಲ್ಲದಾಗಬಹುದು, ಬದುಕು ಕ್ಷಣಿಕ ಎಂದು ತಿಳಿದರೂ ನಾವು ಬದುಕುತ್ತಿರುವ ರೀತಿಯನ್ನ ! ಹಾಗೇ ಸುಮ್ಮನೆ ಒಮ್ಮೆ ಯೋಚನೆ ಮಾಡಿದರೆ ಎಷ್ಟೊಂದು ಕಠಿಣ ಎನ್ನಿಸುತ್ತೆ ಅಷ್ಟೇ ಜೀವನ. ಮನಸೊಂದು ಸಂತೋಷದಿಂದಿದ್ದರೆ ಏನೇ ಕಷ್ಟ ಬಂದರೂ ವಿಶ್ವಾಸದಿಂದ ಬದುಕನ್ನ ಎದುರಿಸುವ ಛಲ ನಮ್ಮಲ್ಲಿ ತನ್ನಿಂದ ತಾನೇ ಹುಟ್ಟಿಕೊಳ್ಳುತ್ತೆ ಅಲ್ವೆ. ಮನಸ್ಸು ಮುದುಡಿದ್ದರೆ ಸದಾದೇಹದಲ್ಲೊಂದು ಆಲಸ್ಯ, ಸದಾ ಮೈಕೈ ನೋವು, ಸೋಲಿನ ಅನುಭವ. ಅದೇ ಎಲ್ಲಾದರು ಆಹ್ಲಾದಕರವಾದ ವಾತಾವರಣಕ್ಕೆ ಹೋಗಿ ಬಂದರೆ ಸಾಕು ಎಲ್ಲಾ ನೋವುಗಳು ಮಾಯ. ಕೊಡಗು ಜನಪದ ಪರಿಷತ್ತಿನ ಒಂದು ತಂಡ ಮಡಿಕೇರಿಯಲ್ಲಿದೆ. ಶಕ್ತಿ ದಿನಪತ್ರಿಕೆಯ ಅನಂತಶಯನ ಅವರ ಅಧ್ಯಕ್ಷತೆಯಲ್ಲಿ. ಅಲ್ಲಿ ಪ್ರೀತಿ ತುಂಬಿದ ಶುದ್ಧ ಮನಸ್ಸಿನ ಗೆಳೆಯ ಗೆಳತಿಯರ ಬಳಗವೇ ಇದೆ. ಆಗಿಂದಾಗೆ ಅಲ್ಲಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತದೆ. ಹಾಗೆಯೇ ಸಾಹಿತ್ಯಕ್ಕೆ ಸಂಬಂಧÀಪಟ್ಟಂತೆ ಸಣ್ಣ ಪುಟ್ಟ ಪಿಕ್‍ನಿಕ್, ಪ್ರವಾಸಗಳನ್ನು ಏರ್ಪಡಿಸ ಲಾಗುತ್ತದೆ. ಆ ಗುಂಪಿನೊಂದಿಗೆ, ಆ ಶುದ್ಧ ಮನಸ್ಸಿನ ಗೆಳೆಯ-ಗೆಳತಿ ಯರ ಗುಂಪಿನೊಟ್ಟಿಗೆ ದಿನದ ಪ್ರವಾಸ ಹೋಗಿ ಬಂದರೆ ಸಾಕು ಕನಿಷ್ಟ ಒಂದೊಂದು ತಿಂಗಳನ್ನು ಹಾಯಾಗಿ ಕಳೆಯುವ, ನಮ್ಮ ಪ್ರತಿನಿತ್ಯದ ಕೆಲಸಗಳನ್ನ ಸಂತೋಷದಿಂದ ನಿಭಾಯಿಸುವ ಹುಮ್ಮಸು ತುಂಬಿಕೊಳ್ಳುತ್ತದೆ. ಮನಸ್ಸಿನ ಆರೋಗ್ಯ ಆಹ್ಲಾದಕರವಾಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಖಂಡಿತ ಎಲ್ಲಾರು ತಮ್ಮ-ತಮ್ಮ ಬದುಕನ್ನು ಸಂತೋಷದಿಂದ ಕಳೆಯಲು ಪ್ರಯತ್ನಪಡೋಣ. ನಾವು ನಮಗಾಗಿ ನಮ್ಮ ಸಂತೋಷಕ್ಕಾಗಿ ಸ್ವಲ್ಪ ಸಮಯ ಮೀಸಲಿಡೋಣ. ನಮ್ಮ ನಮ್ಮ ಮನಸ್ಸಿನ ಆರೋಗ್ಯದಕಡೆಗೆ ಹೆಚ್ಚಿನ ಗಮನ ಹರಿಸೋಣ. ಪ್ರತಿ ಒಬ್ಬರನ್ನೂ ಗೌರವದಿಂದ ಕಾಣುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳೋಣ. ಇದು ಹೊಸ ವರ್ಷಕ್ಕೆ ನನ್ನ ಆಶಯ, ಎಲ್ಲರಿಗೂ ಶುಭವಾಗಲಿ.

-ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ,

ಕುಶಾಲನಗರ.