ಗೋಣಿಕೊಪ್ಪ ವರದಿ, ಡಿ. 26 ; ನಾಲ್ಕೇರಿ ಗ್ರಾಮದಲ್ಲಿ ಹುಲಿ ದಾಳಿಗೆ ಗಬ್ಬದ ಹಸು ಗಾಯಗೊಂಡಿದೆ. ಅಲ್ಲಿನ ಕಟ್ಟೇಂಗಡ ಕಾವೇರಪ್ಪ ಎಂಬವರು ಅವರ ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿಹಾಕಿದ್ದರು. ಹಸುವಿನ ಕುತ್ತಿಗೆ ಭಾಗಕ್ಕೆ ಗಾಯವಾಗಿದ್ದು, ಸ್ಥಳೀಯ ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ತಡರಾತ್ರಿ 12 ಗಂಟೆ ಸುಮಾರಿಗೆ ಹಸು ಅರಚುವ ಶಬ್ಧಕ್ಕೆ ಮನೆಯವರು ಕೂಗಿಕೊಂಡಾಗ ಹುಲಿ ಬಿಟ್ಟು ಓಡಿಹೋಗಿದೆ.
ಕ್ರಮಕ್ಕೆ ಒತ್ತಾಯ : ನಿರಂತರ ಹುಲಿ ದಾಳಿ ನಡೆಯುತ್ತಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಅರಣ್ಯ ಅಧಿಕಾರಿಗಳ ಬೇಜಬ್ದಾರಿ ಕಾರಣ ಎಂದು ಆರೋಪಿಸಿದ್ದಾರೆ. ದಾಳಿಗೆ ಶಾಶ್ವತ ಪರಿಹಾರ ಕ್ರಮವನ್ನು ಅರಣ್ಯ ಇಲಾಖೆ ನಡೆಸುತ್ತಿಲ್ಲ. ರೈತರು ಜಾನುವಾರು ಕಳೆದುಕೊಂಡು ಆರ್ಥಿಕ ನಷ್ಟ ಮಾತ್ರ ಅನುಭವಿಸುತ್ತಿಲ್ಲ. ಜೊತೆಗೆ ತಮ್ಮ ಬದುಕಿನ ಭಾಗವಾಗಿರುವ ಜಾನುವಾರುಗಳನ್ನು ರಕ್ಷಿಸಿಕೊಳ್ಳದ ಮಟ್ಟಕ್ಕೆ ತಲುಪುವಂತಾಗಿದೆ. ಇಲಾಖೆ ಶಾಶ್ವತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.