ಸಿದ್ದಾಪುರ, ಡಿ.26: ಸಿದ್ದಾಪುರದಿಂದ ಕುಶಾಲನಗರ ಮಾರ್ಗವಾಗಿ ಗೂಡ್ಸ್ ಜೀಪಿನಲ್ಲಿ ಅಕ್ರಮವಾಗಿ ಬೀಟೆ ನಾಟಾಗಳನ್ನು ಸಾಗಿಸುತ್ತಿರುವ ವಾಹನ ಹಾಗೂ ಮರದ ನಾಟಾಗಳನ್ನು ವಶಪಡಿಸಿ ಕೊಳ್ಳುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಭಾಗದಿಂದ ಗೂಡ್ಸ್ ಜೀಪಿನಲ್ಲಿ (ಕೆಎ 18 ಬಿ 9888) ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ತುಂಬಿಸಿಕೊಂಡು ಕುಶಾಲನಗರದತ್ತ ಗುರುವಾರ ಬೆಳಗ್ಗಿನ ಜಾವ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಕುಶಾಲನಗರ ಮೀನುಕೊಲ್ಲಿ ವ್ಯಾಪ್ತಿಯ ಅರಣ್ಯ ಸಿಬ್ಬಂದಿಗಳು ವಾಹನವನ್ನು ಹಿಂಬಾಲಿಸಿಕೊಂಡು ಬೆನ್ನಟ್ಟಿ ಸೆರೆಹಿಡಿಯಲು ಪ್ರಯತ್ನಿಸಿದರು.

ಈ ಸಂದರ್ಭದಲ್ಲಿ ನಂಜರಾಯಪಟ್ಟಣ ಗ್ರಾಮದ ದುಬಾರೆ ಬಳಿ ಜೀಪು ಚಾಲಕ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿ ದುಬಾರೆ ಗದ್ದೆಯಲ್ಲಿ ನಿಲ್ಲಿಸಿ ಆರೋಪಿ ಪರಾರಿಯಾಗಿರುತ್ತಾನೆ. ಅರಣ್ಯ ಸಿಬ್ಬಂದಿಗಳು ಜೀಪು ಹಾಗೂ 1.50 ಲಕ್ಷ ಮೌಲ್ಯದ ಮರ ಸೇರಿದಂತೆ ಒಟ್ಟು ರೂ.6 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗದ ಡಿ.ಎಫ್.ಓ. ಪ್ರಭಾಕರ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಎ.ಸಿ.ಎಫ್. ನೆಹರೂ ಹಾಗೂ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಅವರ ನೇತೃತ್ವದಲ್ಲಿ ಉಪ ವಲಯಾರಣ್ಯಾಧಿಕಾರಿ ಸುಬ್ರಾಯ, ಅರಣ್ಯ ರಕ್ಷಕ ಚರಣ್ ಕುಮಾರ್, ಸಿಬ್ಬಂದಿಗಳಾದ ದುರ್ಗೇಶ್, ಆಶಿಕ್, ಚಾಲಕ ವಾಸು ಪಾಲ್ಗೊಂಡಿದ್ದರು.