ಸುಂಟಿಕೊಪ್ಪ, ಡಿ. 25: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಶುಶ್ರೂಷಕಿಯರು ‘ಡಿ’ ಗ್ರೂಪ್ ನೌಕರರನ್ನು ನೇಮಿಸುವಂತೆ ಹಾಗೂ ಇಲ್ಲಿಗೆ ಹೆಚ್ಚಿನ ಜೌಷಧಿ ಚುಚ್ಚುಮದ್ದುಗಳನ್ನು ನೀಡುವಂತೆ ಗ್ರಾಮಸ್ಥರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ಆಡಳಿತಾಧಿಕಾರಿ ಹಾಗೂ ಕಚೇರಿ ಅಧೀಕ್ಷಕರಲ್ಲಿ ಮನವಿ ಮಾಡಿದ್ದಾರೆ.
ತಾ. 23 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಬಿ.ಸಿ. ಸಿದ್ಧರಾಜು ಹಾಗೂ ಅಧೀಕ್ಷಕ ಎಸ್.ಎಲ್. ಉಮಾಶಂಕರ್ ಅವರು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾರ್ಯನಿಮಿತ್ತ ಭೇಟಿ ನೀಡಿದ್ದು ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ್ ಪೂಜಾರಿ, ಯು. ಅನಿಲ್, ಎನ್. ರಜಾಕ್ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಕೆ. ರಂಜಿತ್ ಅವರು ಮನವಿ ಪತ್ರಸಲ್ಲಿಸಿ 7 ಗ್ರಾಮ ಪಂಚಾಯಿತಿಯನ್ನು ಒಳಗೊಂಡ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿತ್ಯ 100ಕ್ಕೂ ಅಧಿಕ ಅನಾರೋಗ್ಯ ಪೀಡಿತರು ಬಂದು ತೆರಳುತ್ತಾರೆ. ಒಬ್ಬರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. 3 ಶುಶ್ರೂಷಕಿಯರಲ್ಲಿ ಇಬ್ಬರು ಮಾತ್ರ ಇದ್ದಾರೆ. ಜೌಷಧಿ, ಚುಚ್ಚುಮದ್ದು ಬ್ಯಾಂಡೇಜ್ ನೀಡಲು ಇವರಿಗೆ ಕಷ್ಟ ಸಾಧ್ಯವಾಗುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರಿಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುವ ‘ಡಿ’ ಗ್ರೂಪ್ ಸಿಬ್ಬಂದಿ ಇಲ್ಲವಾಗಿದೆ. ಅವಘಡಗಳು ನಡೆದಾಗ, ಆತ್ಮಹತ್ಯೆ ಪ್ರಕರಣ ನಡೆದಾಗ ವೈದ್ಯರ ಹಾಗೂ ‘ಡಿ’ ಗ್ರೂಪ್ ಸಿಬ್ಬಂದಿಯ ಕೊರತೆಯಿಂದ ಕುಶಾಲನಗರ, ಮಡಿಕೇರಿಗೆ ಕರೆದೊಯ್ಯುವ ಅನಿವಾರ್ಯ ಪರಿಸ್ಥಿತಿ ಇದೆ. ಕೂಡಲೇ ವೈದ್ಯರು ಶುಶ್ರೂಷಕಿ, ಫಾರ್ಮಸಿಸ್ಟ್, ‘ಡಿ’ ಗ್ರೂಪ್ ನೌಕರರ ನೇಮಕ ಮಾಡಬೇಕೆಂದು ಆಗ್ರಹಿಸಿದರು.