ಏಕಲವ್ಯ ಬಿಲ್ವಿದ್ಯೆ ಕಲಿಯಲು ದ್ರೋಣಾಚಾರ್ಯರನ್ನು ವಿನಂತಿಸು ತ್ತಾನೆ. ಆದರೆ ದ್ರೋಣಾಚಾರ್ಯರು ಕ್ಷತ್ರಿಯರ ಹೊರತು ಬೇರೆಯವರಿಗೆ ವಿದ್ಯೆ ಕಲಿಸುವುದಿಲ್ಲವೆಂದು ಅವನ ವಿನಂತಿಯನ್ನು ನಿರಾಕರಿಸುತ್ತಾರೆ. ಆದರೆ ನಿರಾಶನಾಗದ ಏಕಲವ್ಯ ಅವರ ಮಣ್ಣಿನ ಮೂರ್ತಿ ಮಾಡಿ ಮಾನಸಿಕವಾಗಿ ಅವರನ್ನು ಗುರುಗಳಾನ್ನಾಗಿ ಸ್ವೀಕರಿಸಿ ಬಿಲ್ವಿದ್ಯೆ ಕಲಿಯು ತ್ತಾನೆ ಎಂಬುದು ಎಲ್ಲರಿಗೂ ತಿಳಿದ ಪುರಾಣದ ಕತೆ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರಧಾರನೇ ಶಿಕ್ಷಕ. ದೇಶದ ಪ್ರಗತಿಯಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವ ವಿದೆಯೋ, ಅಷ್ಟೇ ಮಹತ್ವ ಶಿಕ್ಷಕನಿಗೂ ಇದೆ. ವಿದ್ಯಾರ್ಥಿಗಳ ಭವಿಷ್ಯವು ಶಿಕ್ಷಣದಲ್ಲಿದ್ದರೆ ಅದನ್ನು ಸಾಕಾರಗೊಳಿಸುವ ಸೂತ್ರ ಶಿಕ್ಷಕರಲ್ಲಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಸಹ ಪ್ರತಿವರ್ಷ ಶಿಕ್ಷಕರ ದಿನಾಚರಣೆಯಂದು ಉತ್ತಮ ಸಾಧನೆ ಗೈದ ಶಿಕ್ಷಕರನ್ನು ಸನ್ಮಾನಿಸುತ್ತದೆ.

ಗುಣಮಟ್ಟದ ಶಿಕ್ಷಣವು ಸುಸ್ಥಿರ ಅಭಿವೃದ್ಧಿಯ ಅಡಿಪಾಯ. ಶಿಕ್ಷಣವು ಸ್ವಯಂ ಅವಲಂಬನೆ, ಕೌಶಲ್ಯ ವೃದ್ಧಿ, ಆರ್ಥಿಕ ಬೆಳವಣಿಗೆ, ಉತ್ತಮ ಜೀವನೋಪಾಯ ನೀಡುತ್ತದೆ. ಇದರ ಮಹತ್ವವನ್ನು ಮನಗಂಡ ಯುನೈಟೆಡ್ ನೇಷನ್ 4ನೇ ಸುಸ್ಥಿರ ಅಭಿವೃದ್ಧಿ ಗುರಿಯಾದ ಗುಣಮಟ್ಟದ ಶಿಕ್ಷಣವನ್ನು 2030 ಹೊತ್ತಿಗೆ ಸಾಧಿಸುವ ಗುರಿಯನ್ನು ತನ್ನ ಸದಸ್ಯ ರಾಷ್ಟ್ರಗಳಿಗೆ ನೀಡಿದೆ. ಇದರ ಮುಖ್ಯ ಉದ್ದೇಶ ಎಲ್ಲರನ್ನೂ ಒಳಗೊಳ್ಳುವ ಮೂಲಕ ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಕೊಳ್ಳುವುದು ಮತ್ತು ಎಲ್ಲರಿಗೂ ಜೀವನಪೂರ್ತಿ ಕಲಿಕಾ ಅವಕಾಶಗಳನ್ನು ಪ್ರೋತ್ಸಾಹಿಸುವುದು. ಹಾಗೆಯೇ ಭಾರತ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯಡಿ 14 ವರ್ಷ ಒಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆಯನ್ನು ಮಾಡಿದೆ.