ಮಡಿಕೇರಿ, ಡಿ. 25: ಕಾಫಿ ಕೃಷಿ ಮತ್ತು ಕಾಫಿ ಉದ್ಯಮದ ಸಮಸ್ಯೆಗಳ ಸಂಬಂಧಿತ ಬಜೆಟ್ ಪೂರ್ವಭಾವಿಯಾಗಿ ಕರ್ನಾಟಕದ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ನಿಯೋಗವು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕಾಗಿ ಮನವಿ ಮಾಡಿತು.
ಕರ್ನಾಟಕ ಬೆಳೆಗಾರರ ಒಕ್ಕೂಟ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್‍ನ ಪದಾಧಿಕಾರಿಗಳ ನಿಯೋಗವು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚೆ ನಡೆಸಿತು.ಕಾಫಿ ಬೆಳೆಗಾರರ ಪ್ರಸ್ತುತ ಸಮಸ್ಯೆಗಳನ್ನು ಮತ್ತು ವಲಯವನ್ನು ಪುನಶ್ಚೇತನಕ್ಕಾಗಿ ಸಣ್ಣ ಮತ್ತು ದೀರ್ಘಾವಧಿಯ ಕ್ರಮಗಳ ಬಗ್ಗೆ ಸಚಿವರೊಂದಿಗೆ ಕಾಫಿ ಬೆಳೆಗಾರರ ನಿಯೋಗ ಚರ್ಚಿಸಿತು. ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್, ಉಪಾಧ್ಯಕ್ಷ (ಮೊದಲ ಪುಟದಿಂದ) ನಂದಾಬೆಳ್ಳಿಯಪ್ಪ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿರೀಷ್ ವಿಜಯೇಂದ್ರ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಸಿ. ಕರಿಯಪ್ಪ, ಪ್ರದೀಪ್ ಪೂವಯ್ಯ ಇದ್ದರು. ಇದೇ ಸಂದರ್ಭ ನಿಯೋಗವು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರಿಗೂ ಕಾಫಿ ಸಮಸ್ಯೆ ಸಂಬಂಧಿತ ಮನವಿಯನ್ನು ಸಲ್ಲಿಸಿತು.ಮುಖ್ಯ ಬೇಡಿಕೆಗಳು ಕಾಫಿ ಪ್ಯಾಕೇಜ್: ಪ್ರಸ್ತುತ ಕಾಫಿ ಬೆಲೆಯು ಗಣನೀಯವಾಗಿ ಇಳಿಕೆ ಕಂಡಿದ್ದು, ಉತ್ಪಾದನಾ ವೆಚ್ಚವು ಅಧಿಕಗೊಂಡಿದೆ. ಪ್ರತೀ ಎಕರೆಗೆ 30 ರಿಂದ 40 ಸಾವಿರ ರೂಗಳ ನಷ್ಟ ಸಂಭವಿಸುತ್ತಿದೆ. 2012 ಮತ್ತು 2016 ರಲ್ಲಿ ಉಂಟಾದ ಅನಾವೃಷ್ಟಿಯಿಂದ ಹಾಗೂ 2018 ಮತ್ತು 2019ರಲ್ಲಿ ಉಂಟಾದ ತೀವ್ರ ಅತಿವೃಷ್ಟಿಯಿಂದ ಕಾಫಿ ಉತ್ಪಾದನೆಯೂ ಕುಂಠಿತಗೊಂಡಿದೆ. ಇದರ ಪರಿಣಾಮವಾಗಿ ಕಾಫಿ ಬೆಳೆಗಾರರು ಬ್ಯಾಂಕ್‍ನಲ್ಲಿ ಪಡೆದಿರುವ ಸಾಲವನ್ನು ಮರುಪಾವತಿ ಮಾಡಲು ಅಸಹಾಯಕರಾಗಿದ್ದಾರೆ. ಆದ್ದರಿಂದ ತಾವು ದಯಮಾಡಿ, ಕಾಫಿ ಬೆಳೆಗಾರರ ಸಂದಿಗ್ದ ಪರಿಸ್ಥಿತಿಯನ್ನು ಗಂಬೀರವಾಗಿ ಪರಿಗಣಿಸಿ, ವಿಶೇಷವಾದ ಸಾಲಮನ್ನಾ ಪ್ಯಾಕೇಜನ್ನು ನೀಡಬೇಕು.
ಬಡ್ಡಿ ಮನ್ನಾ: ಎಲ್ಲಾ ಸಹಕಾರಿ, ಖಾಸಗಿ, ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬೆಳೆಗಾರರಿಗೆ ಶೇ. 6 ರಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ಒದಗಿಸಿಕೊಡಬೇಕು. ಸಿಬಿಎಲ್‍ಸಿಯಿಂದ ಕೃಷಿ ಸಾಲವನ್ನು ಹೊರಗಿಡಬೇಕು. ಕಾಫಿ ಬೆಳೆಗಾರರ ಸಾಲಗಳನ್ನು ಮರುಹೊಂದಾಣಿಕೆಗೊಳಿಸಬೇಕು.
ಪ್ರಸ್ತುತ ಕರ್ನಾಟಕದ ಮಲೆನಾಡಿನ ಪ್ರದೇಶಗಳಲ್ಲಿ ಬೆಳೆಯಲ್ಪಡುವ ಭತ್ತ, ಕಾಳುಮೆಣಸು, ಅಡಿಕೆ, ಮುಂತಾದ ಬೆಳೆಗಳಿಗೆ ಬೆಳೆವಿಮೆಯನ್ನು ನೀಡಲಾಗುತ್ತಿದ್ದು, ಮುಖ್ಯವಾಗಿ ಈ ಭಾಗದಲ್ಲಿ ಕಾಫಿಯನ್ನೂ ಸಹಾ ಬೆಳೆಯಲಾಗುತ್ತಿದೆ. ಆದರೆ ಬೆಳೆವಿಮೆಯಿಂದ ಕಾಫಿ ಬೆಳೆಯನ್ನು ಹೊರಗಿಡಲಾಗಿದೆ. ಈಗಾಗಲೇ ಹವಮಾನ ವೈಪರೀತ್ಯದಿಂದ ಕಾಫಿ ಬೆಳೆಯಲ್ಲಿ ಸಾಕಷ್ಟು ಏರಿಳಿತಗಳು ಸಂಭವಿಸುತ್ತಿವೆ. ಆದ್ದರಿಂದ ದಯಮಾಡಿ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಕಾಫಿಯನ್ನು ಸೇರ್ಪಡೆಗೊಳಿಸಬೇಕು.
ಶೀಘ್ರದಲ್ಲೇ ಸಭೆ ನಡೆಸಬೇಕು
ಜಂಟಿ ಕ್ರಿಯಾ ಸಮಿತಿಯು ಮಾರ್ಚ್ 6,2019ರಲ್ಲಿ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಿ, 2018 ಮತ್ತು 2019ರಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಯ ವರದಿಯನ್ನು ಸಂಪೂರ್ಣವಾಗಿ ತಿಳಿಸಿತ್ತು. ಆದರೆ ಇದುವರೆಗೂ ಸಂಭವಿಸಿರುವ ಹಾನಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ. ಆದ್ದರಿಂದ ದಯಮಾಡಿ, ಶೀಘ್ರದಲ್ಲೇ ಕರ್ನಾಟಕ ರಾಜ್ಯದ ಮುಖ್ಯಕಾರ್ಯದರ್ಶಿ, ಕಾಫಿ ಮಂಡಳಿ ಮತ್ತು ಕಾಫಿ ಬೆಳೆಗಾರರ ಸಂಘಟನೆಗಳ ಮುಖಂಡರುಗಳೊಂದಿಗೆ ಚರ್ಚಿಸಿ, ಪರಿಹಾರ ದೊರಕಿಸಿಕೊಡುವಲ್ಲಿ ಕಾರ್ಯೋನ್ಮುಖರಾಗಬೇಕು.
7 ಬಿ ನೇರ ತೆರಿಗೆಯ ಕೇಂದ್ರಿಯ ಮಂಡಳಿ
ಭಾರತದಲ್ಲಿ ಕಾಫಿಯು ಒಂದು ಸಣ್ಣ ಉದÀ್ಯಮ. ಶೇ. 98.8 ಕಾಫಿ ಬೆಳೆಗಾರರು ಸಣ್ಣ ಬೆಳೆಗಾರರು ಹಾಗೂ 10 ಹೆಕ್ಟೇರ್ ಒಳಗಿನ ವಿಸ್ತೀರ್ಣದ ಕಾಫಿ ತೋಟದ ಒಡೆಯರಾಗಿರುತ್ತಾರೆ. ಇಂತಹ ಸಣ್ಣ ಬೆಳೆಗಾರರು ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾನು ಬೆಳೆದ ಕಾಫಿಯನ್ನು ಮಾರಾಟ ಮಾಡಲು ಅಸಾಧ್ಯವಾಗಿರುವುದರಿಂದ ಇವರು ರಫ್ತುದಾರರನ್ನು ಆಶ್ರಯಿಸಬೇಕಾಗುತ್ತದೆ. ಇದರಿಂದಾಗಿ ಕಾಫಿ ಬೆಳೆಗಾರರು 50 ಕೆ.ಜಿಯ ಒಂದು ಚೀಲ ಅರೆಬಿಕಾ ಕಾಫಿಗೆ ತೋಟದ ಬಾಗಿಲಿನಲ್ಲಿಯೇ ರೂ. 1000 ದಷ್ಟು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಕಾಫಿಯನ್ನು ಹರಾಜಿನ ಮೂಲಕ ಸಣ್ಣ ಬೆಳೆಗಾರನೇ ಮಾರಾಟ ಮಾಡಿದರೆ ಬೆಳೆಗಾರರಿಗೆ ಸ್ವಲ್ಪ ಮಟ್ಟದ ಲಾಭ ಬರಬಹುದು. ಕಾಫಿ ಬೋರ್ಡ್‍ನಿಂದ ಕೆ.ಜಿ. ಯೊಂದಕ್ಕೆ 4 ರೂ. ಹರಾಜಿಟ್ಟು ಕಾಫಿ ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಕೂಡಾ ಮಾಡುತ್ತದೆ. 7ಬಿ ಎನ್ನುವ ನೇರ ತೆರಿಗೆಯನ್ನು ಇ.ಪಿ.ಒ.ಎಸ್‍ನ್ನು ರದ್ದು ಮಾಡಿರುವುದು ಉತ್ತಮವಾದ ನಡೆಯಾಗಿದೆ. ಇದರಿಂದ ಕಾಫಿ ಬೆಳೆಗಾರರ ವಾರ್ಷಿಕ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ನಿಚ್ಚಳವಾಗಿದೆ. ಇದು ದೇಶದ ಪ್ರಧಾನಿಗಳ ಕನಸಾದ 2022ನೇ ಇಸವಿಯೊಳಗೆ ಪ್ರತಿಯೊಬ್ಬ ರೈತನ ಆದಾಯದಲ್ಲಿ ದ್ವಿಗುಣವಾಗುತ್ತದೆ.
ರಸಗೊಬ್ಬರಗಳ ಬೆಲೆಯು ಮೂರು ಪಟ್ಟು ಅಧಿಕವಾಗಿರುವುದರಿಂದ ಗಿಡಗಳಿಗೆ ಸಕಾಲದಲ್ಲಿ ಪೆÇೀಷಕಯುಕ್ತ ಗೊಬ್ಬರವನ್ನು ನೀಡಲು ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ. ಕೇಂದ್ರ ವಾಣಿಜ್ಯ ಮಂತ್ರಾಲಯವು ಈ ರಸಗೊಬ್ಬರಗಳನ್ನು ಕಾಫಿ ಬೋರ್ಡ್ ಮೂಲಕ ಸಬ್ಸಿಡಿ ದರದಲ್ಲಿ ಬೆಳೆಗಾರರಿಗೆ ಒದಗಿಸಬೇಕು. ಕಾಫಿ ಗಿಡಗಳಿಗೆ ಬೆಳವಣಿಗೆ ಮತ್ತು ಉತ್ತಮ ಫಸಲಿಗಾಗಿ ಸೂಕ್ತ ಸಮಯದಲ್ಲಿ ರಸಗೊಬ್ಬರಗಳನ್ನು ನೀಡಬೇಕು. ಕಾಫಿ ಗಿಡವು ಸಶಕ್ತವಾಗಿ, ಆರೋಗ್ಯಕರವಾಗಿ ಬೆಳೆಯಬೇಕಾದರೆ ರಸಗೊಬ್ಬರ ಅಗತ್ಯವಿದೆ. ರಸಗೊಬ್ಬರಗಳ , ಕೀಟನಾಶಕ ಹಾಗೂ ಕಳೆನಾಶಕಗಳಲ್ಲಿನ ಮೇಲಿನ ಜಿ.ಎಸ್.ಟಿ. ಶೇ. 5 ರಿಂದ ಶೇ. 18 ರಷ್ಟು ಇರುವುದನ್ನು ಕಡಿತಗೊಳಿಸಿ ರಸಗೊಬ್ಬರಗಳ ಮೇಲೆ ಶೇ. 0 ಜಿ.ಎಸ್.ಟಿ.ಯನ್ನು ಹಾಗೂ ಕೀಟನಾಶಕ ಮತ್ತು ಕಳೆನಾಶಕಗಳ ಮೇಲೆ ಶೇ. 5 ಜಿ.ಎಸ್.ಟಿ. ವಿಧಿಸಬೇಕು ಎಂದು ಮನವಿ ಮಾಡಲಾಗಿದೆ.