ಸೋಮವಾರಪೇಟೆ, ಡಿ. 25: ಅರಣ್ಯ ಇಲಾಖೆಯಲ್ಲಿನ ಗಮನಾರ್ಹ ಸೇವೆಗಾಗಿ ಮಡಿಕೇರಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಪಿ.ಟಿ. ಶಶಿ ಅವರಿಗೆ ರಾಜ್ಯಮಟ್ಟದ ಬಿ. ಮಾರಪ್ಪ ಸ್ಮಾರಕ ಪ್ರಶಸ್ತಿ ಲಭಿಸಿದೆ.

ಬಿ. ಮಾರಪ್ಪ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಅರಣ್ಯ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜ್ಯ ಅರಣ್ಯ ಸಚಿವ ಸಿ.ಸಿ. ಪಾಟೀಲ್ ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ಉಪ ವಲಯ ಅರಣ್ಯಾಧಿಕಾರಿಯಾಗಿರುವ ಶಶಿ ಅವರು, ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಸಾಗಾಣಿಕೆಯಾಗುತ್ತಿದ್ದ ಮರಮುಟ್ಟು, ಹರಳುಕಲ್ಲು, ಅರಶಿಣ ಮತ್ತು ಗುಳಮಾವು ಚಕ್ಕೆ ಪ್ರಕರಣಗಳನ್ನು ಪತ್ತೆಹಚ್ಚಿ, ಆರೋಪಿಗಳನ್ನು ವಾಹನ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಇದರೊಂದಿಗೆ ಅಂತರಾಜ್ಯ ಮಟ್ಟದಲ್ಲಿ ಕೇರಳ ಗಡಿ ಭಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಬೀಟೆ, ಜಂಬೆ, ಬಿಲ್ವಾರ ಮರಗಳ ಕಳ್ಳಸಾಗಾಣಿಕೆಗೆ ಕಡಿವಾಣ ಹಾಕಿ, ಅಂತರಾಜ್ಯ ಬೇಟೆಗಾರರನ್ನು ಬಂಧಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಮಾನವ ಆನೆ ಸಂಘರ್ಷ ತಡೆಗಟ್ಟುವಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಇವರು, ಪುಷ್ಪಗಿರಿ ಪರ್ವತ ಚಾರಣಿಗರಲ್ಲಿ ಅರಿವು ಮೂಡಿಸಿ ಪ್ಲಾಸ್ಟಿಕ್ ಮುಕ್ತ ಮಾಡುವಲ್ಲಿ ಯಶಸ್ಸು ಕಂಡಿದ್ದರು. ಇವರ ಈ ಸೇವೆಯನ್ನು ಗುರುತಿಸಿ ಟ್ರಸ್ಟ್ ವತಿಯಿಂದ ಮಾರಪ್ಪ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮಾರಪ್ಪ ಮೆಮೋರಿಯಲ್ ಟ್ರಸ್ಟ್‍ನ ಅಧ್ಯಕ್ಷ ಎಂ.ಆರ್. ಪಾಲಣ್ಣ, ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಅಜಯ್ ಮಿಶ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.