ಸುಂಟಿಕೊಪ್ಪ, ಡಿ. 25: ಕನಸ್ಸುಗಳನ್ನು ನನಸಾಗಿಸಲು ಕಠಿಣ ಪರಿಶ್ರಮ ಅಗತ್ಯ ಎಂದು ಭಾರತೀಯ ಭೂಸೇನಾ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ. ಮಹಾವೀರ ಪ್ರಸಾದ್ ಎಸ್.ಎಂ, ವಿ.ಎಸ್.ಎಂ. ಕರೆ ನೀಡಿದ್ದಾರೆ.
ಕೊಡಗರಹಳ್ಳಿಯ ಶಾಂತಿನಿಕೇತನ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿರಬೇಕು. ಇದರಿಂದ ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಗರಿಷ್ಠ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾೀಡೊ ಮಾತನಾಡಿ, ಮಕ್ಕಳು ಮೈದಾನದಲ್ಲಿ ಆಟವಾಡಬೇಕೆ ಹೊರತು ಮೊಬೈಲ್ ಮತ್ತು ಕಂಪ್ಯೂಟರ್ ಪರದೆಯ ಮುಂದೆ ಅಲ್ಲ ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಸಿ.ಎ. ಉತ್ತಯ್ಯ ವಹಿಸಿ ಮಾತನಾಡಿದರು.
ಶಾಲೆಯ ಕುರಿತು ಆಡಳಿತ ಮಂಡಳಿಯ ಖಜಾಂಜಿ ಎಂ.ಎನ್. ಹರೀಶ್ ವರದಿ ವಾಚಿಸಿದರು. ಶೈಕ್ಷಣಿಕ ವರ್ಷದ ಸಾಧನೆಗಳ ಕುರಿತು ಶಾಲಾ ಮುಖ್ಯೋಪಾಧ್ಯಾಯಿನಿ ಮೇರಿ ಫಾತಿಮಾ ವಿವರ ನೀಡಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಬಿ.ಡಿ. ಮಧುರ ಸ್ವಾಗತಿಸಿ, ಜೆನೆಟ್ ಮೊಂತೋರೊ ಮತ್ತು ಬಿಪಿನ್ ಸೋಮಯ್ಯ ನಿರೂಪಿಸಿ, ಲಿಪಿಕಾ ವಂದಿಸಿದರು.
ಕಾರ್ಯಕ್ರಮ ಆಡಳಿತ ಮಂಡಳಿಯ ಸದಸ್ಯರಾದ ಅಜಿತ್ ಅಪ್ಪಚ್ಚು, ಅನಿಲ್ಪೊನ್ನಪ್ಪ, ರಂಜಿತ್ ಕಾರ್ಯಪ್ಪ, ಬಿ.ಡಿ. ಸುಭಾಷ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.