ಗೋಣಿಕೊಪ್ಪ ವರದಿ, ಡಿ. 25: ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಬೊಟ್ಯತ್ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ವತಿಯಿಂದ ಬೊಟ್ಯತ್ನಾಡ್ ಹಾಕಿ ಟೂರ್ನಿ ನಡೆಯುತ್ತಿದ್ದು, 5 ತಂಡಗಳು ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿವೆ. ಸೋಲನುಭವಿಸಿದ 5 ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ.
ಡ್ರಿಬ್ಲ್ ಹೆಂಪ್, ವೀರಾಜಪೇಟೆ ಕೊಡವ ಸಮಾಜ, ಮಡಿಕೇರಿ ಚಾರ್ಮರ್ಸ್, ಪೊದ್ದಮಾನಿ ಬ್ಲೂಸ್ಟಾರ್ಸ್ ಹಾಗೂ ಬೇಗೂರು ಈಶ್ವರ ಯೂತ್ಕ್ಲಬ್ ತಂಡಗಳು ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದವು.
ಡ್ರಿಬ್ಲ್ ಹೆಂಪ್ ತಂಡವು ಬಲಮುರಿ ತಂಡವನ್ನು 5-3 ಗೋಲುಗಳ ಅಂತರದಿಂದ ಸೋಲಿಸಿತು. ಡ್ರಿಬ್ಲ್ ಪರ 12, 60ನೇ ನಿಮಿಷದಲ್ಲಿ ರಮೇಶ್, 47 ರಲ್ಲಿ ಕರುಣ್, 49 ರಲ್ಲಿ ಪ್ರಥ್ವಿ, 55ರಲ್ಲಿ ಕುಶ, ಬಲಮುರಿ ಪರ 16ರಲ್ಲಿ ಹರೀಶ್, 23ರಲ್ಲಿ ತಿಮ್ಮಣ್ಣ, 40 ರಲ್ಲಿ ಮಾಚಯ್ಯ ಗೋಲು ಹೊಡೆದರು.
ವೀರಾಜಪೇಟೆ ಕೊಡವ ಸಮಾಜ ತಂಡವು ಕಿರುಗೂರು ಸ್ಪೋಟ್ರ್ಸ್ ಕ್ಲಬ್ ವಿರುದ್ಧ 6-5 ಗೋಲುಗಳ ಗೆಲುವು ಪಡೆಯಿತು. ವೀರಾಜಪೇಟೆ ಪರ 7, 24ನೇ ನಿಮಿಷಗಳಲ್ಲಿ ಶಮಂತ್, 10, 54 ರಲ್ಲಿ ಭರತ್, 35 ರಲ್ಲಿ ಸುದರ್ಶನ್, 36 ರಲ್ಲಿ ಗಣಪತಿ, ಕಿರುಗೂರ್ ಪರ 22 ರಲ್ಲಿ ಹರೀಶ್, 23ರಲ್ಲಿ ಸಿ.ಸಿ. ಸೋಮಣ್ಣ, 27ರಲ್ಲಿ ಉತ್ತಮ್ಸಿಂಗ್, 41ರಲ್ಲಿ ಉತ್ತಯ್ಯ, 46 ರಲ್ಲಿ ವಿಷ್ಣುಕಾಂತ್ಸಿಂಗ್ ಗೋಲು ಬಾರಿಸಿದರು.
ಮಡಿಕೇರಿ ಚಾರ್ಮರ್ಸ್ ತಂಡವು ಮೂರ್ನಾಡ್ ಜನರಲ್ ತಿಮ್ಮಯ್ಯ ತಂಡದ ವಿರುದ್ಧ 6-2 ಗೋಲುಗಳಿಂದ ಜಯಿಸಿತು. ಮಡಿಕೇರಿ ಪರ 3, 35ರಲ್ಲಿ ಪಾಳ್ಯನ್, 27, 30ರಲ್ಲಿ ಓಡಿಯಂಡ ಪೊನ್ನಣ್ಣ, 26ರಲ್ಲಿ ಪ್ರಣಮ್ ಗೊನಿಡಾ, 53ರಲ್ಲಿ ಸಂತೋಷ್, ಮೂರ್ನಾಡ್ ಪರ 2ರಲ್ಲಿ ಮಿಲನ್ ಬೋಪಣ್ಣ, 15ರಲ್ಲಿ ಬಿ. ಆರ್. ಪ್ರಜ್ವಲ್ ಗೋಲು ಬಾರಿಸಿ ಮಿಂಚಿದರು.
ಪೊದ್ದಮಾನಿ ಬ್ಲೂಸ್ಟಾರ್ ತಂಡವು ಶ್ರೀಮಂಗಲ ಕೊಡವ ತಂಡದ ವಿರುದ್ಧ 5-1 ಗೋಲುಗಳ ಗೆಲುವು ಪಡೆಯಿತು. ಶ್ರೀಮಂಗಲ ಪರ 48, 53ರಲ್ಲಿ ವಸಂತ್ಕುಮಾರ್, 5ರಲ್ಲಿ ಪುನಿತ್ ಗೌಡ, 45ರಲ್ಲಿ ಪಿ. ಎಸ್. ನಿತಿನ್, 57ರಲ್ಲಿ ಪ್ರವನ್ ಮಡಿವಾಳ್, ಶ್ರೀಮಂಗಲ ಪರ 55 ನೇ ನಿಮಿಷದಲ್ಲಿ ಮಂಡವ್ ಗೋಲು ಹೊಡೆದರು.
ಬೇಗೂರ್ ಈಶ್ವರ ಯೂತ್ಕ್ಲಬ್ ತಂಡವು ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ತಂಡವನ್ನು 7-1 ಗೋಲುಗಳಿಂದ ಮಣಿಸಿತು. 21, 37 ಕಾರ್ಯಪ್ಪ, 48, 50ರಲ್ಲಿ ಅರುಣ್, 5ರಲ್ಲಿ ಪೂಣಚ್ಚ, 9 ರಲ್ಲಿ ಅಯ್ಯಮ್ಮ, ಅಮ್ಮತ್ತಿ ಪರ 26ರಲ್ಲಿ ರಂಜಿತ್ ಗೋಲು ಹೊಡೆದರು.
ಉದ್ಘಾಟನೆ: ನಿವೃತ್ತ ಶಿಕ್ಷಕ ತೀತಮಾಡ ಎಂ. ಕುಶಾಲಪ್ಪ ಟೂರ್ನಿಗೆ ಚಾಲನೆ ನೀಡಿ ಮಾತನಾಡಿ, ಯುವಕರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಕೊಂಡು ದೈಹಿಕ, ಮಾನಸಿಕ ಸಮತೋಲನ ಕಾಪಾಡಲು ಶ್ರಮಿಸಬೇಕು ಎಂದರು.
ಗೋಣಿಕೊಪ್ಪ ಪ್ರೆಸ್ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಸಾಕಷ್ಟು ಪಂದ್ಯಗಳಿಗೆ ಅವಕಾಶವಾಗುತ್ತಿರುವ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನಕ್ಕೆ ವಿಶೇಷವಾಗಿ ನಾಮಕರಣ ಮಾಡುವ ಮೂಲಕ ಮತ್ತಷ್ಟು ಗುರುತಿಸುವಂತಾಗಬೇಕು ಎಂದರು.
ಈ ಸಂದರ್ಭ ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ತಾತೀರ ಕೆ. ಬೋಪಯ್ಯ, ಇಗ್ಗುತ್ತಪ್ಪ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಅಧ್ಯಕ್ಷ ಮದ್ರೀರ ಸೋಮಯ್ಯ, ಕಾಫಿ ಬೆಳೆಗಾರ ಕಡೇಮಾಡ ಕನಸು ದೇವಯ್ಯ, ಹಾಕಿಕೂರ್ಗ್ ಜಂಟಿ ಕಾರ್ಯದರ್ಶಿ ಕಂಬೀರಂಡ ದಿವ್ಯಾ ಮುತ್ತಪ್ಪ, ದಾನಿಯಾದ ಅಚ್ಚಿಯಂಡ ವೇಣು, ಕಿಲನ್ ಗಣಪತಿ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರ, ಬೊಟ್ಯತ್ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀಮಂತ್ ಇದ್ದರು.
ಅಮೆರಿಕನ್ ಫುಟ್ಬಾಲ್ ಆಟದಲ್ಲಿ ಸಾಧನೆ ಮಾಡುತ್ತಿರುವ ಆಲೆಮಾಡ ನಮನ್ ನಂಜಪ್ಪ ಅವರನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಚೆಪ್ಪುಡೀರ ಕಾರ್ಯಪ್ಪ ವೀಕ್ಷಕ ವಿವರಣೆ ನೀಡಿದರು.
ಸೂರ್ಯಗ್ರಹಣ ಪ್ರಯುಕ್ತ ಗುರುವಾರದ ನಡೆಯಬೇಕಿದ್ದ ಕ್ವಾರ್ಟರ್ ಫೈನಲ್ ಪಂದ್ಯಗಳು ಶುಕ್ರವಾರ ನಡೆಯಲಿದೆ.
-ಸುದ್ದಿಮನೆ