*ಸಿದ್ದಾಪುರ, ಡಿ. 25: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರು ಕಾಫಿ ತೋಟದ ಲೈನ್ ಮನೆಯಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿರುವವರನ್ನು ಗ್ರಾ.ಪಂ.ನಿಂದ ಗುರುತಿಸಲಾಗಿದ್ದು, ಕಳೆದ ಮಳೆಗೆ ಮನೆ ಕಳಕೊಂಡ ಸಂತಸ್ತರಿಗೆ ಜಿಲ್ಲಾಡಳಿತ ಸರ್ವೆ ನಡೆಸಿದ ಜಾಗದಲ್ಲಿ ಆದ್ಯತೆ ಮೇರೆ ಮನೆ ನಿರ್ಮಿಸಿಕೊಡಬೇಕೆಂದು ಗ್ರಾ.ಪಂ.ಸದಸ್ಯರಾದ ಭುವನೇಂದ್ರ, ಅಂಚೆಮನೆ ಸುಧಿ, ಸುರೇಶ್ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ವಾಲ್ನೂರು-ತ್ಯಾಗತ್ತೂರು ವಿಭಾಗದ ನಿವೇಶನ ರಹಿತರಿಗೆ ಪ್ರಥಮ ಆದ್ಯತೆಯಲ್ಲಿ ಮನೆ ನಿರ್ಮಿಸಿಕೊಡಬೇಕು ಬಾಕಿ ಉಳಿಕೆ ಜಾಗವಿದ್ದರೆ ಬೇರೆ ಪಂಚಾಯಿತಿ ನಿವೇಶನ ರಹಿತರಿಗೆ ನೀಡಲು ನಮ್ಮ ಅಭ್ಯಂತರವಿಲ್ಲ ಎಂದರು. ವಾಲ್ನೂರು-ತ್ಯಾಗತ್ತೂರು ಪೈಸಾರಿಯಲ್ಲಿ ಮಳೆಯಿಂದ 35 ಜನರು ಮನೆ ಕಳಕೊಂಡಿದ್ದು, ಸರ್ವೆ ನಂ. 180/1 ರಲ್ಲಿ ಜಾಗ ಗುರುತಿಸಲಾಗಿದೆ. ಹಾಗೆಯೇ ಅಭ್ಯತ್‍ಮಂಗಲ ಪೈಸಾರಿ ಜಾಗವನ್ನು ಜಿಪಿಎಸ್ ಸರ್ವೆ ನಡೆಸಿದ್ದು, ನಿವೇಶನ ರಹಿತರಿಗೆ ಮನೆ ಜಿಲ್ಲಾಡಳಿತ ನಿರ್ಮಿಸಿಕೊಡಲಿ; ವಾಲ್ನೂರು-ತ್ಯಾಗತ್ತೂರು ಬಸವೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಬೋಜನ ಶಾಲೆಗೆ ಅನುದಾನ ನೀಡಬೇಕೆಂದು ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಎಸ್.ರಾಮಪ್ಪ, ಸುರೇಶ ಶಾಸಕರಿಗೆ ಮನವಿ ನೀಡಿದ್ದಾರೆ.