ಕಣಿವೆ: ರೈತರ ದಿನವನ್ನು ಆಚರಿಸುವ ಸರ್ಕಾರಗಳು ರೈತರಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಪೂರೈಸಿದಾಗ ಮಾತ್ರ ರೈತರದಿನಕ್ಕೆ ಅರ್ಥ ಬರುತ್ತದೆ ಎಂದು ಕೊಡಗು ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಹೇಳಿದರು. ಕುಶಾಲನಗರ ಸಮೀಪದ ಸುಂಕದಹಳ್ಳಿಯಲ್ಲಿ ಹಮ್ಮಿಕೊಂಡಿದ್ದ “ಕಿಸಾನ್ ದಿವಸ್“ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಹಿತವನ್ನು ಕಾಯುವುದೇ ಆದಲ್ಲಿ ಕಡಿಮೆ ಬೆಲೆಯಲ್ಲಿ ರಸಗೊಬ್ಬರ, ಗುಣಮಟ್ಟದ ಬಿತ್ತನೆ ಬೀಜ ಮತ್ತು ರೈತ ಬೆಳೆದ ಬೆಳೆಗೆ ಪೂರಕವಾದ ಬೆಂಬಲ ಬೆಲೆ ನೀಡಬೇಕು. ಹಾಗಿದ್ದಲ್ಲಿ ಮಾತ್ರ ರೈತನ ಬದುಕು ಬೆಳಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಗ್ರಾಮದ ಪ್ರಗತಿಪರ ರೈತ ಚಂದ್ರಶೇಖರ ಅವರನ್ನು ಗೌರವಿಸಲಾಯಿತು. ಇದಕ್ಕೂ ಮುನ್ನಾ ಭೂಮಿ ಹಾಗೂ ಎತ್ತುಗಳನ್ನು ಪೂಜಿಸಲಾಯಿತು. ಗ್ರಾಮದ ಹಿರಿಯ ರೈತರಾದ ಶಫಿವುಲ್ಲಾಖಾನ್, ರಾಜಶೇಖರ, ಶಂಕರ, ಕುಮಾರ, ವಿಜಯಕುಮಾರ್, ರವಿಕುಮಾರ್, ನಯಾಜ್, ನಟರಾಜು, ಶಮಿಉಲ್ಲಾಖಾನ್, ಸುನಿಲ್ ಮತ್ತಿತರರು ಇದ್ದರು. ಗ್ರಾಮದ ಯುವ ರೈತ ಕೂಟದ ಅಧ್ಯಕ್ಷ ಉಪ್ಪಿಕುಮಾರ್ ಸ್ವಾಗತಿಸಿ, ವಂದಿಸಿದರು.
ಕೂಡಿಗೆ: ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೃಷಿಕ ಸಮಾಜ, ತಾಲೂಕು ಕೃಷಿಕ ಸಮಾಜ, ಸೋಮವಾರಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಾಚೇಟೀರ ಚೋಟು ಕಾವೇರಪ್ಪ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ರೈತರಿಗೆ ಇದುವರೆಗೂ ಸಮಪರ್ಕ ಮಾರುಕಟ್ಟೆ ವ್ಯವಸ್ಥೆ ಆಗಿಲ್ಲ. ಬೆಳೆದ ಬೆಳೆಯನ್ನು ಖರೀದಿಸಲು, ಸಿಗಬೇಕಾದ ಬೆಲೆ ರೈತರಿಗೆ ಸಮರ್ಪವಾಗಿ ಸಿಕ್ಕಿದ್ದಲ್ಲಿ ರೈತರು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಇದರತ್ತ ಜನಪ್ರತಿನಿಧಿಗಳು ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ ಮಾತನಾಡಿ, ಸರಕಾರದಿಂದ ರಿಯಾಯಿತಿ ಸೌಲಭ್ಯಗಳು ಹೆಚ್ಚು ಇದ್ದು ರೈತರು ತಮ್ಮ ಜಮೀನಾದರಿತ ದಾಖಲಾತಿಗಳನ್ನು ಒದಗಿಸಿ ಸಿಗುವ ಸವಲತ್ತುಗಳನ್ನು ಸದ್ಬಳಸಿಕೊಳ್ಳುವಂತೆ ತಿಳಿಸಿದರು.
ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್ ಮಾತನಾಡಿ, ಸಹಕಾರ ಸಂಘದ ಮುಖೇನ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಲ್ಲದೆ, ಗುಂಪುಗಳ ಆಧಾರಿತ ಹೈನುಗಾರಿಕೆಗೆ ರೂ. 5 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಇದನ್ನು ಸದ್ಬಳಸಿಕೊಳ್ಳುವಂತೆ ತಿಳಿಸಿದರು. ಕೃಷಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ಸಹಕಾರ ಸಂಘಗಳ ಮೂಲಕ ನೀಡುತ್ತಿದ್ದು, ಅದೇ ರೀತಿ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ರೈತರು ಸದುಪಯೋಗಪಡಿಸಿಕೊಂಡು ಕೃಷಿಯಲ್ಲಿ ಮುಂದುವರೆಯಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಸೋಮವಾರಪೇಟೆ ಸಹಾಯಕ ಕೃಷಿ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ಅವರು ಮಾತನಾಡಿದರು. ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಮಾತನಾಡಿದರು. ರಸಗೊಬ್ಬರ ಮತ್ತು ಮಣ್ಣು ಸಂರಕ್ಷಣೆಯ ಬಗ್ಗೆ ಮಡಿಕೇರಿ ಎಂ.ಸಿ.ಎಫ್. ಡೆಪ್ಯುಟಿ ಮ್ಯಾನೇಜರ್ ಡಾ. ಮೃತ್ಯುಂಜಯ ಹಾಗೂ ಹೈನುಗಾರಿಕೆಯ ಬಗ್ಗೆ ಕೂಡಿಗೆಯ ಹಂದಿ ಅಭಿವೃದ್ಧಿ ಅಧಿಕಾರಿ ಡಾ. ಚಂದ್ರಶೇಖರ್ ವಿಚಾರ ಗೋಷ್ಠಿಯಲ್ಲಿ ಮಂಡನೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ವಹಿಸಿದ್ದರು. ಈ ಸಂದರ್ಭ ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಗೋವಿಂದರಾಜ್, ಕೂಡಿಗೆಯ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಗೌರಿ, ಕುಶಾಲನಗರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಪೂಣಚ್ಚ, ಸಹಾಯಕ ಕೃಷಿ ಅಧಿಕಾರಿ ಮಾದವರಾವ್, ಪ್ರಗತಿಪರ ರೈತ ಜವರೇಗೌಡ ಇದ್ದರು.