ಕಣಿವೆ, ಡಿ. 25: ಇಲ್ಲಿಗೆ ಸಮೀಪದ ಚಿಕ್ಕತ್ತೂರು ಗ್ರಾಮದಲ್ಲಿ ಬಾಂಧವ್ಯ ಗೌಡ ಸಂಘದ ವತಿಯಿಂದ ಹನ್ನೊಂದನೇ ವರ್ಷದ ಹುತ್ತರಿ ಸಂತೋಷ ಕೂಟ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಕುಶಾಲನಗರದ ಉದ್ಯಮಿ ಕರಂದ್ಲಾಜೆ ಆನಂದ್ ಮಾತನಾಡಿ, ಗೌಡ ಜನಾಂಗ ಸಾಂಸ್ಕೃತಿಕವಾಗಿ ಶ್ರೀಮಂತ ಜನಾಂಗವಾಗಿದ್ದು ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಛಾಪು ಮೂಡಿಸಿದೆ. ಸಮಾಜ ಬಾಂಧವರು ಸಂಘಟಿತರಾಗುವ ಮೂಲಕ ಸಮುದಾಯದ ಕಲೆ, ಆಚಾರ-ವಿಚಾರಗಳನ್ನು ಇಂದಿನ ಪೀಳಿಗೆಯವರಿಗೆ ತಿಳಿಯಪಡಿಸುವ ಮೂಲಕ ಸಂರಕ್ಷಿಸುವ ಕೆಲಸವಾಗಬೇಕಿದೆ ಎಂದರು. ಸಂಘದ ಸ್ಥಾಪಕ ಅಧ್ಯಕ್ಷ ಚೆರಿಯಮನೆ ಮಾದಪ್ಪ ಮಾತನಾಡಿ, ಗೌಡ ಸಮುದಾಯ ಕೊಡಗು ಜಿಲ್ಲೆಯಲ್ಲಿ ಇತರೇ ಸಮುದಾಯಗಳಿಗಿಂತ ಬಲಿಷ್ಠವಾಗಿ ಸಂಘಟಿತವಾಗುವ ಮೂಲಕ ಗೌಡ ಜನಾಂಗದ ಸಂಸ್ಕøತಿಯನ್ನು ರಾಜ್ಯವ್ಯಾಪಿ ಭಿತ್ತರಿಸಿ ಬೆಳೆಸುವಂತಾಗಬೇಕು ಎಂದರು. ಅಧ್ಯಕ್ಷ ಮತ್ತಾರಿ ಈರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪ್ರಮುಖರಾದ ಪೊಕ್ಕುಳಂಡ್ರ ಸುಂದರ, ಮತ್ತಾರಿ ಪ್ರಕಾಶ್, ಮತ್ತಾರಿ ಮುದ್ದಯ್ಯ, ಕುಂಡೇನಾ ಅಯ್ಯಣ್ಣ, ಸ್ಥಳದಾನಿ ದೊಡ್ಡೇರ ಸುರೇಶ ಮೊದಲಾದವರಿದ್ದರು. ನಂತರ ನೆರೆದಿದ್ದ ಜನಾಂಗ ಬಾಂಧವರಿಗೆ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಹಿಳೆಯರು ಹಾಗೂ ಪುರುಷರಿಗೆ ಹಮ್ಮಿಕೊಂಡಿದ್ದ ಗುಂಡು ಹೊಡೆವ ಸ್ಪರ್ಧೆ ಗಮನ ಸೆಳೆಯಿತು. ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ಮಕ್ಕಳಿಗೆ ಕಾಳುಹೆರಕುವುದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.