ದೇವಕುಮಾರರಾಗಿರುವ ಪ್ರಭುಕ್ರಿಸ್ತರು ದೇವರ ಮಹಿಮಾನ್ವಿತ ಪದವಿಯನ್ನು ತ್ಯಜಿಸಿ ಭೂಲೋಕದ ರಕ್ಷಣೆಗಾಗಿ ಧರೆಗಿಳಿದು ಮನುಷ್ಯರಾಗಿ ಜನಿಸಿದ ಪುಣ್ಯದಿನವೆ ಈ ಕ್ರಿಸ್ತಜಯಂತಿ. ಕ್ರಿಸ್ತಜಯಂತಿಯನ್ನು ಆಂಗ್ಲ ಭಾಷೆಯಲ್ಲಿ ‘ಕ್ರಿಸ್ಮಸ್’ ಎಂದು ಕರೆಯುತ್ತಾರೆ. ಕ್ರಿಸ್ಮಸ್‍ಎಂದರೆ ಪ್ರಾಚೀನ ಆಂಗ್ಲ ಭಾಷೆಯಲ್ಲಿ ‘ಕ್ರೈಸ್ಟಸ್ ಮಾಸ್’ ಎಂದರ್ಥ. ಕ್ರೈಸ್ಟ ಎಂದರೆ ಹಿಬ್ರೂ ಭಾಷೆಯಲ್ಲಿ ಅಭ್ಯಂಗಿಸಲ್ಪಟ್ಟವರು ಅಂದರೆ ಮೆಸ್ಸಾಯ ಎಂದರ್ಥ. ಮಾಸ್ ಎಂದರೆ ಬಲಿಪೂಜೆ ಎಂದರ್ಥ. ಹೀಗಾಗಿ ಕ್ರಿಸ್ಮಸ್‍ಎಂದರೆ ‘ಕ್ರಿಸ್ತರ ಬಲಿಪೂಜೆ’. ಕ್ರಿಸ್ತರ ಹುಟ್ಟುಹಬ್ಬದ ಕಾರಣ ಕ್ರಿಸ್ಮಸ್ ಅನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಓಚಿಣiviಣಥಿ oಜಿ ಅhಡಿisಣ, ಕ್ರಿಸ್ತ ಜಯಂತಿ, ಕ್ರಿಸ್ತನ ಜನನದ ಹಬ್ಬ ಇತ್ಯಾದಿ.
ಈ ಕ್ರಿಸ್ತಜಯಂತಿ ಕೇವಲ ಕ್ರೈಸ್ತರಿಗೆ ಮಾತ್ರವಲ್ಲದೆ ಇಡೀ ವಿಶ್ವದ ಹಬ್ಬವಾಗಿದೆ. ಈ ಜಗತ್ತಿಗೆ ಶಾಂತಿ, ಪ್ರೀತಿ, ಕ್ಷಮೆ, ಕರುಣೆ, ಸಹೋದರತೆಯನ್ನು ಸಾರಿ ತನ್ನ ಜೀವನದ ಮೂಲಕ ಸಾಕ್ಷಾತ್ಕರಿಸಿದ ದೈವೀಪುರುಷನೇ ಪ್ರಭು ಯೇಸುಕ್ರಿಸ್ತ.
ಕ್ರಿಸ್ತರ ಜೀವನ, ಮರಣ, ಪುನರುತ್ಥಾನ, ಬಲಿದಾನವನ್ನು ನೆನಪಿಸುವ ಬಲಿಪೂಜೆ, ಕ್ರಿಸ್ತರ ಜನನವನ್ನು ಪ್ರತಿಬಿಂಬಿಸುವ ಗೋದಲಿ, ದೇವದೂತರ ಗಾಯನವನ್ನು ನೆನಪಿಸುವ ಕ್ಯಾರಲ್ಸ್ ಅಂದರೆ ಕ್ರಿಸ್ಮಸ್ ಗೀತೆಗಳು, ಮೂರು ರಾಯರಿಗೆ ದಾರಿ ತೋರಿಸಿದ ನಕ್ಷತ್ರ, ಉಡುಗೊರೆ ನೀಡುತ್ತಿದ್ದ ಸಂತಾಕ್ಲಾಸ್, ಜೀವನದ ಸಂಕೇತ ಕ್ರಿಸ್ಮಸ್ ಟ್ರೀ, ಶುಭಾಶಯ ಕೋರುವ ಕ್ರಿಸ್ಮಸ್‍ಕಾಡ್ರ್ಸ್ ಮತ್ತು ಕೌಟುಂಬಿಕ ಭೋಜನ ಇತ್ಯಾದಿ ಈ ಹಬ್ಬದ ವಿಶೇಷ. ಕ್ರಿಸ್‍ಮಸ್ ಹಬ್ಬವು ಸಂತೋಷ ಸಮೃದ್ದಿ, ಶಾಂತಿ ಸಮಾಧಾನ, ಸುಮನಸ್ಸುತೋರುವ ಪ್ರತ್ಯೇಕ ವಿಶ್ವ ಹಬ್ಬವಾಗಿದೆ.
ಗೋದಲಿ: ಗೋದಲಿ ಕ್ರಿಸ್ತ ಜಯಂತಿ ಆಚರಣೆಯ ಪ್ರಮುಖ ಅಂಶವಾಗಿದೆ. ಸಂತ ಮತ್ತಾಯ ಮತ್ತು ಸಂತ ಲೂಕರ ಶುಭಸಂದೇಶದಲ್ಲಿ ಉಲ್ಲೇಖವಾಗಿರುವ ಯೇಸುವಿನ ಜನನದ ವೃತ್ತಾಂತವನ್ನು ಆಧರಿಸಿ ಈ ಗೋದಲಿಯನ್ನು ನಿರ್ಮಿಸಲಾಗುತ್ತದೆ. ಇಟಲಿಯ ಅಸ್ಸಿಸ್ಸಿಯ ಸಂತ ಫ್ರಾನ್ಸಿಸ್ಸರು ಈ ಸಂಪ್ರದಾಯದ ಪ್ರವರ್ತಕರಾಗಿರುತ್ತಾರೆ. 12ನೇ ಶತಮಾನದಲ್ಲಿ ಜೀವಿಸಿದ ಈ ಸಂತರು ತಮ್ಮ ಜೀವನದ ಅಂತ್ಯದ ದಿನಗಳಲ್ಲಿ ಕ್ರಿಸ್ತನ ಜನನದ ಸನ್ನಿವೇಶವನ್ನು ಕಣ್ಣಾರೆ ನೋಡಬೇಕೆಂಬ ಹಂಬಲದಿಂದ ಅಸ್ಸಿಸ್ಸಿಯ ಸಮೀಪದ ಗ್ರೆಚ್ಚಿಯೋ ಎಂಬಲ್ಲಿ ಪ್ರಪ್ರಥಮ ಬಾರಿಗೆ ಜೀವಂತ ಗೋದಲಿಯನ್ನು ಕಟ್ಟಿಸಿ ಗೋದಲಿ ನಿರ್ಮಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಜೀವಂತ ಪ್ರಾಣಿಗಳನ್ನು ಒಳಗೊಂಡ ಆ ಗೋದಲಿಯು ಬೆತ್ಲೆಹೇಮಿನ ಕ್ರಿಸ್ತ ಗೋದಲಿಯನ್ನು ಸಾಕ್ಷಾತ್‍ಕರಿಸುವಂತಿತ್ತು. ಅಲ್ಲಿಂದ ಪ್ರಾರಂಭವಾದ ಈ ಸಂಪ್ರದಾಯ ಶತ-ಶತಮಾನಗಳಿಂದಲೂ ನಡೆದು ಬಂದು ಇಂದಿನ ತನಕವು ಪ್ರಸಿದ್ಧಿಯಲ್ಲಿದೆ. ಪರಿಶುಧ್ಧನಾದ ದೇವರು ಲೋಕದ ರಕ್ಷಣೆಗಾಗಿ ಬಡವರ ಮಧ್ಯೆ ದೀನ-ದಲಿತರ ನಡುವೆ ಶೋಷಿತರ ಧ್ವನಿಯಾಗಿ ಪ್ರೀತಿ-ಕರುಣೆ-ನ್ಯಾಯ-ನೀತಿ-ಕ್ಷಮೆ-ಸಹೋದರತೆಯನ್ನು ಸಾರುವುದಕ್ಕಾಗಿ ಬಡವರಾಗಿ ಜನಿಸಿ, ಜೀವಿಸಿದರು ಎಂಬ ಸಂದೇಶವನ್ನು ನೀಡುತ್ತದೆ. ಗೋದಲಿಯಲ್ಲಿ ಇರುವ ಮಾತೆ ಮರಿಯ, ಸಂತ ಜೋಸೆಫರು, ಕುರುಬರು, ಪ್ರಾಣಿಗಳು, ಮೂರು ರಾಯರು, ದೇವದೂತರುಗಳ ಪ್ರತಿಮೆಗಳು ಕ್ರಿಸ್ತ ಜಯಂತಿಯ ಸಂದೇಶವನ್ನು ನೀಡುತ್ತದೆ. ಪ್ರಸ್ತುತ ದಿನಗಳಲ್ಲಿ ವಿವಿಧ ಸಂದೇಶವನ್ನು ಸಾರುವ ವಿವಿಧ ಬಗೆಯ ಗೋದಲಿಗಳನ್ನು ಕಾಣುತ್ತೇವೆ. ಮಾನವನಗ್ರಹಿಕೆಗೆ ಮೀರಿದ ರಕ್ಷಣಾ ಯೋಜನೆಯನ್ನು ಶ್ರೀಸಾಮಾನ್ಯರಿಗೆ ತಿಳಿಸುವಲ್ಲಿ ಈ ಗೋದಲಿ ಪ್ರಮುಖ ಪಾತ್ರವಹಿಸುತ್ತದೆ.
ಕ್ರಿಸ್ಮಸ್ ನಕ್ಷತ್ರ : ಸಂತ ಮತ್ತಾಯನು ಬರೆದ ಶುಭಸಂದೇಶದಲ್ಲಿ ಈ ಗೋದಲಿಯನ್ನು ಸೂಚಿಸುವ ನಕ್ಷತ್ರವೊಂದು ಕಾಣಿಸಿತು ಎಂಬ ಉಲ್ಲೇಖವಿದೆ. ಇಂದು ಗೋದಲಿಯಲ್ಲಿ, ಮನೆ-ಚರ್ಚುಗಳಲ್ಲಿ, ಬೀದಿ-ಬೀದಿಗಳಲ್ಲಿ ಬೆಳಕಿನಿಂದ ಕಂಗೊಳಿಸುವ ನಕ್ಷತ್ರಗಳು ಕ್ರಿಸ್ತನ ಜನನವನ್ನು ತಿಳಿಸಿದ ಆ ನಕ್ಷತ್ರದ ಪ್ರತೀಕವಾಗಿದೆ. ಯೇಸುವಿನ ಜನನದ ಸಂದರ್ಭದಲ್ಲಿ ಅವರ ಜನನದ ಸ್ಥಳವನ್ನು ತೋರಿಸುವ ನಕ್ಷತ್ರವೊಂದು ಪೂರ್ವ ದಿಕ್ಕಿನಲ್ಲಿ ಮೂರು ರಾಜರಿಗೆ ಕಾಣಿಸಿಕೊಂಡಿತು. ಯೇಸುವಿನ ಜೀವನದ ದೈವೀಯೋಜನೆಯನ್ನು ಶ್ರುತಪಡಿಸುವ ಚಿನ್ನ, ಧೂಪ ಹಾಗೂ ರಕ್ತ ಬೋಳವನ್ನು ಕಾಣಿಕೆಯಾಗಿ ಅವರು ನೀಡಿದರು.
ಕ್ರಿಸ್ಮಸ್‍ಕ್ಯಾರಲ್ಸ್: ಕ್ರಿಸ್ತಜಯಂತಿಯ ಈ ಗೋದಲಿಯಲ್ಲಿ ನಮಗೆ ಕಾಣಸಿಗುವ ಮತ್ತೊಂದು ಅಂಶವೆಂದರೆ ದೇವದೂತರು. ಶುಭ ಸಂದೇಶಕಾರ ಸಂತ ಲೂಕರು ತಮ್ಮ ಶುಭ ಸಂದೇಶದಲ್ಲಿ ಕ್ರಿಸ್ತನ ಜನನದ ಸಂದರ್ಭದಲ್ಲಿ ದೇವದೂತರು ಆಕಾಶದಲ್ಲಿ “ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ’ ಎನ್ನುವ ಗಾಯನವನ್ನು ಹಾಡಿದರು ಎಂದು ಉಲ್ಲೇಖಿಸಿದ್ದಾರೆ. ಇದರಂತೆಯೇ ಕ್ರಿಸ್ತ ಜಯಂತಿಯ ಶಾಂತಿ ಪ್ರೀತಿಯ ಸಂದೇಶವನ್ನು ಕ್ರೈಸ್ತ ಬಾಂಧವರು ಹಾಡುಗಳ ಮೂಲಕ ವ್ಯಕ್ತಪಡಿಸುತ್ತಾರೆ. 12ನೇ ಶತಮಾನದಲ್ಲಿನ ಅಸ್ಸಿಸ್ಸಿಯ ಸಂತ ಪ್ರಾನ್ಸಿಸ್ಸರು ತಮ್ಮ ಆಡುಭಾಷೆಯಲ್ಲಿ ದೇವರ ಸ್ತುತಿಗೀತೆಯನ್ನು ಮನೆ-ಮನೆಗೂ ಹೋಗಿ ಸಾರುತ್ತಿದ್ದ ರೂಢಿ ಇತ್ತು. ಇದೇ ರೂಢಿಯು ಮುಂದುವರೆದು ಕ್ರಿಸ್ತಜಯಂತಿಯ ಸಂದೇಶವನ್ನು ಹಾಡುಗಳ ಮೂಲಕ ಸಾರುವ ಪದ್ದತಿಗೆ ಕಾರಣವಾಯಿತು. ಫ್ರೆಂಚ್ ಭಾಷೆಯಲ್ಲಿ ‘ಕ್ಯಾರಲ್ಸ್’ ಎಂದರೆ ‘ಗಾಯನ ಮಂಡಲಿ’ ಎಂದು ಅರ್ಥ. ಪ್ರಸ್ತುತವಾಗಿ ಕ್ಯಾರಲ್ಸ್ ಎಂದರೆ ಕ್ರಿಸ್ತಜಯಂತಿಯ ಸಂದೇಶ ಸಾರುವ ಗೀತೆಗಳು ಎಂಬ ಅರ್ಥವನ್ನು ನೀಡುತ್ತದೆ. ಇಂದು ಈ ಕಿಸ್ಮಸ್‍ಕ್ಯಾರಲ್ಸ್ ಕೇವಲ ಕ್ರಿಸ್ತ ಜಯಂತಿಯ ಸಂದೇಶ ಹಾಗೂ ಸಂತೋಷವನ್ನು ಇತರರೊಡನೆ ಹಂಚಿಕೊಳ್ಳುವ ಭ್ರಾತೃತ್ವದ ಸಂಕೇತವಾಗಿದೆ.
ಕ್ರಿಸ್ಮಸ್‍ಟ್ರೀ: ಕ್ರಿಸ್ತಜಯಂತಿಯನ್ನು ಸಾರುವ ಮತ್ತೊಂದು ಸಾಂಕೇತಿಕ ಸಾಧನವೆಂದರೆ ಈ ಕಿಸ್ಮಸ್ ಟ್ರೀ. ಕ್ರಿ.ಶ 15ರಿಂದ 16ನೇ ಶತಮಾನದಲ್ಲಿ ಜರ್ಮನಿಯ ಕೆಲವು ಭಾಗಗಳಲ್ಲಿ ಈ ಕ್ರಿಸ್ಮಸ್‍ಟ್ರೀಯ ಆಚರಣೆ ಬೆಳಕಿಗೆ ಬಂತು. ಪಾಶ್ಚಾತ್ಯ ದೇಶಗಳಲ್ಲಿ ಬೆಳೆಯುವ ಈ ಮರ ಸದಾ ಹಸಿರಿನಿಂದ ಕೂಡಿರುತ್ತದೆ. ಆದರಿಂದಲೇ ಈಜಿಪ್ಟ್, ಚೀನಾ, ಯೆಹೂದಿಗಳಿಗೆ ಇದು ‘ಜೀವ’ದ ಸಂಕೇತವಾಗಿದೆ. (sಥಿmboಟ oಜಿ ಟiಜಿe) ಪಾಶ್ಚಾತ್ಯ ಸಂಪ್ರದಾಯದ ಪ್ರಕಾರ ಇದು ದ್ವೇಷ-ವೈಷಮ್ಯಗಳನ್ನು ಅಳಿಸುವ ಸಾಮರಸ್ಯದ ಸಂಕೇತವಾಗಿದೆ. ಕುಟುಂಬಗಳನ್ನು ತನ್ನೆಡೆಗೆ ಸೆಳೆಯುವ ಐಕ್ಯತೆಯ ಚಿಹ್ನೆಯಾಗಿದೆ. 2004 ರಲ್ಲಿ ಸಂತ ದ್ವಿತೀಯ ಜಾನ್‍ಪಾಲ್‍ರವರು ಈ ಕ್ರಿಸ್‍ಮಸ್ ಟ್ರೀಯನ್ನು ನಿತ್ಯಜೀವ ಕೊಡುವ ‘ಕ್ರಿಸ್ತರ ಸಂಕೇತ’ ವಾಗಿದೆ ಎನ್ನುತ್ತಾರೆ.
ಸಾಂತಾಕ್ಲಾಸ್ : ಕ್ರಿಸ್‍ಮಸ್ ಹಬ್ಬದ ಮತ್ತೊಬ್ಬ ಆಕರ್ಷಿತ ವ್ಯಕ್ತಿಯೆಂದರೆ ‘ ಕ್ರಿಸ್ಮಸ್ ಪಪ್ಪಾ’ ಎಂದೇ ಪ್ರಖ್ಯಾತರಾಗಿರುವ ಸಾಂತಾಕ್ಲಾಸ್, 4ನೇ ಶತಮಾನದಲ್ಲಿ ಮೈರಾ ಎಂಬಲ್ಲಿ ಧರ್ಮಾಧ್ಯಕ್ಷರಾಗಿದ್ದ ಸಂತ ನಿಕೋಲಸರೇ ಈ ಸಾಂತಾಕ್ಲಾಸ್. ಭಕ್ತಿ-ಪ್ರಾರ್ಥನೆಗಳಲ್ಲಿ ಹೆಸರುವಾಸಿಯಾಗಿದ್ದ ಸಂತರು ಅಷ್ಟೇ ಉದಾರ ಮನಸ್ಸಿನವರು. ಬಡವರು, ದೀನ-ದಲಿತರ ಬಗ್ಗೆ ಅಪಾರ ಅನುಕಂಪ, ಕರುಣೆ ಹೊಂದಿದ್ದ ಸಂತ ನಿಕೋಲಸರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಧರ್ಮಾಧ್ಯಕ್ಷರಾಗಿದ್ದರೂ ಕೂಡ ಶ್ರೀಸಾಮಾನ್ಯರಂತೆ ದೀನತೆಯ ಜೀವನ ನಡೆಸಿದ ಇವರು ಕ್ರಿಸ್ತಜಯಂತಿಯ ಹಿಂದಿನ ದಿನ ಸಾಂತಾಕ್ಲಾಸ್ ಎಂಬ ಕಲ್ಪಿತ ಮುದುಕನ ವೇಷ ಧರಿಸಿ ಬಡವರ ಮನೆÀಗಳನ್ನು ಸಂಧಿಸಿ ಮಕ್ಕಳ ಬಳಿ ಭೇಟಿ ನೀಡಿ ಅವರಿಗೆ ಕ್ರಿಸ್‍ಮಸ್ ಹಬ್ಬದ ಉಡುಗೊರೆಗಳನ್ನು ನೀಡುತ್ತಾ, ಹಾಡುತ್ತಾ ಕುಣಿಯುತ್ತಾ ನೊಂದವರನ್ನು ಕ್ರಿಸ್ಮಸ್ ಹಬ್ಬದ ಸಂತೋಷದಲ್ಲಿ ಭಾಗಿಯಾಗಿಸುತ್ತಿದ್ದರು. ಇವರು ಉದಾರತೆ-ದಾನ ಧರ್ಮ ಹಾಗೂ ಒಳ್ಳೆಯತನಕ್ಕೆ ಹೆಸರುವಾಸಿಯಾಗಿದ್ದಾರೆ. ಇವರ ಸಮಾಧಿ ಇಂದಿಗೂ ಕೂಡ ಇಟಲಿಯಲ್ಲಿದ್ದು ಈಗಲೂ ಅನೇಕ ಜನರನ್ನು ತನ್ನೆಡೆಗೆ ಸೆಳೆಯುವ ಪುಣ್ಯಕ್ಷೇತ್ರವಾಗಿದೆ. ಯೇಸುಕ್ರಿಸ್ತರು ಮಾನವನ ರಕ್ಷಣೆಗೆ ದೇವರು ನೀಡಿದ ಕೊಡುಗೆಯಾಗಿದ್ದಾರೆ. ಇಂತಹ ಸುದಿನದಂದು ಕ್ರೈಸ್ತರು ಸಾಂತಾಕ್ಲಾಸ್ ವೇಷ ಧರಿಸಿ ಕ್ರಿಸ್ತಜಯಂತಿಯ ಸಂದೇಶವನ್ನು ಸಾರುತ್ತಾ ಉಡುಗೊರೆಗಳನ್ನು ನೀಡುವುದು ಪದ್ಧತಿಯಾಗಿ ಬಂದಿದೆ.
ಕ್ರಿಸ್‍ಮಸ್ ಕಾರ್ಡುಗಳು: ಕ್ರಿಸ್ತನ ಜನನ ‘ಶುಭಸಮಾಚಾರ” ಈ ಸಮಾಚಾರವನ್ನುಎಲ್ಲೆಡೆಯು ಸಾರುತ್ತಾ, ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ಈ ಕ್ರಿಸ್‍ಮಸ್ ಕಾರ್ಡುಗಳ ಮೂಲಕ. 18ನೇ ಶತಮಾನ ದಿಂದೀಚೆಗೆ ಬಂದ ಈ ಪದ್ಧತಿ ಕ್ರಿಸ್ತನ ಜನನದ ಶುಭ ಸಮಾಚಾರ ಹಂಚುವಲ್ಲಿ ತನ್ನದೇ ಆದ ಪ್ರಾಧಾನ್ಯತೆ ಹೊಂದಿದೆ.
ಕೌಟುಂಬಿಕ ಭೋಜನ (ಈಚಿmiಟಥಿ ಒeಚಿಟ) ಕ್ರೈಸ್ತರು ದೇವರ ಒಂದೇ ಕುಟುಂಬದ ಸದಸ್ಯರು ಹಾಗೂ ಮಕ್ಕಳು. ಕುಟುಂಬವು ಒಟ್ಟಾಗಿ ಸೇರಿ ಊಟ ಮಾಡುವುದು ಹಳೆ ಒಡಂಬಡಿಕೆಯಿಂದಲೂ ಬಂದಂಥಹ ಸಂಪ್ರಾದಾಯವಾಗಿದೆ. ಕ್ರಿಸ್‍ಮಸ್ ಹಬ್ಬದ ಸಂಭ್ರಮ ಸಡಗರಕ್ಕೆ ಮೆರುಗು ನೀಡುವಂತಹ ಕ್ರಿಸ್‍ಮಸ್ ಹಬ್ಬದ ವಿಶೇಷ ತಿಂಡಿ ತಿನಿಸುಗಳನ್ನು ಮಾಡಿ ನೆರೆಹೊರೆಯವರೊಂದಿಗೆ ಹಂಚಿಕೊಂಡು ಒಟ್ಟಾಗಿ ಊಟವನ್ನು ಮಾಡುವುದು ಹಬ್ಬದ ವಿಶೇಷತೆಯಾಗಿದೆ.
ಸಂದೇಶ: 2019 ರ ಈ ಕ್ರಿಸ್ತಜಯಂತಿಯು ಶಾಂತಿ-ಪ್ರೀತಿ ಸಾರುವ ದಿನವಾಗಲಿ, ದ್ವೇಷ-ವೈಷಮ್ಯ, ಯುದ್ಧ-ಕಲಹ, ಭ್ರಷ್ಟಾಚಾರ- ಅನ್ಯಾಯದ ವಿರುದ್ಧ ಹೋರಾಡುವ ಕರುಣೆ-ನ್ಯಾಯ-ನೀತಿ, ಸೌಹಾರ್ದತೆ, ಭ್ರಾತೃತ್ವ ಸಾರುವ ಪ್ರೀತಿಯ ಹಬ್ಬವಾಗಲಿ. ಪ್ರತಿಯೊಬ್ಬ ಮನುಜನಲ್ಲಿ ಮಾನವೀಯತೆ ಯನ್ನು ಚಿಗುರಿಸುವ ನವಚೇತನದ ಸಂಭ್ರಮವಾಗಲಿ. ‘ನಾನು-ನಾನು’ ಎನ್ನುವ ನಾನತ್ವ ದೂರವಾಗಿ ಈ ಸಮಾಜದಲ್ಲಿ ‘ನಾವು’ ಎನ್ನುವ ಸಹೋದರತೆಗೆ ಸಾಕ್ಷಿಯಾಗಲಿ, ಸರ್ವರು ಯೇಸುಕ್ರಿಸ್ತರ ಮುಖಾಂತರ ರಕ್ಷಣೆಯನ್ನು ಪಡೆಯಲಿ ಎಂದು ಹಾರೈಸುತ್ತಾ, ಜಗದ ರಕ್ಷಕರಾದ ಪ್ರಭು ಯೇಸು ಕ್ರಿಸ್ತರು ನಾಡಿನ ಸಮಸ್ತ ಜನತೆಗೆ ಶಾಂತಿ-ಸಮಾಧಾನಗಳ ವಿಶೇಷ ವರಕರುಣಿಸಲೆಂದು ಪ್ರಾರ್ಥಿಸುತ್ತೇನೆ. ತಮಗೆಲ್ಲರಿಗೆ ಕ್ರಿಸ್ತಜಯಂತಿಯ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ.
-ಫಾ| ಅಲ್ಫೆರ್ಡ್‍ಜಾನ್ ಮೆಂಡೊನ್ಸ್
ಸಂತ ಮೈಕಲರ ದೇವಾಲಯದ ಧರ್ಮಗುರು