ದೇಶದ ಆರ್ಥಿಕ ಪರಿಸ್ಥಿತಿ ಗಂಭೀರ

ವಾಷಿಂಗ್ಟನ್, ಡಿ. 24: ಭಾರತೀಯ ಅರ್ಥವ್ಯವಸ್ಥೆ ಗಂಭೀರ ಪರಿಸ್ಥಿತಿಯಲ್ಲಿದ್ದು, ಇದನ್ನು ಸುಧಾರಿಸಲು ಸರ್ಕಾರ ತನ್ನ ಆರ್ಥಿಕ ನೀತಿಯಲ್ಲಿ ವ್ಯಾಪಕ ಬದಲಾವಣೆ ತರುವ ಅಗತ್ಯತೆ ಇದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ಭಾರತೀಯ ಆರ್ಥಿಕತೆ ಸಂಬಂಧಿಸಿದಂತೆ ಸೋಮವಾರ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ವರದಿಯಲ್ಲಿ ಭಾರತದ ಆರ್ಥಿಕತೆ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದೆ. ಇದನ್ನು ಸುಧಾರಿಸಲು ಸರ್ಕಾರ ತನ್ನ ಆರ್ಥಿಕ ನೀತಿಯಲ್ಲಿ ವ್ಯಾಪಕ ಬದಲಾವಣೆ ತರುವ ಅಗತ್ಯತೆ ಇದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಭಾರಿ ವಿಸ್ತರಣೆಯಾಗಿದ್ದು, ಇದು ಲಕ್ಷಾಂತರ ಜನರನ್ನು ಬಡತನದ ರೇಖೆಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದೆ.

ಡಾ. ವೀರೇಂದ್ರ ಹೆಗ್ಗಡೆ ವರ್ಷದ ವ್ಯಕ್ತಿ

ಬೆಂಗಳುರು, ಡಿ. 24: ಬೆಂಗಳೂರು ಪ್ರೆಸ್‍ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿಯಾದ “ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿ” ಪ್ರಶಸ್ತಿಗೆ ಈ ಬಾರಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪಾತ್ರರಾಗಿದ್ದಾರೆ. ತಾ. 31 ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದು ಪ್ರಶಸ್ತಿ ಪುರಸ್ಕೃತರಿಗೆ ಬಹುಮಾನ ವಿತರಿಸಲಿದ್ದಾರೆ. ಡಿಸಿಎಂಗಳಾದ ಡಾ. ಸಿ.ಎನ್. ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ 2019ರ ಸಾಲಿನ ಪ್ರಶಸ್ತಿಗಳಿಗಾಗಿ ಹಿರಿಯ ಪತ್ರಕರ್ತರಾದ ಎಂ. ಸಿದ್ದರಾಜು, ಕೆ. ಸುನೀಲ್ ಪ್ರಸಾದ್, ರವೀಂದರ್ ಜಿ. ಭಟ್, ಎಂ. ಅಬ್ದುಲ್ ಹಮೀದ್ ಸೇರಿ ಹಲವರನ್ನು ಆಯ್ಕೆ ಮಾಡಿರುವುದಾಗಿ ಪ್ರೆಸ್‍ಕ್ಲಬ್ ಪ್ರಕಟಣೆ ಹೇಳಿದೆ.

ಜ. 2 ರಂದು ಪ್ರಧಾನಿ ರಾಜ್ಯಕ್ಕೆ ಭೇಟಿ

ಬೆಂಗಳೂರು, ಡಿ. 24: ಪ್ರಧಾನಿ ನರೇಂದ್ರ ಮೋದಿ ಜ. 2 ರಂದು ತುಮಕೂರು ನಗರಕ್ಕೆ ಭೇಟಿ ನೀಡಲಿದ್ದಾರೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಿರುವ ರೈತ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ನಂತರ ಪ್ರಧಾನಿ ಮೋದಿ ಶ್ರೀ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ನಮನ ಸಲ್ಲಿಸುವ ಕಾರ್ಯಕ್ರಮವಿದೆ. ಜನವರಿ 3 ರಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಭಾರತೀಯ ಕೃಷಿ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಂತರ ಜಿಗಣಿಯಲ್ಲಿರುವ ಯೋಗ ವಿಶ್ವಾವಿದ್ಯಾಲಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ 3 ರಂದು ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಹಿನ್ನೆಲೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎರಡು ದಿನಗಳ ಹಿಂದೆ ತುಮಕೂರಿಗೆ ತೆರಳಿ ಪ್ರಧಾನಿ ಕಾರ್ಯಕ್ರಮ ನಡೆಯುವ ಸ್ಥಳಗಳ ಪರಿಶೀಲನೆ ನಡೆಸಿದರು.

ಇಂದಿನಿಂದ ಬಿಜೆಪಿ ಜಾಗೃತಿ ಅಭಿಯಾನ

ಬೆಂಗಳೂರು, ಡಿ. 24: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ತಾ. 25 ರಿಂದ ಜ. 15 ರವರೆಗೆ ಬಿಜೆಪಿ ವತಿಯಿಂದ ವ್ಯಾಪಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ರಾಜ್ಯದ 58,000 ಬೂತ್ ವ್ಯಾಪ್ತಿಗಳಲ್ಲಿ ಪ್ರತಿ ಬೂತ್‍ಗೆ 50 ರಿಂದ 60 ಮನೆಗಳನ್ನು ಸಂಪರ್ಕಿಸಿ ಕಾಯ್ದೆ ಕುರಿತು ಸ್ಪಷ್ಟವಾಗಿ ತಿಳಿಸಲಾಗುವುದು. ಅಲ್ಲದೆ, ಕಾಂಗ್ರೆಸ್ ಮತ್ತು ಸೇರಿದಂತೆ ಕೆಲ ಪಕ್ಷಗಳ ಡೋಂಗಿ ಜಾತ್ಯತೀಯತೆ, ದೇಶದ್ರೋಹತನದ ಬಗ್ಗೆ ಹೇಳಲಾಗುವುದು.