ದೇವಾಲಯಗಳಲ್ಲಿ ಪೂಜೆ ಸ್ಥಗಿತ
ಮಡಿಕೇರಿ, ಡಿ. 25: ಅಪರೂಪಕ್ಕೆ ಸಂಭವಿಸಲಿರುವ ‘ಕಂಕಣ’ ಸೂರ್ಯ ಗ್ರಹಣವು ತಾ. 26 ರಂದು (ಇಂದು) ಬೆಳಿಗ್ಗೆ 8.05 ಗಂಟೆಯಿಂದ 11.05ರ ತನಕ ಗೋಚರಿಸಲಿದೆ. ಈ ಗ್ರಹಣ ಕಾಲದಲ್ಲಿ ದೇವಾಲಯಗಳಲ್ಲಿ ಪೂಜಾ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿ ಲಭಿಸಿದೆ.
ಕೊಡಗಿನಲ್ಲಿ ಮುಖ್ಯವಾಗಿ ತಲಕಾವೇರಿ, ಭಾಗಮಂಡಲ, ಪಾಡಿ ಇಗ್ಗುತಪ್ಪ, ಜಿಲ್ಲಾ ಕೇಂದ್ರದಲ್ಲಿರುವ ಓಂಕಾರೇಶ್ವರ ದೇಗುಲ ಸೇರಿದಂತೆ ಬಹುತೇಕ ಕಡೆಗಳಲ್ಲಿ ಗ್ರಹಣ ಕಾಲದಲ್ಲಿ ದೇಗುಲಗಳು ಮುಚ್ಚಲ್ಪಡಲಿವೆ.
ಈ ಸಂಬಂಧ ಇಂದು ರಾತ್ರಿ ನಡೆಯಲಿರುವ ಮಹಾಪೂಜೆಯನ್ನು ಮುಸ್ಸಂಜೆಯ ಎಡೆಯಲ್ಲಿ ನೆರವೇರಿಸಿ, ದೇವಾಲಯ ಬಾಗಿಲು ಮುಚ್ಚಲ್ಪಡಲಿವೆ. ಪ್ರಮುಖ ದೇವಾಲಯಗಳಲ್ಲಿ ತಾ. 26 ರಂದು ಉಷಾ ಕಾಲದ ಪೂಜೆ ಬಳಿಕ ದೇಗುಲ ಮುಚ್ಚಲ್ಪಡಲಿದ್ದು, ಶ್ರೀ ಓಂಕಾರೇಶ್ವರ ಹಾಗೂ ಇತರೆಡೆ ತಾ. 26 ರಂದು ಗ್ರಹಣ ಬಳಿಕ ಶುದ್ಧಿ ಕಾರ್ಯದೊಂದಿಗೆ ಸಾಂಕೇತಿಕ ಪೂಜೆ ನಡೆಯಲಿದೆ. ಈ ವೇಳೆ ಭಕ್ತರಿಗೆ ಪ್ರವೇಶವಿರದು.
ತಾ. 26ರ ಸಂಜೆ ಬಳಿಕ ಪೂಜೆ ನಡೆಯಲಿದ್ದು, ಭಕ್ತರಿಗೆ ಯಾವುದೇ ಸೇವೆ ಇರುವುದಿಲ್ಲ ಎಂದು ಸನ್ನಿಧಿ ಅರ್ಚಕರು ಖಚಿತಪಡಿಸಿದ್ದಾರೆ. ತಾ. 27 ರಂದು ಶ್ರೀ ಓಂಕಾರೇಶ್ವರ ಹಾಗೂ ಇತರೆಡೆಗಳಲ್ಲಿ ಗ್ರಹಣ ಶಾಂತಿ ಹೋಮ, ಪೂಜಾದಿ ನೆರವೇರಲಿರುವುದಾಗಿ ಮಾಹಿತಿ ಲಭಿಸಿದೆ.
ಜಿಲ್ಲೆಯ ಖಾಸಗಿ ಹಾಗೂ ಗ್ರಾಮೀಣ ದೇವಾಲಯಗಳ ಸಹಿತ, ಧಾರ್ಮಿಕ ದತ್ತಿ ಇಲಾಖೆಗೆ ಒಳಪಡಲಿರುವ ಎಲ್ಲ ಸನ್ನಿಧಿಗಳಲ್ಲಿ ಗ್ರಹಣ ಕಾಲದಲ್ಲಿ ಪೂಜೆ ಇರುವುದಿಲ್ಲ ಎಂದು ಆಯ ಸನ್ನಿಧಿ ಪ್ರಮುಖರು ಖಚಿತಪಡಿಸಿದ್ದಾರೆ.