ಮಡಿಕೇರಿ, ಡಿ. 25: ಕೊಡಗಿನ ಪ್ರವಾಸಿ ಕೇಂದ್ರಗಳು ಹಾಗೂ ಹೆದ್ದಾರಿಗಳಲ್ಲಿ ತಲೆ ಎತ್ತಿರುವ ಸ್ಪೈಸಸ್ ಮಳಿಗೆಗಳಲ್ಲಿ ಹೋಂಮೇಡ್ ಚಾಕಲೇಟ್ ಹೆಸರಿನಲ್ಲಿ ನಕಲಿ ಚಾಕಲೇಟ್ ಮಾರಾಟ ಮಾಡಲಾ ಗುತ್ತಿದೆ ಎಂಬ ಆರೋಪವನ್ನು ಚಾಕಲೇಟ್ ವ್ಯಾಪಾರಿಗಳು ತಳ್ಳಿಹಾಕಿದ್ದು, ದೂರುದಾರರು ಇದನ್ನು ಸಾಬೀತುಪಡಿಸಿದಲ್ಲಿ ಜೈಲು ಶಿಕ್ಷೆ ಅನುಭವಿಸಲು ತಾವು ಸಿದ್ಧರಿರುವುದಾಗಿ ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವರ್ತಕರ ಪರವಾಗಿ ಮಾತನಾಡಿದ ಉದ್ಯಮಿ ಮೈಸಿ ಕತ್ತನ್ನಿರ ಅವರು, ಜಿಲ್ಲೆಯಲ್ಲಿ ಸುಮಾರು 2ಸಾವಿರಕ್ಕೂ ಅಧಿಕ ಮಂದಿ ತಮ್ಮ ಕುಟುಂಬ ನಿರ್ವಹಣೆಗಾಗಿ ಅಧಿಕೃತವಾಗಿ ಸರಕಾರದ ಎಲ್ಲಾ ರೀತಿಯ ಪರವಾನಗಿ ಪಡೆದು, ತೆರಿಗೆಗಳನ್ನು ಪಾವತಿಸಿ ಚಾಕಲೇಟ್ ಹಾಗೂ ಹೋಂಮೇಡ್ ವೈನ್ ಮುಂತಾದವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ನಕಲಿ ಚಾಕಲೇಟ್ ಮಾರಾಟ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಆರೋಪಿಸಿರುವುದು ವಿಷಾದನೀಯ ಎಂದು ಹೇಳಿದರು.

ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡುವುದ ರೊಂದಿಗೆ ಚಾಕಲೇಟ್‍ನಲ್ಲಿ ಸತ್ತ ಪ್ರಾಣಿಗಳ ಕೊಬ್ಬನ್ನು ಸೇರಿಸಲಾಗುತ್ತಿದೆ ಎಂದು ಸುಳ್ಳು ಆರೋಪ ಮಾಡಲಾ ಗಿದೆ ಎಂದು ಅವರುಗಳು ದೂರಿದ್ದಾರೆ.

ಜಿಲ್ಲೆಯ ಬಹುತೇಕ ಮಳಿಗೆಗಳಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರೀಕ್ಷಿ ಸಲ್ಪಟ್ಟ ಗುಣಮಟ್ಟದ ಚಾಕಲೇಟ್ ಗಳನ್ನು ಹಲವು ವರ್ಷದಿಂದ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಮಾರಾಟ ಮಾಡಿಕೊಂಡು ಬರಲಾಗು ತ್ತಿದ್ದು, ಕೆಲವು ಅಂಗಡಿಗಳಲ್ಲಿ ಗ್ರಾಹಕರು ಪ್ಯಾಕೇಟ್ ಬದಲು ಚಿಲ್ಲರೆಯಾಗಿ ಚಾಕಲೇಟ್‍ಗಳನ್ನು ಖರೀದಿಸುವುದ ರಿಂದ ಅಂತಹ ಮಳಿಗೆಗಳವರು ಪ್ಯಾಕೇಟ್‍ನ್ನು ಒಡೆದು ಅದರಲ್ಲಿರುವ ಚಾಕಲೇಟ್‍ಗಳನ್ನು ಸಣ್ಣ ಕಂಟೈನರ್ ಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ದೂರುದಾರರು ನಕಲಿ ಚಾಕಲೇಟ್ ಎಂದು ಬಿಂಬಿಸಿದ್ದಾರೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ವರ್ತಕರಾದ ಧನರಾಜ್, ಕೆ.ಸಿ.ಹರೀಶ್, ಹೆಚ್.ಎಸ್. ಪವನ್, ಎಂ.ಜೆ. ಇರ್ಫಾನ್ ಹಾಗೂ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ವ್ಯವಸ್ಥಾಪಕ ಹಕೀಂ ಉಪಸ್ಥಿತರಿದ್ದರು.