ಕುಶಾಲನಗರ, ಡಿ. 24: ಅಖಿಲ ಭಾರತ ವೀರಶೈವ ಮಹಾಸಭಾ ಆಶ್ರಯದಲ್ಲಿ ತಾ. 25 ರಂದು (ಇಂದು) ಕುಶಾಲನಗರದಲ್ಲಿ ಕ್ರೀಡಾ ಮತ್ತು ಪ್ರತಿಭಾ ಪುರಸ್ಕಾರ-2019 ಗೌರವ ಸಮರ್ಪಣೆ ಮತ್ತು ಧಾರ್ಮಿಕ ಸಭೆ ಆಯೋಜಿಸಲಾಗಿದೆ. ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮೊದಲನೇ ಅಧಿವೇಶನ ಬೆಳಗ್ಗೆ 10.30 ಕ್ಕೆ ಜರುಗಲಿದ್ದು, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮತ್ತು ವಿವಿಧ ಮಠಾಧೀಶರುಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಬಿ ಖಂಡ್ರೆ ನೆರವೇರಿಸಲಿದ್ದಾರೆ. ಜಿಲ್ಲಾ ಮಹಾಸಭಾದ ಅಧ್ಯಕ್ಷರಾದ ಎಚ್.ವಿ.ಶಿವಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಮಾಜಿ ಸಭಾಪತಿ ಬಸವರಾಜು ಹೊರಟ್ಟಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವರು. ಎರಡನೇ ಅಧಿವೇಶನ ಮಧ್ಯಾಹ್ನ 2.30 ಕ್ಕೆ ನಡೆಯಲಿದ್ದು; ಕ್ರೀಡಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ತಿಳಿಸಿದ್ದಾರೆ.