ಕಣಿವೆ, ಡಿ. 22: ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಗಳಲ್ಲಿ ಒಂದಾದ ಹಾರಂಗಿ ಜಲಾಶಯವನ್ನು ಕಟ್ಟಿ ಇಲ್ಲಿಗೆ ಸರಿ ಸುಮಾರು ನಾಲ್ಕು ದಶಕಗಳು ಸಂದಿವೆ. ಆದರೆ ಈ ಜಲಾಶಯವನ್ನು ಕಟ್ಟಲು ದೂರದ ತಮಿಳುನಾಡು ರಾಜ್ಯದಿಂದ ಅಂದು ಬಂದು ನೆಲೆಸಿದ್ದ ಕುಟುಂಬಗಳಿಗೆ ಇದೂವರೆಗೂ ಸರ್ಕಾರ ಸೂಕ್ತ ಸವಲತ್ತುಗಳನ್ನು ಒದಗಿಸಿಲ್ಲ ಎಂಬುದು ಹಾರಂಗಿ ಜಲಾಶಯದ ಮಗ್ಗುಲಲ್ಲಿ ನೆಲೆಸಿರುವ ನಿವಾಸಿಗಳ ರೋದನವಾಗಿದೆ. ಅಂದಿನ ಮುಖ್ಯಮಂತ್ರಿಯಾಗಿದ್ದ ದಿ.ವೀರೇಂದ್ರ ಪಾಟೀಲ್ ಅವರಿಂದ 1969 ರಲ್ಲಿ ಶಂಕುಸ್ಥಾಪನೆಗೊಂಡ ಹಾರಂಗಿ ಜಲಾಶಯದ ಕಾಮಗಾರಿಗೆಂದು ಬಂದಿದ್ದ ಮೂವತ್ತು ಕುಟುಂಬಗಳು ಅಂದಿನಿಂದ ಇಂದಿನವರೆಗೂ ಇಲ್ಲಿಯೇ ನೆಲೆಸಿವೆ. ಅಂದರೆ ಒಂದು ತಲೆಮಾರು ಕಳೆದು ಎರಡನೇ ತಲೆಮಾರಿನ ಜನರು ಇಲ್ಲಿ ಈಗ ನೆಲೆಸಿದ್ದಾರೆ. ಆದರೆ ಅಂದಿನಿಂದ ಇಂದಿನವರೆಗೂ ಆಳ್ವಿಕೆ ನಡೆಸಿದ ಯಾವುದೇ ಸರ್ಕಾರಗಳಿಗೂ ಸೌಲಭ್ಯ ಕಲ್ಪಿಸಲು ಏಕೆ ಸಾಧ್ಯವಾಗಿಲ್ಲ ಎಂಬ ಕೊರಗು ಇಲ್ಲಿನ ಈಗಿನ ಜನರದ್ದು. ಜಲಾಶಯ ಕಾಮಗಾರಿ ಮುಗಿದೊಡನೆ ಇಲ್ಲಿಂದ ನಮ್ಮನ್ನು ಒಕ್ಕಲೆಬ್ಬಿಸಿದ್ದರೆ ಅಂದು ನಮ್ಮ ಅಪ್ಪ ಅಮ್ಮ ಎಲ್ಲೋ (ಮೊದಲ ಪುಟದಿಂದ) ಹೇಗೋ ಬದುಕು ಕಟ್ಟಿಕೊಳ್ಳುತ್ತಿದ್ದರು. ಆದರೆ, ಅಂದು ಇದ್ದ ನೀರಾವರಿ ಇಲಾಖೆಯ ಅಧಿಕಾರಿಗಳ ಮೃದುಧೋರಣೆ ಇಂದು ನಮ್ಮನ್ನು ಇಲ್ಲಿಯತನಕವೂ ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿದೆ.
ನಾವು ಇಲ್ಲಿಂದ ಬೇರೆಡೆಗೆ ಹೋಗೋ ಹಾಗೆಯೂ ಇಲ್ಲ. ಇಲ್ಲಿಯೂ ಇರುವ ಹಾಗಿಲ್ಲ. ನಮ್ಮ ಅತಂತ್ರದ ಬದುಕಿನ ಜೊತೆ ಈ ರಾಜಕಾರಣಿಗಳು ಅಂದಿನಿಂದಲೂ ಆಟ ಆಡಿಕೊಂಡೇ ಬರ್ತಾ ಇದ್ದಾರಲ್ಲಾ. ನಾವು ಏನು ಮಾಡೋದು ಸ್ವಾಮಿ ಎಂದು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ತಮ್ಮ ನೋವುಗಳನ್ನು ಇಲ್ಲಿನ ನಿವಾಸಿ ಗಳಾದ ಮಂಜುನಾಥ, ರಮೇಶ, ಗಣೇಶ, ಸುರೇಶ, ಶ್ರೀನಿವಾಸ ಮೊದಲಾದವರು ಹೊರಹಾಕಿದರು. ನಮಗೆ ಸ್ಥಳೀಯ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಯಿಂದಲೂ ಪ್ರಯೋಜನ ವಾಗ್ತಿಲ್ಲ. ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಅಂದರೆ ಏನು ಎಂಬುದೇ ಗೊತ್ತಿಲ್ಲ. ಶಾಸಕರಾದ ಅಪ್ಪಚ್ಚುರಂಜನ್ ಅವರೂ ಕೂಡ ನಮ್ಮ ಗೋಳು ಕೇಳುತ್ತಿಲ್ಲ. ನಮ್ಮಿಂದ ಚುನಾಯಿತರಾಗಿ ಅಧಿಕಾರ ಚಲಾಯಿಸಲು ಇವರಿಗೆಲ್ಲಾ ನಮ್ಮ ವೋಟುಗಳು ಬೇಕು. ಆದರೆ ನಮ್ಮ ನೋವು, ದುಗುಡ, ಸಂಕಟ, ಸಂಕಷ್ಟಗಳು ಮಾತ್ರ ಬೇಡ. ಜಲಾಶಯವನ್ನು ಕಟ್ಟುವ ಸಂದರ್ಭದಲ್ಲಿ ನಮ್ಮ ಅಪ್ಪ ಅಮ್ಮಂದಿರು ಕಟ್ಟಿಕೊಂಡಿದ್ದ ಸಣ್ಣ ಪುಟ್ಟ ಬಿದ್ದು ಹೋಗುವ ಗುಡಿಸಲ ಮಾದರಿಯ ಮನೆಗಳಲ್ಲಿ ನಾವಿದ್ದೇವೆ. ಇದೂವರೆಗೂ ಪಂಚಾಯತಿ ಯಾಗಲೀ ಶಾಸಕರಾಗಲೀ ಸರ್ಕಾರದಿಂದ ಬಂದ ಒಂದೇ ಒಂದು ಮನೆಯನ್ನು ಕಟ್ಟಿಸಲಿಲ್ಲ. ಶೌಚಾಲಯವೂ ಇಲ್ಲ. ನಲವತ್ತು ವರ್ಷಗಳ ಹಿಂದೆ ಕಲ್ಲುಗಳನ್ನು ಹರಡಿ ಮಾಡಿದ್ದ ಕಿತ್ತು ನಿಂತ ರಸ್ತೆಯಲ್ಲಿಯೇ ನಾವು ಬದುಕು ನಡೆಸ್ತಾ ಇದ್ದೇವೆ... ಇಲ್ಲಿ ಸುತ್ತಲೂ ಕಾಡು ಇರುವ ಕಾರಣ ಮತ್ತು ನೀರಾವರಿ ಇಲಾಖೆ ನಿರ್ಮಿಸಿರುವ ಕೃತಕ ಕಾಡಿನಿಂದಾಗಿ ಕಾಡಾನೆಗಳು ಮುಂಜಾನೆ ಹಾಗೂ ಮುಸ್ಸಂಜೆ ಆದೊಡನೆ ಇಲ್ಲಿ ಬಂದು ಅಪಾಯ ಸೃಷ್ಟಿಸುತ್ತಿವೆ. ನಾವು ಮನುಷ್ಯರು ಅಲ್ಲವಾ. ನಮಗೂ ಮಕ್ಕಳಿವೆಯಲ್ಲಾ.. ನಮಗೂ ಒಂದು ಬದುಕು ಅಂತಾ ಇದೆಯಲ್ಲಾ ಏನು ಮಾಡೋದು ಹೇಳಿ ಅನ್ತಾರೆ ಇಲ್ಲಿನ ಮಹಿಳಾ ನಿವಾಸಿ ಗಳಾದ ಸುಶೀಲ, ಲತಾ, ನರಸಮ್ಮ, ಸಾವಿತ್ರಿ, ತಂಗಮ್ಮ ಮೊದಲಾದವರು ನಮಗೆ ಸ್ವಂತ ಮನೆಗಳಿಲ್ಲದೇ ಇರುವ ಮನೆಗಳಿಗೆ ಹಕ್ಕುಪತ್ರಗಳಿಲ್ಲದೇ ಸರ್ಕಾರದ ಯಾವ ಸವಲತ್ತುಗಳು ಕೂಡ ದೊರಕುತ್ತಿಲ್ಲ. ಬ್ಯಾಂಕುಗಳ ಸಾಲ ಯೋಜನೆಗಳು ನಮ್ಮ ಪಾಲಿಗಿಲ್ಲ. ಮಕ್ಕಳನ್ನು ಓದಿಸಲು, ಮನೆಗಳನ್ನು ಕಟ್ಟಲು, ಸಣ್ಣ ಪುಟ್ಟ ಗುಡಿಕೈಗಾರಿಕೆ ನಡೆಸಲು ಯಾವುದಕ್ಕೂ ಹಣಕಾಸಿನ ಸೌಲಭ್ಯ ಸಿಗುತ್ತಿಲ್ಲ. ಕೂಲಿ ಮಾಡಿಕೊಂಡೇ ಇನ್ನೂ ಎಷ್ಟು ತಲೆಮಾರು ಇರಬೇಕು ಹೇಳಿ ಎನ್ನುತ್ತಾರೆ ಇಲ್ಲಿನ ಜನ.
ನಮ್ಮ ಜನವಸತಿ ಪ್ರದೇಶದ ಕಣ್ಣೆದುರೇ ಇರುವ ನೀರಾವರಿ ನಿಗಮದ ಚಂದವಿರುವ ರಸ್ತೆಗಳಿಗೆ ಡಾಂಬರ್ ಹಾಕ್ತಾರೆ. ಯಾರೂ ಕೂಡ ವಾಸವೇ ಇಲ್ಲದ ಮನೆಗಳನ್ನು ಲಕ್ಷ ಲಕ್ಷ ರೂ ವ್ಯಯಿಸಿ ರಿಪೇರಿ ಮಾಡ್ತಾರೆ ಇದೇನಿದು ನಮ್ಮ ವನವಾಸ ಎಂದೆಲ್ಲಾ ಅಸಮಾಧಾನ ಹೊರಹಾಕ್ತಾರೆ ಈ ಜನ. ಇನ್ನಾದರೂ ಶಾಸಕ ಅಪ್ಪಚ್ಚು ರಂಜನ್ ಅವರು ನೀರಾವರಿ ಹಾಗು ಗ್ರಾಮ ಪಂಚಾಯತಿ ಅಧಿಕಾರಿಗಳ ಸಭೆ ನಡೆಸಿ ಸಾಧಕ ಬಾಧಕ ಅರಿತು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಈ ನತದೃಷ್ಟ ಜನರಿಗೆ ಸೌಲಭ್ಯ ಒದಗಿಸಲು ಮುಂದಾಗಲಿ. ಇಲ್ಲವೇ ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಬೇರೆ ಕಡೆ ಶಾಶ್ವತ ನೆಲೆ ಕಲ್ಪಿಸಲಿ ಎಂದು ಈ ಮಂದಿ ಒತ್ತಾಯಿಸಿದ್ದಾರೆ.-ಕೆ.ಎಸ್. ಮೂರ್ತಿ