ಸೋಮವಾರಪೇಟೆ,ಡಿ.23: ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಸವನಕೊಪ್ಪ ಗ್ರಾಮದ ಮುಖ್ಯ ರಸ್ತೆಯ ಸೇತುವೆ ಅಪಾಯದ ಅಂಚಿನಲ್ಲಿದ್ದು, ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಶಿಥಿಲಾವಸ್ಥೆಗೆ ತಲುಪಿರುವ ಸೇತುವೆ ಬಲಿಗಾಗಿ ಕಾಯುತ್ತಿದೆ. ಬೀಟಿಕಟ್ಟೆ, ಕೋಟೆಯೂರು, ಬಸವನಕೊಪ್ಪ, ಹಣಸೆ, ಈಚಲು ಬೀಡು ಮೂಲಕ ಶನಿವಾರಸಂತೆಗೆ ತೆರಳುವ ರಸ್ತೆಯಲ್ಲಿ ಈ ಸೇತುವೆಯಿದ್ದು ರಾತ್ರಿ ಸಮಯದಲ್ಲಿ ಚಾಲಕರು ಈ ರಸ್ತೆಯಲ್ಲಿ ವೇಗವಾಗಿ ಚಲಿಸಿ, ಸೇತುವೆ ಸನಿಹದ ಗುಂಡಿಗೆ ಬಿದ್ದರೆ ಅನಾಹುತ ಸಂಭವಿಸುವದರಲ್ಲಿ ಅನುಮಾನವಿಲ್ಲ. ಕುಸಿಯುವ ಹಂತದಲ್ಲಿರುವ ಈ ಸೇತುವೆಯ ರಸ್ತೆಯೂ ಅತ್ಯಂತ ಕಿರಿದಾಗಿದ್ದು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈ ಸೇತುವೆಯನ್ನು ನಾಲ್ಕು ದಶಕಗಳ ಹಿಂದೆಯೇ ನಿರ್ಮಿಸಲಾಗಿದ್ದು, ಪ್ರಸ್ತುತ ತೀರಾ ಶಿಥಿಲಾವಸ್ಥೆಗೆ ತಲುಪಿದೆ. ಮರಳು ತುಂಬಿದ ಲಾರಿಗಳು ಹಾಗೂ ಮರಗಳನ್ನು ಸಾಗಿಸುವ ಭಾರೀ ವಾಹನಗಳು, ಕಾರ್ಮಿಕರನ್ನು ಸಾಗಾಟಗೊಳಿಸುವ ಹತ್ತಾರು ವಾಹನಗಳು ದಿನಂಪ್ರತಿ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಂಬಂಧಿಸಿದ ಇಲಾಖೆಯವರು ಮಾತ್ರ ಸೇತುವೆ ದುರಸ್ತಿಗೆ ಮನಸ್ಸು ಮಾಡಿಲ್ಲ.
ಮಳೆಗಾಲದಲ್ಲಿ ನದಿ ನೀರು ರಭಸದಿಂದ ಹರಿಯುವದರಿಂದ ಒಂದುವೇಳೆ ಸೇತುವೆ ಕುಸಿದರೆ ಅನಾಹುತವಾಗುವದರಲ್ಲಿ ಸಂಶಯವಿಲ್ಲ ಎಂಬದು ಸ್ಥಳೀಯರ ಆತಂಕ. ಬೀಟಿಕಟ್ಟೆಯಿಂದ ಬಸವನಕೊಪ್ಪ, ಮಾರ್ಗವಾಗಿ ಶನಿವಾರಸಂತೆಗೆ ಹತ್ತಿರವಾಗುವ ಹಿನ್ನೆಲೆ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ವಾಹನಗಳಲ್ಲಿ ತಾವು ಬೆಳೆದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳನ್ನು ಈ ರಸ್ತೆಯಲ್ಲೇ ಸಾಗಿಸುತ್ತಿದ್ದಾರೆ. ಈಗ ಸೇತುವೆ ಕುಸಿಯುವ ಹಂತದಲ್ಲಿರುವ ಪರಿಣಾಮ ಆತಂಕಪಡುವಂತಾಗಿದೆ. ಬಸವನಕೊಪ್ಪ ಸೇತುವೆ ದುರಸ್ತಿ ಮಾಡುವಂತೆ ಕಳೆದ ಕೆಲ ದಶಕಗಳಿಂದ ಲೋಕೋಪಯೋಗಿ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ.(ಮೊದಲ ಪುಟದಿಂದ) ಇನ್ನಾದರೂ ಗ್ರಾಮೀಣ ಭಾಗಗಳ ಜನರ ಸಮಸ್ಯೆಯನ್ನು ಬಗೆಹರಿಸುವತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿದರೆ ಒಳಿತು ಎಂದು ಗ್ರಾಮಸ್ಥ ನವೀನ್ ಆಗ್ರಹಿಸಿದ್ದಾರೆ.
ಈ ಸೇತುವೆಯಲ್ಲಿ ಶಾಲಾ ಮಕ್ಕಳು ತಿರುಗಾಡಲು ಹೆದರುತ್ತಿದ್ದಾರೆ. ಕಳೆದ ವರ್ಷ ಬಿದ್ದ ಭಾರೀ ಮಳೆಯಿಂದ ಸೇತುವೆ ಪಕ್ಕದ ಮಣ್ಣು ಕುಸಿಯುತ್ತಿದೆ. ವಾಹನ ಚಾಲಕರು ಭಯಪಡುವಂತಾಗಿದೆ ಎಂದು ಗ್ರಾಮಸ್ಥ ಕಾರ್ತಿಕ್ ಪತ್ರಿಕೆಯೊಂದಿಗೆ ದೂರಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖಾಧಿಕಾರಿಗಳು ಈ ಸೇತುವೆ ದುರಸ್ತಿಯತ್ತ ಗಮನಹರಿಸಬೇಕೆಂದು ಈ ರಸ್ತೆಯನ್ನೇ ಅವಲಂಬಿಸಿರುವ ಜನತೆ ಒತ್ತಾಯಿಸಿದ್ದಾರೆ.
ಕಳೆದ ಒಂದೂವರೆ ವರ್ಷಗಳ ಹಿಂದೆ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರನ್ನು ಗ್ರಾಮಸ್ಥರು ಈ ಬಗ್ಗೆ ಗಮನಸೆಳೆದಿದ್ದು, ಬೀಟಿಕಟ್ಟೆ, ಶುಂಠಿ, ಕೊರ್ಲಳ್ಳಿ,ಬಸವನಕೊಪ್ಪ ರಸ್ತೆ ಮತ್ತು ಬೀಟಿಕಟ್ಟೆ-ಬಸವನಕೊಪ್ಪ ರಸ್ತೆಯನ್ನು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡಿಸಿ ಸೇತುವೆ ಸೇರಿದಂತೆ ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವದು ಎಂದು ಭರವಸೆ ನೀಡಿದ್ದರು.
ಕಳೆದ 2006ರಲ್ಲಿ ಮಾಜೀ ಸಚಿವ ಬಿ.ಎ. ಜೀವಿಜಯ ಅವರು ಶಾಸಕರಾಗಿದ್ದ ಸಂದರ್ಭ ರಸ್ತೆಯನ್ನು ದುರಸ್ತಿಗೊಳಿಸಿದ್ದನ್ನು ಹೊರತುಪಡಿಸಿದರೆ ನಂತರ ಯಾವದೇ ಕಾಮಗಾರಿ ನಡೆದಿಲ್ಲ. ಅಸಲಿಗೆ ಈ ರಸ್ತೆ ಮತ್ತು ಸೇತುವೆ ಜಿ.ಪಂ. ವ್ಯಾಪ್ತಿಗೆ ಒಳಪಡುತ್ತದೋ ಅಥವಾ ಲೋಕೋಪಯೋಗಿ ಇಲಾಖೆಗೋ ಎಂಬ ಬಗ್ಗೆಯೇ ಅಧಿಕಾರಿ ವರ್ಗದಲ್ಲಿ ಗೊಂದಲವಿದ್ದು, ಪರಿಣಾಮ ಈ ಭಾಗದ ಸಾವಿರಾರು ಮಂದಿ ತೊಂದರೆಗೆ ಸಿಲುಕುವಂತಾಗಿದೆ.
ಕಳೆದ 2017-18ರ ಕೊಡಗು ಪ್ಯಾಕೇಜ್ ಅಡಿಯಲ್ಲಿ ಸೇತುವೆ ನಿರ್ಮಾಣಕ್ಕೆ 50 ಲಕ್ಷ ಕಾಯ್ದಿರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಅನುದಾನ ಕಡಿಮೆಯಾದ ಕಾರಣ ಸೇತುವೆ ಕಾಮಗಾರಿಯನ್ನು ಕೈಬಿಡಲಾಗಿದೆ. ಇದೀಗ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, 1.25 ಕೋಟಿ ವೆಚ್ಚದಲ್ಲಿ 3.40 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖಾ ಅಭಿಯಂತರ ವೆಂಕಟೇಶ್ ನಾಯಕ್ ತಿಳಿಸಿದ್ದಾರೆ.
ಇದೀಗ ಬಸವನಕೊಪ್ಪ-ಕೊರ್ಲಳ್ಳಿ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ರೂ. 1.25 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಿದ್ದು, ಶಾಸಕ ಅಪ್ಪಚ್ಚು ರಂಜನ್ ಅವರು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಆದರೆ ಅತೀ ಅಗತ್ಯವಾಗಿ ಆಗಬೇಕಿದ್ದ ಈ ಸೇತುವೆಯ ಬಗ್ಗೆ ಯಾರೂ ಸಹ ಗಮನ ಹರಿಸುತ್ತಿಲ್ಲ ಎಂಬದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
-ವಿಜಯ್ ಹಾನಗಲ್