ಮಾನ್ಯರೆ, ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ 2019ನ್ನು ಸಂಸತ್ತು ಅಂಗೀಕರಿಸಿದ್ದು, ಇದಕ್ಕೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದು, ಇದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ವಿಚಾರವಾಗಿದೆ. ಈ ಕಾಯಿದೆಯಿಂದಾಗಿ ಈಶಾನ್ಯ ರಾಜ್ಯಗಳು ಹೊತ್ತಿ ಉರಿಯುತ್ತಿವೆ. ಜನಜೀವನ ಅಸ್ತವ್ಯಸ್ಥಗೊಂಡಿದೆ. ಪ್ರಜೆಗಳು ಆತಂಕಕ್ಕೆ ಒಳಗಾಗಿದ್ದಾರೆ. ವಿವಿಧತೆಯಲ್ಲಿ ಏಕತೆ ಎಂಬ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೇಂದ್ರ ಸರಕಾರ ಆಡಳಿತ ನಡೆಸುತ್ತಿರುವುದನ್ನು ಕೊಡಗು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಖಂಡಿಸುತ್ತದೆ.

ಅಂದಿನ ಪ್ರಧಾನಮಂತ್ರಿಯಾದ ದಿ. ಪಂಡಿತ್ ಜವಾಹರ್ ಲಾಲ್ ನೆಹರು ಅವರು 1955 ರಲ್ಲಿ ಭಾರತೀಯ ಪೌರತ್ವ ಕಾಯಿದೆಯನ್ನು ಜಾರಿಗೆ ತಂದ ಪ್ರಕಾರ ಭಾರತದ ಪ್ರಜೆಯಾಗಿರಲು ಭಾರತದಲ್ಲಿ ಜನಿಸಿದ್ದರೆ, ಪೋಷಕರು ಭಾರತದ ಪ್ರಜೆಗಳಾಗಿದ್ದರೆ, ಪೂರ್ವಜರು ಭಾರತೀಯರಾಗಿದ್ದರೆ, ಭಾರತೀಯ ಪ್ರಜೆಯನ್ನು ವಿವಾಹವಾಗಿದ್ದರೆ ಅಥವಾ 12 ವರ್ಷ ಭಾರತದಲ್ಲಿ ಕಾನೂನು ಬದ್ಧವಾಗಿ ನೆಲೆಸಿದ್ದರೆ ಪೌರತ್ವವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ನಂತರದಲ್ಲಿ 1986, 1992, 2003, 2005, 2015 ರಲ್ಲಿ 5 ಬಾರಿ ತಿದ್ದುಪಡಿಗಳಾಗಿದ್ದು, 3 ಬಾರಿ ಕಾಂಗ್ರೆಸ್ ಸರಕಾರ ಇದ್ದಾಗ 2 ಬಾರಿ ಬಿ.ಜೆ.ಪಿ. ಸರಕಾರ ಇದ್ದಾಗ ಈ ತಿದ್ದುಪಡಿಗಳು ಜಾರಿಗೆ ಬಂದಿದ್ದವು. ಆ ಸಂದರ್ಭದಲ್ಲಿ ಸಮಾನವಾಗಿ ಎಲ್ಲಾ ಧರ್ಮದವರಿಗೂ ಈ ನಿಯಮಗಳು ಅನ್ವಯಿಸುತ್ತಿದ್ದವು.

ಆದರೆ ಈಗ ಮೋದಿ, ಅಮಿತ್ ಶಾ ನೇತೃತ್ವದ ಕೇಂದ್ರ ಸರಕಾರ ಈ ದೇಶದ ಸಂವಿಧಾನಕ್ಕೆ, ಕಾನೂನಿಗೆ ವಿರುದ್ಧವಾಗಿ ಧರ್ಮದ ಮತ್ತು ಜಾತಿಯ ವರ್ಗೀಕರಣದ ಕಾಯಿದೆಗಳನ್ನು ಬಲವಂತವಾಗಿ ಹೇರುತ್ತಿರುವುದು ದೇಶದ ಭದ್ರತೆ ಮತ್ತು ಸಮಗ್ರತೆಗೆ ಆತಂಕಕಾರಿಯಾಗಿದೆ. ಈಗಿನ ಹೊಸ ನಿಯಮ ಮುಸ್ಲಿಮರು ಮತ್ತು ಮುಸ್ಲಿಮೇತರರು ಎಂದು ವರ್ಗೀಕರಿಸಲಾಗಿದೆ. ರಾಜಕೀಯದ ಭದ್ರತೆಗಾಗಿ, ಮತಬ್ಯಾಂಕ್ ಸೃಷ್ಟಿಗಾಗಿ, ಈ ರೀತಿಯ ನಿರ್ಧಾರಗಳನ್ನು ಜಾರಿಗೆ ತರಲು ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.

ಬಾಂಗ್ಲಾದೇಶ, ಅಘ್ಗಾನಿಸ್ತಾನ, ಪಾಕಿಸ್ತಾನ ಈ ದೇಶಗಳಿಂದ ಬಂದ ಅಕ್ರಮ ವಲಸಿಗರನ್ನು ಧರ್ಮದ ಆಧಾರದಲ್ಲಿ ಸಕ್ರಮಗೊಳಿಸುವುದು ದೇಶದಲ್ಲಿರತಕ್ಕಂತಹ ಸಕ್ರಮ ವಾಸಿಗಳನ್ನು ಧರ್ಮದ ಆಧಾರದಲ್ಲಿ ದಾಖಲೆಗಳಿಗೆ ಒತ್ತಾಯಿಸಿ, ಅಕ್ರಮಗೊಳಿಸಿ ಜೈಲಿಗಟ್ಟುವುದು ಎಷ್ಟರ ಮಟ್ಟಿಗೆ ಸರಿ.

ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಶ್ರೀಸಾಮಾನ್ಯ ಪರದಾಡುವಂತೆ ಆಗಿದೆ. ಆಂತರಿಕ ಭದ್ರತೆ ಕುಸಿದು ಅತ್ಯಾಚಾರಿಗಳು, ಕೊಲೆಗಡುಕರು, ಭ್ರಷ್ಟಾಚಾರಿಗಳು, ವಿಜೃಂಭಿಸುತ್ತಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದ ಹಾಗಾಗಿದೆ. ಇವುಗಳನ್ನು ಜನರ ದೃಷ್ಟಿಯಿಂದ ಮರೆಮಾಚಲು ಕೇಂದ್ರ ಸರಕಾರ ಇಂತಹ ಆತಂಕ ಮತ್ತು ಕಳವಳಕಾರಿ ತಿದ್ದುಪಡಿಗಳನ್ನು ಜಾರಿಗೆ ತರುತ್ತಿದೆ. ಇದರಿಂದ ಮಹಾತ್ಮ ಗಾಂಧಿಯವರ ರಾಮರಾಜ್ಯದ ಕನಸು ನುಚ್ಚುನೂರಾಗಲಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುವ ಆತಂಕವಿದೆ.

- ತೆನ್ನೀರಾ ಮೈನಾ, ಜಿಲ್ಲಾ ಸಂಯೋಜಕರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ, ಕೊಡಗು.