ಮಾನ್ಯರೆ, ಕಿಗ್ಗಾಲು ಗ್ರಾಮದಲ್ಲಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ಸುಮಾರು 5.35 ಕೋಟಿ ರೂಪಾಯಿಗಳನ್ನು ಕಿಗ್ಗಾಲು ಗ್ರಾಮಾಂತರ ರಸ್ತೆ ದುರಸ್ತಿಗಾಗಿ 2017ರಲ್ಲಿ ಮಂಜೂರು ಮಾಡಲಾಗಿದ್ದು, ಈ ರಸ್ತೆಯ ಒಟ್ಟು ಉದ್ದವು 5.6 ಕಿಲೋಮೀಟರ್ ಆಗಿರುತ್ತದೆ.

2017 ರಲ್ಲಿ ಈ ಯೋಜನೆಯು ಅನುಷ್ಠಾನಗೊಳ್ಳುವುದು ಎಂದಾಗ ಊರಿನವರು ಸಭೆ ಸೇರಿ, ಊರಿಗೆ ರಸ್ತೆಯ ಅಗತ್ಯವಿದೆಯೆಂದು ಭಾವಿಸಿ ರಸ್ತೆಯೊತ್ತಿನ ಜಾಗದ ಮಾಲೀಕರು ಸುಮಾರು ಐದರಿಂದ ಹತ್ತು ಸೆಂಟ್ಸ್ ಜಾಗವನ್ನು ರಸ್ತೆಯ ಅಗಲೀಕರಣಕ್ಕೆ ಬಿಟ್ಟುಕೊಟ್ಟು ಸಹಕರಿಸಿರುತ್ತಾರೆ.

ಆರಂಭದ ಹಂತದಲ್ಲಿ ಬಿರುಸಿನ ಕಾಮಗಾರಿಯು ಸಾಗಿದರೂ ಆನಂತರದ ದಿನಗಳಲ್ಲಿ ಕಾಮಗಾರಿಯ ವೇಗ ಕಡಿಮೆಯಾಗಿದೆ. ಸುಮಾರು 5.6 ಕಿಲೋಮೀಟರ್ ದೂರದ ರಸ್ತೆ ದುರಸ್ತಿಯನ್ನು ಎರಡೂವರೆ ವರ್ಷಗಳಾದರೂ ಇನ್ನೂ ಮುಗಿಸದಿರುವುದು ಗುತ್ತಿಗೆದಾರರ ಆಲಸ್ಯಕ್ಕೆ ಕನ್ನಡಿಯನ್ನು ಹಿಡಿದಂತಿದೆ.

ರಸ್ತೆಯನ್ನು ದುರಸ್ತಿ ಮಾಡಿದೊಡನೆಯೇ ಅಲ್ಲಲ್ಲಿ ಕಿತ್ತುಹೋಗಿ ನೀರಿನ ಹೊಂಡಗಳಾಗುತ್ತಿದ್ದು, ಗುತ್ತಿಗೆದಾರರನ್ನು ಕೇಳಿದರೆ, ಅಲ್ಲಿ ಒರತೆಯಿರುವುದರಿಂದ ಹೀಗಾಗಿದೆ ಎಂಬ ಬೇಜವಾಬ್ದಾರಿ ಮಾತುಗಳನ್ನಾಡುತ್ತಿದ್ದಾರೆ. ಮೂಲ ಗುತ್ತಿಗೆದಾರರು ಉತ್ತರ ಕರ್ನಾಟಕದವರಾಗಿದ್ದು ವಾಸ್ತವದಲ್ಲಿ ಕೆಲಸವನ್ನು ಮಾಡಿಸುವವರು ಸ್ಥಳೀಯ ಗುತ್ತಿಗೆದಾರರಾಗಿರುವುದು ಈ ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿದೆ.

ಸುಮಾರು ಆರು ತಿಂಗಳ ಹಿಂದೆ ಸ್ಥಳೀಯ ಶಾಸಕರನ್ನು ಊರಿನವರು ಕರೆಸಿ, ಸಮಸ್ಯೆಯ ತೀವ್ರತೆಯನ್ನು ವಿವರಿಸಿದಾದ, ಗುತ್ತಿಗೆದಾರರು ಹಳೆಯ ಡಾಂಬರು ರಸ್ತೆಯನ್ನು ಜಲ್ಲಿ ಸಮೇತ ಕಿತ್ತು ಹೊಸದಾಗಿ, ಆಳವಾಗಿ ಜಲ್ಲಿಕಲ್ಲುಗಳನ್ನು ಹಾಕಿ ರಸ್ತೆಯನ್ನು ನಿರ್ಮಿಸುವುದಾಗಿ ಭರವಸೆ ಕೊಟ್ಟಿರುತ್ತಾರೆ. ಆದರೆ, ಈಗ ರೋಡ್ ರೋಲರ್ ಅನ್ನು ತಂದು, ನಿರ್ಮಿಸಿದ ರಸ್ತೆಗೆ ತೇಪೆ ಹಾಕುವ ಹುನ್ನಾರದಲ್ಲಿದ್ದಾರೆ.

ಈ ಎಲ್ಲ ವಿಷಯಗಳನ್ನು ಆಳವಾಗಿ ಪರಿಶೀಲಿಸಿ ಕಿತ್ತುಹೋಗಿರುವ ರಸ್ತೆಯ ಜಲ್ಲಿಯನ್ನು ಪೂರ್ಣವಾಗಿ ಎಬ್ಬಿಸಿ ಹೊಸದಾಗಿ ತಾರು ಹಾಕಿಸಿ, ಒಂದು ಉತ್ತಮವಾದ ಗ್ರಾಮಾಂತರ ರಸ್ತೆಯನ್ನು ಕಿಗ್ಗಾಲು ಗ್ರಾಮಕ್ಕೆ ಮಾಡಿಕೊಡಬೇಕಾಗಿ ಮನವಿಯನ್ನು ಮಾಡುತ್ತಿದ್ದೇವೆ.

- ಕಿಗ್ಗಾಲು ಎಸ್. ಗಿರೀಶ್, ಕಿಗ್ಗಾಲು ಗ್ರಾಮ