ಮಾನ್ಯರೆ, ತಾ. 14.11.2019 ರಂದು ನಡೆದ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ರಾಜ್ಯದ ರೈತರ ಕೃಷಿ ಸಾಲ ಮನ್ನಾ ಹಾಗೂ ಯಶಸ್ವಿನಿ ರೈತರ ವಿಮಾ ಯೋಜನೆಯ ಪುನರ್ ಆರಂಭದ ಬಗ್ಗೆ ಆಶ್ವಾಸನೆಯನ್ನು ಕೊಟ್ಟಿರುವ ವಿಚಾರ ರೈತರು ಆಶಾಭಾವನೆಯಿಂದ ನೋಡುವಂತೆ ಮಾಡಿದೆ. ಕಳೆದ ಚುನಾವಣಾ ಸಂದರ್ಭವನ್ನು ನೆನಪಿಸಿಕೊಂಡಾಗ ಭಾ.ಜ.ಪ.ದ ರಾಜ್ಯಾಧ್ಯಕ್ಷರಾಗಿ ಕೊಟ್ಟ ಆಶ್ವಾಸನೆಗಳು ನೆನಪಾಗುತ್ತಿದೆ.

ಅಂದು ಚುನಾವಣಾ ಪ್ರಣಾಳಿಕೆಯಲ್ಲಿ ಭಾ.ಜ.ಪ. ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಗಳಾದ 24 ಗಂಟೆಗಳಲ್ಲಿ ರಾಜ್ಯದ ಎಲ್ಲಾ ರೈತರ ಕೃಷಿ ಸಾಲವನ್ನು ರೂ. 1 ಲಕ್ಷದವರೆಗೆ ಮನ್ನಾ ಮಾಡುತ್ತೇನೆಂದು ಭರವಸೆ ನೀಡಿರುವಿರಿ.

ನಂತರ ಚುನಾವಣೆ ನಡೆದು ಬಹುಮತದ ಸನಿಹ ಬಂದು 104 ಸ್ಥಾನಗಳಿಸಿ ಬಹುಮತಕ್ಕೆ ಕೇವಲ 8 ಸ್ಥಾನಗಳಿಂದ ವಂಚಿತರಾಗಿ, ನಂತರ ರಾಜ್ಯಪಾಲರ ಆಹ್ವಾನದಂತೆ ಸರಕಾರ ರಚಿಸಲು ಅವಕಾಶ ಪಡೆದು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕೊಟ್ಟ ಮಾತಿಗೆ ತಪ್ಪದ ನೀವು ರಾಜ್ಯದ ರೈತರ ರೂ. 1 ಲಕ್ಷದವರೆಗಿನ ಸಾಲ ಮನ್ನಾ ಆದೇಶವನ್ನು ಹೊರಡಿಸಿ ಮೆಚ್ಚುಗೆಗೆ ಪಾತ್ರರಾದಿರಿ.

ಕೂಡಲೇ ಸಹಕಾರ ಇಲಾಖೆಯ ಅಧಿಕಾರಿಗಳ ಮೂಲಕ ರಾಜ್ಯದ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರೈತರು ಪಡೆದ ಕೃಷಿ ಸಾಲದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರಿ, ಮುಂದೆ ರಾಜ್ಯ ಉಚ್ಚನ್ಯಾಯಾಲಯದ ಸೂಚನೆಯಂತೆ ಒಡನೆ ವಿಶ್ವಾಸಮತಯಾಚನೆಯ ಸಂದರ್ಭ ಬಂದ ಕಾರಣ ಬಹುಮತ ಸಾಬೀತು ಪಡಿಸಲಾಗದೆ ರಾಜೀನಾಮೆ ಕೊಡಬೇಕಾಗಿ ಬಂದದ್ದು ರಾಜ್ಯದ ರೈತರ ದುರ್ದೈವವೇ ಸರಿ.

ಮುಂದೆ ಬಂದ ಕುಮಾರಸ್ವಾಮಿ ಸರಕಾರ ರಾಜ್ಯರ ರೈತರಿಗೆ ಹಲವಾರು ನಿಬಂಧನೆಗಳನ್ನು ವಿಧಿಸಿ ರೂ. 1 ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವ ಘೋಷಣೆಯನ್ನು ಮಾಡಿ, ಎಲ್ಲಾ ರೈತರಿಗೆ ಮುಖ್ಯಮಂತ್ರಿಗಳು ವೈಯಕ್ತಿಕ ಪತ್ರವನ್ನು ಕೂಡ ಕಳುಹಿಸಿದ್ದರು. ಪ್ರಾ.ಕೃ.ಪ. ಸಹಕಾರ ಸಂಘಗಳು ತಮ್ಮ ರೈತ ಸದಸ್ಯರಿಗೆ ಸಾಲ ನೀಡುವಾಗ ಸರಕಾರ ವಿಧಿಸಿರುವ ಎಲ್ಲಾ ಕಾನೂನಾತ್ಮಕ ಷರತ್ತುಗಳನ್ನು ಒಪ್ಪಿ ಇದಕ್ಕೆ ಪೂರಕವಾದ ಎಲ್ಲಾ ದಾಖಲಾತಿಗಳನ್ನು ರೈತರಿಂದ ಪಡೆದುಕೊಂಡು ಉಪನೋಂದಣಾಧಿ ಕಾರಿಗಳಲ್ಲಿ ಫಾರಂ. ನಂ. 3 ರಂತೆ ಅವರ ಜಮೀನನ್ನು ಅಡಮಾನ ಮಾಡಿಸಿಕೊಂಡು ಸಾಲ ಮಂಜೂರು ಮಾಡಿರುವುದಾಗಿದೆ.

ಇದೀಗ ದಾಖಲಾತಿಗಳಲ್ಲಿನ ಸಣ್ಣಪುಟ್ಟ ನ್ಯೂನತೆಗಳನ್ನು ಮುಂದಿಟ್ಟುಕೊಂಡು ರೈತರಿಗೆ ಸಿಗಬೇಕಾಗಿದ್ದ ಸಾಲ ಮನ್ನಾ ಪ್ರಯೋಜನ ಜಿಲ್ಲೆಯ ಅರ್ಧದಷ್ಟು ರೈತರಿಗೆ ಇನ್ನೂ ಬಿಡುಗಡೆ ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿರುತ್ತದೆ. ರಾಜ್ಯದ ಆಡಳಿತ ಇದೀಗ ಮತ್ತೆ ನಿಮ್ಮ ತೆಕ್ಕೆಗೆ ಬಂದಿದೆ. ದಯವಿಟ್ಟು ಈ ವಿಚಾರದ ಬಗ್ಗೆ ಗಮನಹರಿಸಿ ಹಿಂದಿನ ಕುಮಾರಸ್ವಾಮಿ ಸರಕಾರ ಸಾಲ ಮನ್ನಾ ಪ್ರಕ್ರಿಯೆಗಾಗಿ ವಿಧಿಸಿದ್ದ ಅವೈಜ್ಞಾನಿಕ ಷರತ್ತುಗಳನ್ನು ಕೂಡಲೇ ರದ್ದುಪಡಿಸಿ ನೀವು ಈಗಾಗಲೇ ಕೊಟ್ಟ ಭರವಸೆಯಂತೆ ಸಾಲ ಮನ್ನಾ ಸೌಲಭ್ಯ ಇನ್ನೂ ದೊರಕದ ಜಿಲ್ಲೆಯ ರೈತರ ರೂ. 1 ಲಕ್ಷದವರೆಗಿನ ಕೃಷಿ ಸಾಲವನ್ನು ಈ ಕೂಡಲೇ ಮನ್ನಾ ಮಾಡುವ ಆದೇಶವನ್ನು ಹೊರಡಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿ ಕೋರಿಕೆ.

- ಚಿಮ್ಮಣಮಾಡ ಎಸ್. ಕೃಷ್ಣ ಗಣಪತಿ, ಅಧ್ಯಕ್ಷರು, ಪ್ರಾ.ಕೃ.ಪತ್ತಿನ ಸಹಕಾರ ಸಂಘ, ಬಾಳೆಲೆ.