ಅದು ಮಧ್ಯ ಪ್ರದೇಶದ ಮೊರನ ಜಿಲ್ಲೆಯ ಒಂದು ಪುಟ್ಟ ಹಳ್ಳಿ. ಸರಕಾರಿ ಅಧಿಕಾರಿಗಳನ್ನು ಹೊತ್ತ ಆ ವಾಹನ ಕರಾವಳಿ ದಾಟಿ ಚಂಬಲ್ ಕಣಿವೆಯತ್ತ ಹೊರಡುತ್ತಿದ್ದಂತೆ ಡ್ರೈವರ್ ಕೈ ಕಾಲು ಸಣ್ಣಗೆ ನಡುಗತೊಡಗಿತ್ತು. ಆ ಗುಡ್ಡ ಚಂಬಲ್ ನದಿಯ ಬಯಲಿನಲ್ಲಿದೆ. ಅಲ್ಲಿದ್ದಾರೆ ಚಂಬಲ್ ಕಣಿವೆಯ ಪರಮ ಪಾತಕಿಗಳು. ಚಂಬಲಿನಲ್ಲಿ ನೀರಿಗಿಂತ ಹೆಚ್ಚಿಗೆ ರಕ್ತ ಹರಿಸಿದವರು. ಆ ನರಾಧಮರ ಅಡ್ಡೆಯಾಗಿದ್ದು, ಬೇರೆ ಯಾವುದೂ ಅಲ್ಲ, ಈ ಭೂತ ನಾಥನ ಈ ಪಾಳು ಮಂದಿರ. ಚಂಬಲ್ ನದಿಯ ಕಲರವಕ್ಕಿಂತ ಇಲ್ಲಿ ಗುಂಡಿನ ಮೊರೆತವೇ ಹೆಚ್ಚು ಪ್ರತಿಧ್ವನಿಸುತ್ತದೆ.
ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ಈ ಮೂರು ರಾಜ್ಯದ ಪೊಲೀಸರಿಗೆ ಸೆಡ್ಡು ಹೊಡೆದು ತಮ್ಮದೇ ಪಾತಕ ಜಗತ್ತನ್ನು ಕಟ್ಟಿ ಆಳುತಿದ್ದರು ಚಂಬಲ್ ಡಕಾಯಿತರು. ಪುರಾತತ್ತ್ವ ಸರ್ವೇಕ್ಷಣಾ ಅಧಿಕಾರಿ ಕೆ. ಕೆ. ಮೊಹಮದ್ ಅವರು ಪಾಳು ಬಿದ್ದ ದೇವಾಲಯ ಹುಡುಕುತ್ತ ಇಟ್ಟಿಗೆ ಗೂಡಿನಂತ ಬಿಸಿ ಕಾರುತಿದ್ದ ಚಂಬಲ್ ಕಣಿವೆಯೊಳಗೆ ಕಾಲಿಟ್ಟರು . ಒಂದು ಕಾಲದಲ್ಲಿ ಅಲ್ಲಿ ಡಕಾಯಿತ ಮಾನ್ಸಿಂಗ್ ಓಡಾಡಿಕೊಂಡಿದ್ದನಂತೆ. ಐವತ್ತೈದರಲ್ಲಿ ಸತ್ತ ಅವನ ಕತೆ ಇಂದಿಗೂ ಅಲ್ಲಿ ಚಾಲ್ತಿಯಲ್ಲಿದೆ. ಅವನು ಸಾವಿರದ ನೂರಾ ಹನ್ನೆರಡು ರಾಬರಿ, ಮತ್ತು ನೂರಾಎಂಬತೈದು ಕೊಲೆಯನ್ನು ಮಾಡಿದ್ದನ್ನೆನ್ನಲಾಗಿದೆ. ಅವನ ಕೈಯಲ್ಲಿ ಸತ್ತವರಲ್ಲಿ ಮೂವತ್ತೆರಡು ಜನ ಪೊಲೀಸ್ ಅಧಿಕಾರಿಗಳು, ತ್ತೊಂಭತೈದರ ದಶಕದಲ್ಲಿ ಚಂಬಲ್ ಕಣಿವೆ, ನಿರ್ಭಯ್ ಸಿಂಗ್ ಗುರ್ಜರ್ ಎನ್ನುವ ಮೋಸ್ಟ್ಟ್ ವಾಂಟೆಡ್ ಡಕಾಯಿತನ ಕೈಯಲ್ಲಿತ್ತು. ಈ ಡಕಾಯಿತರ ಭಯದಿಂದಾಗಿ ಆ ಮಂದಿರದ ಪರಿಸರಕ್ಕೆ ಯಾರ ನೆರಳೂ ಬೀಳುತ್ತಿರಲಿಲ್ಲ . ಈ ನಿರ್ಭಯ್ ಸಿಂಗ್ ಗುರ್ಜರ್ ತಂಡ ಠಿಕಾಣಿ ಹೂಡುತಿದ್ದುದ್ದು, ಇದೆ ಭೂತನಾಥನ ಪಾಳು ಗುಡಿಯಲ್ಲಿ, ಡಾಕುಗಳ ರಕ್ತ ಚರಿತೆಯ ಕಥೆ ಕೇಳಿ ಜೀವ ಭಯದಿಂದ ಮೊಹಮದ್ ವಾಪಾಸ್ ಅರ್ಧಕ್ಕೆ ಬಂದುಬಿಟ್ಟರು . ವಾಪಾಸ್ ಬಂದವರೇ ಪ್ರಾಚ್ಯ ಸ್ಮಾರಕಗಳ ಹಳೆಯ ಫೈಲ್‍ಗಳನ್ನ ಹೊರತೆಗೆದರು, ಧೂಳು ಕೊಡವಿ ಬೆಳಕಿಗೆ ಹಿಡಿದಾಗ ಅವರ ಬಳಿ ತೆರೆದುಕೊಂಡಿದ್ದೆ, ಭಾರತದ ಅಂಗಾಕೋರವಟ್ ಎರಡನೇ ಎಲ್ಲೋರಾ ಎಂದೇ ಕರೆಯಲ್ಪಡುವ ಬಟೇಶ್ವರ ದೇವಾಲಯ ಸಮೂಹ. ಸರಿ ಸುಮಾರು ಇಪ್ಪತ್ತನಾಲಕ್ಕು ಎಕರೆ ವಿಸ್ತೀರ್ಣ ಅಲ್ಲಿ ಇರುವ ಕಲ್ಲು ಚಪ್ಪಡಿಗಳ ಆಗದ ರಾಶಿ. ಬೆಲೆ ಕಟ್ಟಲಾಗದ ಶಿಲ್ಪ್ಪ ವೈವಿಧ್ಯಗಳು. ಕಣ್ಣು ಹಾಯಿಸಿದ್ದವು. ದೂರಕ್ಕೂ ಹರಡಿರುವ ಅವಶೇಷಗಳ ಕೊಂಪೆ. ಅದರ ಮೇಲೆ ಶತಮಾನಗಳಿಂದ ಮಡುಗಟ್ಟಿದ ಮಣ್ಣು ಅದರ ಮೇಲೆ ಬೆಳೆದಿರುವ ದಟ್ಟನೆಯ ಕಾಡು. ಈ ಅವಶೇಷಗಳ ಮೇಲೆ ಬೀಡಿ ಸುಡಲು ಕೂರುವ ಕೊಂಕರ್ ಡಾಕುಗಳು ಇವರ ಬೆನ್ನಿನಲ್ಲಿ ಹೊಳೆಯುವ ಬಂದೂಕಿನ ನಳಿಕೆ. ಹೇಗಾದರೂ ಮಾಡಿ ಈ ಡಾಕೂಗಳನ್ನೂ ಅಲ್ಲಿಂದ ತೆರವು ಗೊಳಿಸಿ ಈ ಮಂದಿರವನ್ನು ಮತ್ತೆ ಜೋಡಿಸಬೇಕು, ಮೊಹಮದ್ ತಡಮಾಡಲಿಲ್ಲ, ಡಾಕುಗಳ ಮನ ಒಲಿಸಲು ಕೆಲವು ಮಧ್ಯವರ್ತಿಗಳನ್ನು ಸಂಪರ್ಕಿಸಿದರು. ಸರಕಾರಿ ಅಧಿಕಾರಿಗಳ ಹೆಸರು ಕೇಳಿದ ತಕ್ಷಣ ಉರಿದು ಬೀಳುವ ನಿರ್ಭಯ್ ಸಿಂಗ್ ಗುರ್ಜರ್, ಯಾವ ಕಾರಣಕ್ಕೂ ಅವರನ್ನು ಈ ಪ್ರದೇಶಕ್ಕೆ ಬಿಡುವುದಿಲ್ಲ ಎಂದು ಗುಡುಗಿದ. ಕೊನೆಗೆ ಅವನ ಮನ ಒಲಿಸಿ ಬೆಳ್ಳಿಗ್ಗೆ ಒಂಭತ್ತರಿಂದ ಸಂಜೆ ಆರರವರೆಗೆ ಕೆಲಸ ಮಾಡಲು ಮೊಹಮದ್ ಅವರು ಅನುಮತಿ ಗಿಟ್ಟಿಸಿಕೊಂಡರು. ಮೊಹಮದ್ ತಮ್ಮ ತಂಡದವರೊಂದಿಗೆ ಬಟೇಶ್ವರಕ್ಕೆ ಬಂದ ಮೇಲೆ ಅವರಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದವು. ಅಲ್ಲಿಗೆ ಭೇಟಿ ನೀಡಿದ ಮೇಲೆ ಅವರಿಗೆ ಡಾಕುಗಳ ಮೇಲೆ ಇದ್ದ ಭಯ, ತಿರಸ್ಕಾರ, ಪ್ರೀತಿ ಅಭಿಮಾನಕ್ಕೆ ತಿರುಗಿತ್ತು. ಅಕಸ್ಮಾತ್ ಈ ಡಾಕುಗಳು ಇಲ್ಲದೆ ಹೋಗಿರುತ್ತಿದ್ದರೆ, ಆ ಅಮೂಲ್ಯ ಕಲಾಕೃತಿ ಗಳು ಲಂಡನ್ನಿನ ಮ್ಯೂಸಿಯಂ ಸೇರುತ್ತಿದ್ದವೋ ಏನೋ ಇಲ್ಲಿಂದ ಬೆಲೆ ಕಟ್ಟಲಾಗದ ಕಲ್ಲನ್ನೂ ಒಡೆದು ಜನರು ಮನೆ ಕಟ್ಟಿಕೊಳ್ಳುತಿದ್ದರೇನೋ, ಆರನೇ ಶತಮಾನದಲ್ಲಿ ಈ ಪರಿಸರದಲ್ಲಿ ಗುರುಕುಲ ಇತ್ತಂತೆ. ಇಲ್ಲಿ ಕಲಿತು ಹೋದ ರಾಜಕುವರರೆಲ್ಲ ತಮ್ಮ ನೆನಪಿಗೆ ಇಲ್ಲಿ ಒಂದು ಗುಡಿಗಳನ್ನ ಕಟ್ಟಿ ಹೋಗುತ್ತಿದ್ದರಂತೆ. ಹೀಗೆ ಈ ಪರಿಸರದಲ್ಲಿ ನಿರ್ಮಾಣವಾಗಿದ್ದ ಗುಡಿಗಳು ಇನ್ನೂರಕ್ಕೂ ಅಧಿಕ. ಆದರೆ ಇಲ್ಲಿಗೆ ಕೇಂದ್ರ ಸ್ಥಾನದಲ್ಲಿ ಇದ್ದವನು ಬೂತೇಶ್ವರ. ಈಗ ಅದೇ ಹೆಸರು ಬಟೇಶ್ವರ ಎಂದು ಬದಲಾಗಿದೆ. ಈ ಬಟೇಶ್ವರನ ಸುತ್ತ ಏಕಾದಶ ರುದ್ರನ ಗುಡಿಗಳಿದ್ದವಂತೆ, ಮೊಹಮದ್ ಎಲ್ಲಿ ಕಾಲಿಡುವಾಗ ಅವು ಎಲ್ಲವೂ ಮಣ್ಣಿನಲ್ಲಿ ಹೂತು ಚದುರಿ ಹೋಗಿದ್ದವು. ನಳಂದ ತಕ್ಷನ ಶಿಲೆಗಳು ಆಕ್ರಮಣಕಾರರ ಅಟ್ಟಹಾಸಕ್ಕೆ ನಲುಗಿದಂತೆ , ಈ ಆರನೇ ಶತಮಾನದ ದೇವಾಲಯವು ಧ್ವಂಸಗೊಂಡಿತ್ತು. ಬಳಿಕ ಜನರು ಈ ಪ್ರದೇಶಕ್ಕೆ ಬರುವುದನ್ನೇ ಬಿಟ್ಟರು. ಒಂದೆರಡು ಪ್ರಕೃತಿ ವಿಕೋಪಗಳು ಇಲ್ಲಿ ಕಲ್ಲಿನ ರಾಶಿಗಳು ಮಣ್ಣಲ್ಲಿ ಬೆರೆಸಿಬಿಟ್ಟವು. ಅದರ ಮೇಲೆ ಕಾಡು ಬೆಳೆದು ಬಿಟ್ಟಿತ್ತು. ಅಲ್ಲಿ ಬೀಡು ಬಿಟ್ಟವರು ಚಂಬಲ್ ಕಣಿವೆಯ ಡಕಾಯಿತರು, ಈ ಡಕಾಯಿತರು ಸರಿಯಿದ್ದ ಒಂದೆರಡು ಮಂದಿರಗಳಲ್ಲಿ ಪೂಜೆ ಸಲ್ಲಿಸಿ ಅಲ್ಲಿದ್ದ ಹನುಮಂತನ ಮೂರ್ತಿಗೆ ಕೈಮುಗಿದೇ ಬೆಳಿಗ್ಗೆ ತಮ್ಮ ಕೆಲಸಕ್ಕೆ ತೆರಳುತ್ತಿದ್ದರು, ಅಂದರೆ ಕೊಲೆ ಸುಲಿಗೆಗೆ ಹೊರಡುತಿದ್ದರಂತೆ. ಲೂಟಿಯಾದ ಮೊತ್ತವನ್ನು ತಂದು ಇದೇ ಹನುಮಂತನ ಮೂರ್ತಿಯ ಮುಂದೆ ಸಮನಾಗಿ ಹಂಚಿಕೊಳ್ಳುತಿದ್ದರಂತೆ. ಕೆ. ಕೆ . ಮೊಹಮದ್ ಅವರು ಈ ಅವಶೇಷಗಳ ಮೇಲೆ ನಿಂತು ಅಸಾಮಾನ್ಯ ಕಾರ್ಯ ಒಂದನ್ನು ಸಾಧಿಸುವ ಪ್ರತಿಜ್ಞೆ ತೊಟ್ಟರು. ಅದೇ ಬಟೇಶ್ವರ ಕ್ಷೇತ್ರದ ಪುನರುತ್ಥಾನ.
ದೇವಾಲಯ ಎಂದ ಮೇಲೆ ರಾಜದ್ವಾರ ಇರಲೇ ಬೇಕು. ಹುಡುಕಿದಾಗ ಅದರ ಕಂಬದ ಆಧಾರ ಶಿಲೆಗಳು ಸಿಕ್ಕಿದವು. ಮತ್ತೆ ಹುಡುಕಿದಾಗ ಕಂಬಗಳು ಸಿಕ್ಕಿದವು, ಅದನ್ನು ನಿಲ್ಲಿಸಿ ರಾಜದ್ವಾರ ಸಿದ್ಧವಾಯಿತು. ಚದುರಿಬಿದ್ದ ಆಟಿಕೆಗಳನ್ನು ತನ್ಮಯತೆಯಿಂದ ಜೋಡಿಸುವ ಮಗುವಿನಂತೆ, ಚಂಬಲ್ ಕಣಿವೆಯ ರಣಬಿಸಿಲಿನಲ್ಲಿ ಮೊಹಮದ್ ಇನ್ನೂರು ಗುಡಿಗಳನ್ನು ಗುರುತಿಸಿ, ಅದ್ರ ಅರಿಸ್ಟಾನ, ಕಂಬ, ಬಿತ್ತಿ, ಕೋಷ್ಠ, ಪಂಜ, ಶಿಖರ, ಸ್ತೂಪಿ, ಎಂದೆಲ್ಲ ಹುಡುಕಿಸಿ ಅವಕ್ಕೆ ಸೀಸದ ಕಡ್ಡಿಯಲ್ಲಿ ಸಂಖ್ಯೆಯನ್ನು ಬರೆಯಿಸಿದರು. ಕೆಲವು ತುಂಡುಗಳು ಸಿಗದಿದ್ದಾಗ ಮಣ್ಣನ್ನು ಅಗೆದರು.
ಸಮತಲ ಗೊಳಿಸಿದರು, ಕಲ್ಲುಗಳು ಮೊಹಮದ್ ಜೊತೆ ಮಾತನಾಡಲು ತೊಡಗಿದವು, ಶತಮಾನಗಳ ಅವಧಿಗೆ ಮೂಕ ಸಾಕ್ಷಿಯಾಗಿದ್ದಂತಹ ಕಲ್ಲುಗಳ ಅಳಲು ಕೇಳಲು ಯಾರೋ ಒಬ್ಬ ಬಂದಿದ್ದ. ಡಕಾಯಿತರು ತಮಿಳುನಾಡಿನ ಈ ಮುಸಲ್ಮಾನ ಅಧಿಕಾರಿ ಮಾಡಿದ ಕೆಲಸ ಕಂಡು ದಂಗು ಬಡಿದು ಹೋದರು. ಸದಾ ಬೆನ್ನಿಗೆ ಅಂಟಿರುತಿದ್ದ ಬಂದೂಕುಗಳನ್ನು ಸೊಂಟಕ್ಕೆ ಬಿಗಿದಿದ್ದ ಕಾಡತೂಸಿನ ಪಟ್ಟಿಗಳನ್ನ ಕಳಚಿ ಪಕ್ಕಕ್ಕಿರಿಸಿ ಮೊಹಮದ್ ಅವರ ಜೊತೆ ಕಲ್ಲು ಜೋಡಿಸುವ ಕಾರ್ಯಕ್ಕೆ ಈ ಡಕಾಯಿತರು ಮುಂದಾದರು.
ನೋಡ ನೋಡುತ್ತಿದ್ದಂತೆ ನಲವತ್ತು ಮಂದಿರಗಳು ಒಂದು ಸುಂದರ ಪುಸ್ಕರಿಣಿ ಅಲ್ಲಿ ನಿರ್ಮಾಣಗೊಂಡಿತು. ಭಾರತೀಯ ಪ್ರಾಚ್ಯ ವಸ್ತು ಸರ್ವೇಕ್ಷಣಾ ಸಮಿತಿಯ ಈ ಕಾರ್ಯವನ್ನು ಕಂಡು ಹಲವು ದೇಶಗಳೇ ಮೂಗಿನ ಮೇಲೆ ಬೆರಳಿಟ್ಟವು. ಒಂದು ದಿನ ಮೊಹಮದ್ ಅವರು ದೇವಾಲಯದ ಆವರಣದಲ್ಲಿ ಯಾರೋ ಒಬ್ಬ ಬೀಡಿ ಸೇದೋದನ್ನು ಕಂಡು ಅವನನ್ನು ತರಾಟೆಗೆ ತೆಗೆದುಕೊಂಡರು. ಅವನು ಮತ್ಯಾರು ಅಲ್ಲ, ಕುಖ್ಯಾತ ಡಕಾಯಿತ ನಿರ್ಭಯ್‍ಸಿಂಗ್ ಗುಜ್ಜರ್ ಮೊಹಮದ್ ಮತ್ತು ನಿರ್ಭಯ್‍ಸಿಂಗ್ ಭೇಟಿ ಅದೇ ಮೊದಲ ಬಾರಿಯಾಗಿತ್ತು .
ಉತ್ತರ ಪ್ರದೇಶದ ಛಕ್ಕ್ರಾ ನಗರದ ನಲವತ್ತು ಗ್ರಾಮಗಳಲ್ಲಿ ಈತ ಪರ್ಯಾಯ ಸರಕಾರ ನಡೆಸುತ್ತಿದ್ದ. ಈತನ ಮೇಲೆ ಉತ್ತರ ಪ್ರದೇಶದಲ್ಲಿ ಇನ್ನೂರ ಐದು ಕ್ರಿಮಿನಲ್ ಪ್ರಕರಣಗಳಿದ್ದವು, ಮೊಹಮದ್ ಎದೆ ಜಲ್ ಎಂದಿತು, ಬಾಯಿಯ ಪಸೆ ಆರಿತು. ಅವರಿಗೆ ಜೀವ ಹೋಗಬಹುದು ಎನ್ನುವ ಭಯಕ್ಕಿಂತಲೂ, ಈ ಡಕಾಯಿತರು ಎಲ್ಲಿ ತಲೆ ಕೆಟ್ಟು ದೇವಾಲಯ ನಿರ್ಮಾಣದ ಕೆಲಸವನ್ನು ನಿಲ್ಲಿಸಿ ಬಿಡುವರೊ ಎನ್ನುವ ಆತಂಕ ಹೆಚ್ಚಾಗಿತ್ತು.
ನಿರ್ಭಯ್‍ಸಿಂಗ್ ಗುಜ್ಜರ್ ಮರುದಿನ ಬಂದವನೇ ಮೊಹಮದ್ ಅನ್ನು ಭೇಟಿಯಾದ. ನೀವು ಮಾಡುತ್ತಿರುವ ಕೆಲಸ ದೇವರ ಕೆಲಸ, ನನ್ನ ತಂಡ ಬೇರೆ ಕಡೆಗೆ ಸ್ಥಳಾಂತರಗೊಳ್ಳುತ್ತೆ. ನೀವೇನು ಭಯಪಡಬೇಡಿ ಎಂದು ಆಶ್ವಾಸನೆ ನೀಡಿದ. ಮೊಹಮದ್ ಅವರು ಕೂಡ ಗುಲ್ಜಾರ್ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸ್ಮಾರಕಗಳು ಇಂದಿಗೂ ಸುರಕ್ಷಿತವಾಗಿ ಉಳಿದಿದೆ ಎಂದರೆ ಅದು ನಿಮ್ಮಿಂದಲೇ, ಇದನ್ನು ಕಟ್ಟಿದವರು ಗುಲ್ಜಾರ ಪ್ರತೀಹಾರ ರಾಜರು. ಈಗ ಇದನ್ನು ಕಾಪಾಡಿದವರು ನೀವು, ನಿಮಗೂ ಅವರಿಗೂ ಏನೋ ರಕ್ತ ಸಂಬಂಧ ಇರಬೇಕು ಎಂದರಂತೆ ಮೊಹಮದ್. ಈ ಮಾತು ಕೇಳಿ ಆ ಡಕಾಯಿತರು ಭಾವೋದ್ವೇಗಕ್ಕೆ ಒಳಗಾದರಂತೆ ಅಲ್ಲಿಂದ ಸ್ವಲ್ಪ ದಿನದಲ್ಲಿ ಉತ್ತರ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ ರಾಜ್ಯದ ಪೊಲೀಸರು ಸೇರಿ ಟಾಸ್ಕ್‍ಫೋರ್ಸ್ ತಯಾರಿಸಿದರು. ಎರಡು ಸಾವಿರದ ಐದು ನವೆಂಬರ್ ಎರಡರಂದು, ಮಿತವದಲ್ಲಿ ನಿರ್ಭಯ್‍ಸಿಂಗ್, ಗುಲ್ಜಾರ್ ಟಾಸ್ಕ್‍ಫೋರ್ಸ್ ಗುಂಡಿಗೆ ಬಲಿಯಾದ. ಅಲ್ಲಿಗೆ ಚಂಬಲ್ ಕಣಿವೆ ರಕ್ತಸಿಕ್ತ ಪುಟಗಳಿಗೆ ತಾರ್ಕಿಕ ಅಂತ್ಯ ದೊರೆಯಿತು.
ಆ ಬಳಿಕ ಅಲ್ಲಿ ಡಕಾಯಿತರಿಗಿಂತಲೂ ಒಂದು ದೊಡ್ಡ ಸಮಸ್ಯೆ ಹುಟ್ಟಿಕೊಂಡಿತು. ಡಕಾಯಿತರನ್ನು ತಮ್ಮ ಸ್ವಾರ್ಥಕೆ ಬಡಿದು ಹಾಕಿದ ರಾಜಕಾರಣಿಗಳು, ಚಂಬಲ್ ಕಣಿವೆಯಲ್ಲಿ ಅಕ್ರಮ ಗಣಿಗಾರಿಕೆ ಶುರುಹಚ್ಚಿ ಕೊಂಡರು. ಅವರು ಸಿಡಿಸುತಿದ್ದ ಸ್ಫೋಟಕಕ್ಕೆ ಮೊಹಮದ್ ಕಟ್ಟಿ ನಿಲ್ಲಿಸಿದ್ದ ಗುಡಿ ಗೋಪುರಗಳು ಮತ್ತೆ ಊರುಳತೊಡಗಿದವು. ಈ ನಾಲಾಯ್ಕಿಗಳಿಗಿಂತ ಆ ಡಕಾಯಿತರು ಎಷ್ಟೋ ವಾಸಿ ಅಂತ ಮೊಹಮದ್ ಅವರಿಗೆ ಅನಿಸತೊಡಗಿತು. ಸಂಬಂಧ ಪಟ್ಟ ಇಲಾಖೆಗಳಿಗೆಲ್ಲ ಮನವಿ ಕೊಟ್ಟಾಯಿತು. ಆದರೆ ಕಲ್ಲು ಒಡೆಯುವ ಖದೀಮರ ಅಟ್ಟಹಾಸ ತಗ್ಗಲಿಲ್ಲ. ಆಗಲೇ ಅನಿವಾರ್ಯವಾಗಿ ಮೊಹಮದ್ ಅವರು ಒಂದು ಪತ್ರವನ್ನು ಬರೆದರು. ಆ ಪತ್ರದಲ್ಲಿ ಅಂದಿನ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ವಾಣ್‍ರನ್ನು ಗಝನಿ ಮತ್ತು ಗೋರಿಗೆ ಹೋಲಿಸಿ ಕಟುವಾಗಿ ನಿಂದಿಸಿದ್ದರು ಮೊಹಮದ್, ಆ ಪತ್ರವನ್ನು ತಲುಪಬೇಕಾದ ಕಡೆಗೆ ತಲುಪಿಸಿ ಬಿಟ್ಟರು.
ಆ ಪತ್ರದಲ್ಲಿ ಇದ್ದ ವಿಳಾಸ
ಶ್ರೀ, ಸುದರ್ಶನ್ ಜಿ.
ಸರಸಂಘ ಚಾಲಕ್
ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಾಗಪುರ
ಚವಾಣ್ ಸರಕಾರದ ಬುಡಕ್ಕೆ ಬತ್ತಿ ಇಟ್ಟಿದ್ದರು ಮೊಹಮದ್. ಈ ಒಂದು ಕಾಗದ ಅಲ್ಲಿ ಬೆಂಕಿ ಹಚ್ಚಿ ಬಿಟ್ಟಿತು, ದಿನಪತ್ರಿಕೆಗಳ ಪಾಲಿಗೆ ಎ. ಎಸ್.ಐ. ಅಧಿಕಾರಿಯೊಬ್ಬರು ಸರಸಂಘ ಚಾಲಕರ ಸಹಾಯ ಯಾಚಿಸಿದ್ದು ಬಹಳ ದೊಡ್ಡ ಸುದ್ದಿಯಾಗಿತ್ತು. ಸರಸಂಘ ಚಾಲಕರಾದ ಸುದರ್ಶನ್ ಜಿ ಪತ್ರ ಸಿಕ್ಕಿದ ಇಪ್ಪತ್ತನಾಲಕ್ಕು ಗಂಟೆಗಳ ಒಳಗೆ ಕೇಂದ್ರ ಸರಕಾರದ ಸಂಸ್ಕೃತ ಸಚಿವೆ ಅಂಬಿಕಾ ಸೋನಿಯವರನ್ನು ಸಂಪರ್ಕಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕೇಂದ್ರದ ಖಡಕ್ ಆದೇಶ ಮತ್ತೆ ಮಧ್ಯಪ್ರದೇಶದ ಬಿ. ಜೆ. ಪಿ. ಸರಕಾರದ ನೆತ್ತಿಯ ಮೇಲೆ ಬಡಿದಂತಿತ್ತು. ಪ್ರಾಚ್ಯವಸ್ತು ಸಂರಕ್ಷಣೆ ಕೇಂದ್ರದ ಜವಾಬ್ದಾರಿಯಾದ ಕಾರಣ ರಾಜ್ಯ ಸರಕಾರ ಅದರ ಬಗ್ಗೆ ಕಾಳಜಿ ತೋರದೆ ಹೋದರೆ, ಕೇಂದ್ರ ಸರಕಾರಕ್ಕೆ ಮದ್ಯ ಪ್ರವೇಶಿಸುವ ಎಲ್ಲ ಹಕ್ಕು ಇದೆಯೆಂದು ಅದು ಹೇಳಿತು. ಹೀಗಾಗಿ ರಾಜ್ಯ ಸರಕಾರ ಬಟೇಶ್ವರದ ದೇಗುಲ ಸಂಕೀರ್ಣದ ರಕ್ಷಣೆಗೆ ಮುಂದಾಯಿತು. ಡಕಾಯಿತರನ್ನು ಪ್ರೀತಿಯಿಂದಲೇ ಗೆದ್ದು ಅವರ ಪ್ರೀತಿಯಿಂದಲೇ ಉಂಡೆದ್ದ ಮೊಹಮದ್ ಅವರಿಗೆ, ಈ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಊಸರವಳ್ಳಿಗಳ ಜೊತೆ ಸೆಣಸಾಡುವುದು ಎಷ್ಟು ಅಪಾಯಕಾರಿ ಎನ್ನುವುದು ಆ ನಂತರ ಅರಿವಾಯಿತು. ಬಲಾಢ್ಯ ರಾಜಕೀಯ ಪುಡಾರಿಗಳ ಕೃಪಾಕಟಾಕ್ಷ ಹೊಂದಿದ್ದ ಅಕ್ರಮ ಗಣಿ ಲೂಟಿಕೋರರು ಬಂದೂಕು ಹಿಡಿದು ಪೊಲೀಸರ ಜೊತೆ ಯುದ್ಧಕ್ಕೆ ನಿಂತರು. ಅಪಾರ ಪ್ರಮಾಣದ ಸಾವು-ನೋವುಗಳು ನಡೆದುಹೋಯಿತು. ಬಳಿಕ ಚಂಬಲ್ ಕಣಿವೆಯ ಒಡಲು ಅದುರುವುದು ತಗ್ಗಿತು, ಗಣಿಗಳು ಶಾಂತವಾದವು. ಆದರೆ, ತಮ್ಮ ತಂಡಕ್ಕೆ ಕೊಟ್ಟ ಧೋಕಾದ ಆಕ್ರೋಶ ಮಾತ್ರ ಗಣಿ ಧಣಿಗಳನ್ನು ಸುಮ್ಮನಿರಲು ಬಿಡಲಿಲ್ಲ. ದಕ್ಷ ಐ.ಪಿ.ಎಸ್. ಅಧಿಕಾರಿ ಮೊರೆನಾ, ಜಿಲ್ಲಾ ಎಸ್.ಪಿ. ನರೇಂದ್ರ ಕುಮಾರ್ ಅವರನ್ನ ಟ್ರಾ ್ಯಕ್ಟರ್ ಅಡಿಗೆ ಹಾಕಿ ಕೊಂದೇ ಬಿಟ್ಟರು ಪಾಪಿಗಳು. ಆ ಬಟೇಶ್ವರನ ದಯದಿಂದ ಮೊಹಮದ್ ಮಾತ್ರ ಬದುಕಿ ಉಳಿದರು. ಈಗ ಮಧ್ಯ ಪ್ರದೇಶದ ಪ್ರವಾಸೋದ್ಯಮದ ಹೆಗ್ಗುರುತುಗಳಲ್ಲಿ ಬಟೇಶ್ವರವು ಒಂದಾಗಿದೆ. ರತಿ ಮತ್ತು ಕಾಮದೇವರನ್ನ ಕಾಲಡಿಯಲ್ಲಿ ತುಳಿದಿಟ್ಟುಕೊಂಡ ಹನುಮಂತನ ಏಕ ಮಾತ್ರ ವಿಗ್ರಹ ಬಟೇಶ್ವರದಲ್ಲಿದೆ. ಆದರೆ ಅವನ ಕಾಲಬುಡದಲ್ಲಿಯೇ ಬಟ್ಟೆ ಹಾಸಿ ಕುಳಿತು ಅವನನ್ನೇ ಸಾಕ್ಷಿಯಾಗಿಟ್ಟು ಕೊಂಡು ಲೂಟಿಯ ದುಡ್ಡನ್ನು ಹಂಚಿಕೊಳ್ಳುತಿದ್ದ ಡಕಾಯಿತರು ಮಾತ್ರ ಈಗ ನಿರ್ನಾಮವಾಗಿದ್ದಾರೆ. ಬಟೇಶ್ವರದಲ್ಲಿ ಖಜುರಾಹೋಗಿಂತ ಮುನ್ನೂರು ವರ್ಷ ಹಳೆಯದಾದ ಇನ್ನೂ ಎಂಬತ್ತು ಮಂದಿರವಿದೆ. ಅದರ ಅವಶೇಷ ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದೆ. ಇಲ್ಲಿಗೆ ಅವಶೇಷಗಳ ಅಡಿಯಿಂದ ಎದ್ದ ಅರವತ್ತು ದೇವಸ್ಥಾನ ಶಿಖರದ ಕಥೆ ಹೇಳಿದ್ದಾಯಿತು. ಆದರೆ ಈ ಬೃಹತ್ ಯೋಜನೆಗೆ ಮೊಹಮದ್ ವ್ಯಯಿಸಿದ್ದು ಬರಿ ಮೂರು ಕೋಟಿ ಮಾತ್ರ . ಆದರೆ ದೇವಾಲಯ ಕೆಡವಿದ ಮೊಹಮದ್ ಗಝನಿ , ಮತ್ತು ಗೋರಿಗಳ ಬಗ್ಗೆ ಇತಿಹಾಸದಲ್ಲಿ ಕೇಳಿದ್ದ ನಮಗೆ ಕೆ. ಕೆ. ಮೊಹಮದ್ ಎನ್ನುವ ಅಸಾಮಾನ್ಯ ಭಾರತೀಯನ ಬಗ್ಗೆ ತಿಳಿದುಕೊಂಡಾಗ ಹೆಮ್ಮೆ ಅನಿಸುತ್ತದೆ. ಸಮರಾಂಗಣ ಸೂತ್ರಧಾರ, ಕಾಶ್ಯಪ ಶಿಲ್ಪಿ ಸ್ತೋತ್ರಗಳನ್ನೂ ಮಣಿ ಪೋಣಿಸಿದಂತೆ ಉಚ್ಚರಿಸಿ ಆಧಾರ ಸಹಿತ ಮಾತನಾಡುವ ಕೆ.ಕೆ. ಮೊಹಮದ್ ಅವರಿಗೆ ಆ ಬಟೇಶ್ವರದ ಹನುಮಂತನು ಆಶೀರ್ವದಿಸಿ ಅವರ ಹೆಸರನ್ನು ಉತ್ತುಂಗಕ್ಕೇರಿಸಲಿ.
?ಪುತ್ತರಿರ ಪಪ್ಪು ತಿಮ್ಮಯ್ಯ,
ಚೆಟ್ಟಳ್ಳಿ