ವೀರಾಜಪೇಟೆ, ಡಿ. 23: ಶಂಸುಲ್ ಉಲಮಾ ಅನಾಥ ಮತ್ತು ಬಡ ಬಾಲಕಿಯರ ವಸತಿ ನಿಲಯದ ನಾಲ್ಕು ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ನೆರವೇರಿತು. ನಿರ್ಗತಿಕ ಮಕ್ಕಳ ವಿವಾಹ ಕಾರ್ಯಕ್ಕೆ ದಾನಿಗಳು ಹಾಗೂ ಗಣ್ಯರು ಸಾಕ್ಷಿಯಾದರು.
ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ಸಭಾಂಗಣದಲ್ಲಿ ಧಾರ್ಮಿಕ ಪಂಡಿತ ಪಾಣಕ್ಕಾಡ್ ಸಯ್ಯದ್ ಶಾಹೀರ್ ಅಲಿ ಶಿಹಾಬ್ ತಂಗಳ್ ನೇತೃತ್ವದಲ್ಲಿ ಕಾರ್ಯ ನೆರವೇರಿತು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಬಡ ನಿರ್ಗತಿಕ ಮಕ್ಕಳಿಗೆ ಬೌದ್ಧಿಕ ಹಾಗೂ ಧಾರ್ಮಿಕ ಉನ್ನತ ಶಿಕ್ಷಣ ನೀಡುವ ಮೂಲಕ ಭವಿಷ್ಯ ರೂಪಿಸಿ, ಈ ಹಿಂದೆ 16 ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಿ, ಈಗ 4 ಹೆಣ್ಣು ಮಕ್ಕಳಿಗೆ ವಿವಾಹ ನೆರವೇರಿಸಿದ್ದಾರೆ ಎಂದರು. ಇಂತಹ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.
ಕೇರಳದ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಮಹಮ್ಮದ್ ಕುಂಞ ಮಾತನಾಡಿ ನಾಲ್ಕು ಹೆಣ್ಣು ಮಕ್ಕಳನ್ನು ಯಾವುದೇ ಫಲಾಪೇಕ್ಷೆ ಬಯಸದೇ ವಿವಾಹವಾಗಲು ಮುಂದಾಗಿರುವ ವರರು ಹಾಗೂ ಕುಟುಂಬ ವರ್ಗದವರಿಗೆ ಶುಭ ಕೋರಿದರು.
ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ ಮಾತನಾಡಿ, ಈ ಕೇಂದ್ರದಲ್ಲಿ ಇದೀಗ 80ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ದೊಂದಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕಡು ಬಡ ವಿದ್ಯಾರ್ಥಿ ಗಳಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣದ ವ್ಯವಸ್ಥೆಯು ಮಾಡಲಾಗಿದೆ. ಇದುವರೆಗೂ ಇಪ್ಪತ್ತು ಹೆಣ್ಣು ಮಕ್ಕಳಿಗೆ ವಿವಾಹ ಕಾರ್ಯ ಮಾಡಲಾಗಿದೆ. ಮಕ್ಕಳಿಗೆ ದಾನಿಗಳ ಸಹಕಾರವೂ ಇದೆ. ಇದರಿಂದ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಅತಿಥಿಗಳಾಗಿ ಪಿ.ಪಿ ಉಮ್ಮರ್ ಉಸ್ತಾದ್ ಕೊಯ್ಯಾಡ್, ಜಿಲ್ಲಾ ಖಾಝಿ ಎಂ.ಎಂ. ಅಬ್ದುಲ್ಲಾ ಫೈಜಿ, ಮಾಜಿ ಶಾಸಕ ಇಬ್ರಾಹಿಂ ಮಾಸ್ಟರ್, ಲಾಯಲ್ ವಲ್ರ್ಡ್ ಮ್ಯಾನೇಜಿಂಗ್ ಡೈರೆಕ್ಟರ್ ಮೊಯ್ದಿನ್ ಹಾಜಿ, ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಕಾರ್ಯದರ್ಶಿ ಟಿ.ಸಿ. ಸಿರಾಜ್, ಹೈಕೋರ್ಟ್ ವಕೀಲ ಹಿದಾಯತ್, ಆಲ್ ಇಂಡಿಯಾ ಕೆಎಂಸಿಸಿ ಅಧ್ಯಕ್ಷ ನೌಷಾದ್, ಸ್ವಿಸ್ ಗೋಲ್ಡ್ ಮ್ಯಾನೇಜಿಂಗ್ ಡೈರೆಕ್ಟರ್ ನಿಸಾರ್, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಪ್ರಮುಖರಾದ ಮುಸ್ತಾಫ್ ಹಾಜಿ ಮಂದೂರ್, ಬೆಂಗಳೂರಿನ ಅಶ್ರಫ್, ಮೂಸ ಉಸ್ತಾದ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.